ADVERTISEMENT

ವಿಶ್ವಕಪ್‌ ಫೈನಲ್‌: ಅಂಪೈರ್‌ಗಳಾಗಿ ಎರಾಸ್ಮಸ್‌–ಧರ್ಮಸೇನ

ಪಿಟಿಐ
Published 12 ಜುಲೈ 2019, 20:00 IST
Last Updated 12 ಜುಲೈ 2019, 20:00 IST
ಮರಯಸ್‌ ಎರಾಸ್ಮಸ್‌
ಮರಯಸ್‌ ಎರಾಸ್ಮಸ್‌   

ಲಂಡನ್‌: ಶ್ರೀಲಂಕಾದ ಕುಮಾರ ಧರ್ಮಸೇನ ಮತ್ತು ದಕ್ಷಿಣ ಆಫ್ರಿಕದ ಮರಯಸ್‌ ಎರಾಸ್ಮಸ್‌ ಅವರನ್ನು ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ ಭಾನುವಾರ ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿರುವ ವಿಶ್ವಕಪ್‌ ಫೈನಲ್‌ಗೆ ಆಂಪೈರ್‌ಗಳಾಗಿದ್ದಾರೆ.

ಆಸ್ಟ್ರೇಲಿಯಾದ ರಾಡ್‌ ಟಕ್ಕರ್‌, ಮೂರನೇ ಅಂಪೈರ್‌ ಆಗಿದ್ದು, ಪಾಕಿಸ್ತಾನದ ಅಲೀಮ್‌ ಧರ್‌ ಅವರು ನಾಲ್ಕನೇ ಅಂಪೈರ್ ಆಗಿದ್ದಾರೆ ಎಂದು ಐಸಿಸಿ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ. ರಂಜನ್‌ ಮದುಗಲೆ ಮ್ಯಾಚ್‌ ರೆಫ್ರಿಯಾಗಿದ್ದಾರೆ. ಈ ಐದೂ ಮಂದಿ ಆಸ್ಟ್ರೇಲಿಯಾ– ಇಂಗ್ಲೆಂಡ್‌ ಸೆಮಿಫೈನಲ್‌ ಪಂದ್ಯಕ್ಕೂ ನಿಯೋಜಿತರಾಗಿದ್ದರು.

ರಾಯ್‌ಗೆ ದಂಡ: ಎಜ್‌ಬಾಸ್ಟನ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಧರ್ಮಸೇನ, ಇಂಗ್ಲೆಂಡ್‌ನ ಜೇಸನ್‌ ರಾಯ್‌ (65 ಎಸೆತಗಳಲ್ಲಿ 85) ಅವರಿಗೆ ನೀಡಿದ ಕಾಟ್‌ ಬಿಹೈಂಡ್‌ ತೀರ್ಪು ವಿವಾದಕ್ಕೆ ಕಾರಣವಾಗಿತ್ತು. ಔಟ್‌ ತೀರ್ಪು ಕೊಡುವ ಮುನ್ನ ಅವರಿಗೆ ಕೊಂಚ ಹಿಂಜರಿಕೆಯಿದ್ದಂತೆ ಕಂಡಿತ್ತು.

ADVERTISEMENT

ತಮ್ಮ ಬ್ಯಾಟ್‌ ಅಥವಾ ಗ್ಲೌಸ್‌ಗೆ ಚೆಂಡು ತಾಗಿಲ್ಲವೆಂಬ ಕಾರಣಕ್ಕೆ ರಾಯ್‌ ಸಿಡಿಮಿಡಿಗೊಂಡಿದ್ದರು. ಅವರಿಗೆ ನಂತರ ಪಂದ್ಯದ ಶೇ 30ರಷ್ಟು ಸಂಭಾವನೆಯನ್ನು ದಂಡವಾಗಿ ವಿಧಿಸಲಾಗಿತ್ತು. ಜೊತೆಗೆ ರಾಯ್‌ ಅವರ ಶಿಸ್ತು ದಾಖಲಾತಿಯಲ್ಲಿ ಎರಡು ಡಿಮೆರಿಟ್ ಅಂಕಗಳನ್ನು ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.