ಸಹ ಆಟಗಾರರ ಜೊತೆ ಡೌಗ್ ಬ್ರೇಸ್‌ವೆಲ್
ಚಿತ್ರ ಕೃಪೆ: @Kiwiscricketfan
ಹೊಸ ವರ್ಷಕ್ಕೆ ಇನ್ನೆರಡು ದಿನಗಳು ಬಾಕಿ ಇರುವಂತೆ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಲ್‌ರೌಂಡರ್ ಡೌಗ್ ಬ್ರೇಸ್‌ವೆಲ್ ಅವರು ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
35 ವರ್ಷದ ಡೌಗ್ ಬ್ರೇಸ್‌ವೆಲ್ ಅವರು, ನ್ಯೂಜಿಲೆಂಡ್ ತಂಡದ ಪರ 2011 ರಿಂದ 2023 ರವರೆಗೆ 28 ಟೆಸ್ಟ್, 21 ಏಕದಿನ ಮತ್ತು 20 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಅವರು ಕಳೆದ 2 ವರ್ಷಗಳಿಂದ ತಂಡದಿಂದ ದೂರ ಉಳಿದಿದ್ದರು.
ಬ್ರೇಸ್‌ವೆಲ್ ಅವರು ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 74 ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ. ತಮ್ಮ ವೃತ್ತಿಜೀವನದ ಮೂರನೇ ಟೆಸ್ಟ್ ಪಂದ್ಯದಲ್ಲಿ ಹೋಬಾರ್ಟ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಆ ಪಂದ್ಯದ ಕೊನೆಯ ಇನಿಂಗ್ಸ್‌ನಲ್ಲಿ 6/40 ಪಡೆಯುವ ಮೂಲಕ ನ್ಯೂಜಿಲೆಂಡ್ ತಂಡದ 7 ರನ್‌ಗಳ ರೋಚಕ ಗೆಲುವಿಗೆ ಕಾರಣರಾಗಿದ್ದರು.
ಈ ಗೆಲುವಿನ ಬಳಿಕ ನ್ಯೂಜಿಲೆಂಡ್ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಯಾವುದೇ ಗೆಲುವು ದಾಖಲಿಸಿಲ್ಲ ಎಂಬುದು ಗಮನಾರ್ಹ ಸಂಗತಿ.
ಬ್ರೇಸ್‌ವೆಲ್ ಅವರು ನ್ಯೂಜಿಲೆಂಡ್ ಪರ ವೈಟ್ ಬಾಲ್ ಕ್ರಿಕೆಟ್‌ನಲ್ಲಿ 46 ವಿಕೆಟ್ ಪಡೆದಿದ್ದಾರೆ. 2023 ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯ ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿದೆ. ಪಕ್ಕೆಲುಬಿನ ಗಾಯದಿಂದಾಗಿ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನ ಕೊನೆಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಬ್ರೇಸ್‌ವೆಲ್ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅಂತರರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ತಮಗೆ ದೊರೆತ ಅವಕಾಶಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿಜೀವನದುದ್ದಕ್ಕೂ ಬೆಂಬಲ ನೀಡಿದ ತಂಡದ ಸದಸ್ಯರು, ತರಬೇತುದಾರರು ಮತ್ತು ನಿರ್ವಹಣಾ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.