ADVERTISEMENT

SL vs NZ ಕ್ರಿಕೆಟ್‌ ಟೆಸ್ಟ್‌ ಪಂದ್ಯ: ಚಾಂದಿಮಲ್ ಶತಕ, ಭರ್ಜರಿ ಮೊತ್ತದತ್ತ ಲಂಕಾ

ಏಜೆನ್ಸೀಸ್
Published 26 ಸೆಪ್ಟೆಂಬರ್ 2024, 14:08 IST
Last Updated 26 ಸೆಪ್ಟೆಂಬರ್ 2024, 14:08 IST
<div class="paragraphs"><p>ದಿನೇಶ್ ಚಂಡಿಮಲ್</p></div>

ದಿನೇಶ್ ಚಂಡಿಮಲ್

   

–ರಾಯಿಟರ್ಸ್ ಚಿತ್ರ

ಗಾಲೆ: ದಿನೇಶ್ ಚಾಂದಿಮಲ್ ಅವರ ಶತಕದ ನೆರವಿನಿಂದ ಶ್ರೀಲಂಕಾ ತಂಡ ಗುರುವಾರ ನ್ಯೂಜಿಲೆಂಡ್ ವಿರುದ್ಧ ಆರಂಭವಾದ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ 3 ವಿಕೆಟ್‌ಗೆ 306 ರನ್‌ಗಳೊಡನೆ ಭರ್ಜರಿಯಾಗಿ ದಿನದಾಟ ಮುಗಿಸಿತು.

ADVERTISEMENT

ಚಹ ವಿರಾಮದ ನಂತರ ಎಡಗೈ ಆಟಗಾರ ಚಾಂದಿಮಲ್, ವೇಗಿ ಗ್ಲೆನ್‌ ಫಿಲಿಪ್ಸ್‌ ಬೌಲಿಂಗ್‌ನಲ್ಲಿ ಬೌಲ್ಡ್‌ ಆದರು. ಅವರು 116 ರನ್‌ ಬಾರಿಸಿದ್ದು, ಇದರಲ್ಲಿ 15 ಬೌಂಡರಿಗಳಿದ್ದವು. ಪ್ರಕೃತಿ ಸೌಂದರ್ಯದ ಈ ಕ್ರೀಡಾಂಗಣದಲ್ಲಿ ಇದು ಅವರ ಆರನೇ ಶತಕ ಮತ್ತು ಒಟ್ಟಾರೆ ಟೆಸ್ಟ್‌ಗಳಲ್ಲಿ 16ನೇ ಶತಕವಾಗಿದೆ.

ಅರ್ಧ ಶತಕ ಗಳಿಸಿ ಅಜೇಯರಾಗುಳಿದಿರುವ ಏಂಜೆಲೊ ಮ್ಯಾಥ್ಯೂಸ್‌ (78) ಮತ್ತು ಕಮಿಂದು ಮೆಂಡಿಸ್‌ (51) ಅವರು ಶುಕ್ರವಾರ ಆಟ ಮುಂದುವರಿಸುವರು.

25 ವರ್ಷ ವಯಸ್ಸಿನ ಕಮಿಂದು ಅವರಿಗೆ ಇದು ವಿಶ್ವ ದಾಖಲೆಯ ಎಂಟನೇ ನಿರಂತರ ಅರ್ಧ ಶತಕವಾಗಿದೆ. ಎರಡು ವರ್ಷಗಳ ಹಿಂದೆ ಇದೇ ಕ್ರೀಡಾಂಗಣದಲ್ಲಿ ಅವರು ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು.

ಮ್ಯಾಥ್ಯೂಸ್ ಅವರು ಗಾಲೆ ಕ್ರೀಡಾಂಗಣದಲ್ಲಿ ಎರಡು ಸಹಸ್ರ ರನ್ ಪೂರೈಸಿದ ಮೈಲಿಗಲ್ಲನೂ ತಲುಪಿದರು. ಜೋ ರೂಟ್ ಮತ್ತು ಗ್ರಹಾಂ ಗೂಚ್‌ ಮಾತ್ರ ಇಲ್ಲಿ ಆ ಸಾಧನೆ ಮಾಡಿದ್ದಾರೆ.

ದಿಮುತ್‌ ಕರುಣಾರತ್ನೆ (46) ಜೊತೆ ಅವರು ಎರಡನೇ ವಿಕೆಟ್‌ಗೆ 122 ರನ್ ಜೊತೆಯಾಟದಲ್ಲಿ ಭಾಗಿಯಾದರು. ಸಂವಹನದ ಕೊರತೆಯಿಂದ ರನ್‌ಔಟ್‌ ಕರುಣಾರತ್ನೆ ಮುಖ ಸಿಂಡರಿಸಿಕೊಂಡು ಅಸಮಾಧಾನದಿಂದ ಪೆವಿಲಿಯನ್‌ಗೆ ಮರಳಿದರು.

ಇತ್ತೀಚೆಗೆ ನಿಧನರಾದ ನ್ಯೂಜಿಲೆಂಡ್‌ ತಂಡದ ಮಾಜಿ ಮ್ಯಾನೇಜರ್ ಇಯಾನ್ ಟೇಲರ್‌ ಅವರ ಗೌರವಾರ್ಥ ಆ ತಂಡದ ಆಟಗಾರರು ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಕಣಕ್ಕಿಳಿದರು.

ಸ್ಕೋರುಗಳು:

ಮೊದಲ ಇನಿಂಗ್ಸ್:

ಶ್ರೀಲಂಕಾ: 90 ಓವರುಗಳಲ್ಲಿ 3 ವಿಕೆಟ್‌ಗೆ 306 (ದಿಮುತ್‌ ಕರುಣಾರತ್ನೆ 46, ದಿನೇಶ್ ಚಾಂದಿಮಲ್ 116, ಏಂಜೆಲೊ ಮ್ಯಾಥ್ಯೂಸ್ ಔಟಾಗದೇ 78, ಕಮಿಂದು ಮೆಂಡಿಸ್‌ ಔಟಾಗದೇ 51; ಗ್ಲೆನ್‌ ಫಿಲಿಪ್ಸ್‌ 33ಕ್ಕೆ1) ವಿರುದ್ಧ ನ್ಯೂಜಿಲೆಂಡ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.