ADVERTISEMENT

ಡೆಲ್ಲಿ ತಂಡದ ಐವರು ಸಿಬ್ಬಂದಿಗೆ ಕೋವಿಡ್: ಬುಧವಾರದ ಪಂದ್ಯ ಮುಂಬೈಗೆ ಸ್ಥಳಾಂತರ

ರಾಯಿಟರ್ಸ್
Published 19 ಏಪ್ರಿಲ್ 2022, 10:30 IST
Last Updated 19 ಏಪ್ರಿಲ್ 2022, 10:30 IST
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು – ಪಿಟಿಐ ಸಂಗ್ರಹ ಚಿತ್ರ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು – ಪಿಟಿಐ ಸಂಗ್ರಹ ಚಿತ್ರ   

ಮುಂಬೈ: ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಬುಧವಾರ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಕ್ರಿಕೆಟ್ ಪಂದ್ಯವನ್ನು ಕೋವಿಡ್ ಭೀತಿಯ ಕಾರಣ ಪುಣೆಯಿಂದ ಮುಂಬೈಗೆ ಸ್ಥಳಾಂತರಿಸಲಾಗುವುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.

ಡೆಲ್ಲಿ ತಂಡದ ಆಟಗಾರ, ಸಿಬ್ಬಂದಿ ಸೇರಿದಂತೆ ಐವರಲ್ಲಿ ಕೋವಿಡ್ ದೃಢಪಟ್ಟಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಂಡದ ನಾಲ್ವರು ನೆರವು ಸಿಬ್ಬಂದಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದ ಬುಧವಾರದ ಪಂದ್ಯಕ್ಕೆ ಪುಣೆಗೆ ಪ್ರಯಾಣಿಸುವ ತಂಡದ ಆಟಗಾರರ ಯೋಜನೆಗೆ ಅಡ್ಡಿಯಾಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ಡೆಲ್ಲಿ ತಂಡದ ಫಿಸಿಯೊ ಪ್ಯಾಟ್ರಿಕ್ ಫರ್ಹಾರ್ಟ್‌ ಅವರಿಗೆ ಕೋವಿಡ್ ದೃಢಪಟ್ಟಿತ್ತು. ಬಳಿಕ ಅವರು ಪ್ರತ್ಯೇಕವಾಸಕ್ಕೆ ಒಳಗಾಗಿದ್ದರು.

‘ಒಂದು ವೇಳೆ ಯಾರಲ್ಲಾದರೂ ಸೋಂಕು ಪತ್ತೆಯಾಗದೇ ಇದ್ದು, ಮುಚ್ಚಿದ ವಾತಾವರಣದಲ್ಲಿ ಹೆಚ್ಚು ದೂರ ಬಸ್‌ನಲ್ಲಿ ಪ್ರಯಾಣ ಮಾಡುವ ವೇಳೆ ಸಾಂಕ್ರಾಮಿಕ ಇತರರಿಗೂ ಹರಡಿ ಹೆಚ್ಚಿನ ಸಮಸ್ಯೆ ಆಗುವುದನ್ನು ತಪ್ಪಿಸಲು ಪಂದ್ಯದ ಸ್ಥಳವನ್ನು ಬದಲಾಯಿಸಲಾಗಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೋಂಕು ದೃಢಪಟ್ಟವರನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಅವರೆಲ್ಲ ಎರಡು ಬಾರಿ ನೆಗೆಟಿವ್ ವರದಿ ಬಂದ ಬಳಿಕ ತಂಡದ ಬಯೋಬಬಲ್ ಸೇರಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.