ನವದೆಹಲಿ: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಐಪಿಎಲ್‌ನಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಭಾನುವಾರ ನಡೆಯುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದ್ದು, ರೋಹಿತ್‌ಗೆ ತ್ರಿವಳಿ ಸ್ಪಿನ್ನರ್‌ಗಳಿಂದ ಸವಾಲು ಎದುರಾಗುವ ಸಾಧ್ಯತೆಯಿದೆ.
ಒಂದೆಡೆ ರೋಹಿತ್ ಫಾರ್ಮ್ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದರೆ, ಇನ್ನೊಂದು ಕಡೆ ಯಶಸ್ಸಿನ ಅಲೆಯಲ್ಲಿರುವ ಡೆಲ್ಲಿ ತಂಡದ ತಾರೆ ಕೆ.ಎಲ್.ರಾಹುಲ್ ಅವರನ್ನು ಕಟ್ಟಿಹಾಕಲು ಮುಂಬೈ ತಂಡವು ವೇಗದ ಅಸ್ತ್ರ ಜಸ್‌ಪ್ರೀತ್ ಬೂಮ್ರಾ ಅವರನ್ನು ನೆಚ್ಚಿಕೊಂಡಿದೆ.
ಹಾಲಿ ಟೂರ್ನಿಯಲ್ಲಿ ಮೊದಲ 25 ಪಂದ್ಯಗಳ ನಂತರ ಏಕೈಕ ಅಜೇಯ ತಂಡವಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯವನ್ನೂ ಗೆಲ್ಲುವ ನೆಚ್ಚಿನ ತಂಡವೆನಿಸಿದೆ. ಡೆಲ್ಲಿ ಯಶಸ್ಸಿನ ಓಟದಲ್ಲಿದ್ದರೆ, ಮುಂಬೈ ತಂಡ ಆರು ಪಂದ್ಯಗಳಲ್ಲಿ ಐದನೇ ಸೋಲನ್ನು ತಪ್ಪಿಸಿಕೊಳ್ಳುವ ಒತ್ತಡದಲ್ಲಿದೆ. 2024ರ ಆವೃತ್ತಿಯಲ್ಲಿ ಮುಂಬೈ ತಂಡಕ್ಕೆ ಕೊನೆಯ ಸ್ಥಾನದ ಮುಖಭಂಗ ಎದುರಾಗಿತ್ತು.
ನಾಯಕ ಹಾರ್ದಿಕ್ ಪಾಂಡ್ಯ ಮಾತ್ರ ಆ ಮುಂಬೈ ಇಂಡಿಯನ್ಸ್ ಪರ ಸ್ಥಿರ ಆಲ್‌ರೌಂಡ್ ಪ್ರದರ್ಶನ ನೀಡಿದ್ದಾರೆ. ತಂಡದ ಬ್ಯಾಟರ್ ರೋಹಿತ್ ಶರ್ಮಾ ಅವರಿಗೆ ಈ ಪಂದ್ಯದಲ್ಲಿ ನಾಯಕ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿಯ ಸ್ಪಿನ್ನರ್‌ಗಳನ್ನು ನಿಭಾಯಿಸುವ ಸವಾಲು ಇದೆ. ಅನುಭವಿ ಕುಲದೀಪ್ ಯಾದವ್ ಅವರಿಗೆ ವಿಪ್ರಜ್ ನಿಗಮ್ ಅವರಿಂದ ಉತ್ತಮ ಬೆಂಬಲ ದೊರೆಯುತ್ತಿದೆ. ಕುಲದೀಪ್ ಎಂಟು ವಿಕೆಟ್ ಕಬಳಿಸಿದ್ದಾರೆ.
ತಿಲಕ್ ವರ್ಮಾ, ಉಪನಾಯಕ ಸೂರ್ಯಕುಮಾರ್ ಯಾದವ್ ಅವರೂ ಸ್ಥಿರ ಪ್ರದರ್ಶನ ನೀಡದಿರುವುದು ಮುಂಬೈ ಕಳವಳಕ್ಕೆ ಕಾರಣವಾಗಿದೆ.
ಡೆಲ್ಲಿ ತಂಡಕ್ಕೆ ಜೇಕ್ ಫ್ರೇಸರ್ ಮೆಕ್‌ಗುರ್ಕ್ ವೈಫಲ್ಯ ಅಂಥ ಪರಿಣಾಮ ಬೀರಿಲ್ಲ. ಅಮೋಘ ಆಟವಾಡುತ್ತಿರುವ ಕೆ.ಎಲ್. ರಾಹುಲ್ ಅವರನ್ನು ಬೂಮ್ರಾ ಅವರು ನಿಯಂತ್ರಿಸುವರೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಪಂದ್ಯ ಆರಂಭ: ರಾತ್ರಿ 7.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.