ದಕ್ಷಿಣ ವಲಯ ತಂಡದ ಬ್ಯಾಟರ್ ಎನ್. ಜಗದೀಶನ್
ಪಿಟಿಐ
ಬೆಂಗಳೂರು: ಕೇರಳದ ಮೊಹಮ್ಮದ್ ಅಜರುದ್ದೀನ್ ನಾಯಕತ್ವದ ದಕ್ಷಿಣ ವಲಯ ಮತ್ತು ‘ಐಪಿಎಲ್ ಚಾಂಪಿಯನ್’ ಆರ್‌ಸಿಬಿಯ ನಾಯಕ ರಜತ್ ಪಾಟೀದಾರ್ ನೇತೃತ್ವದ ಕೇಂದ್ರ ವಲಯ ತಂಡಗಳು ಈ ಬಾರಿಯ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
ನಗರದ ಹೊರವಲಯದಲ್ಲಿ ಸಿಂಗಹಳ್ಳಿಯಲ್ಲಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಮುಕ್ತಾಯವಾದ ಎರಡೂ ಸೆಮಿಫೈನಲ್‌ಗಳು ಡ್ರಾನಲ್ಲಿ ಮುಕ್ತಾಯವಾದವು.
ಉತ್ತರ ವಲಯದ ಎದುರು ಮೊದಲ ಇನಿಂಗ್ಸ್‌ನಲ್ಲಿ 175 ರನ್ ಮುನ್ನಡೆ ಗಳಿಸಿದ ದಕ್ಷಿಣ ವಲಯ ತಂಡವು ಫೈನಲ್‌ಗೆ ಲಗ್ಗೆ ಹಾಕಿತು. ಶನಿವಾರ ದಿನದಾಟದ ಮುಕ್ತಾಯಕ್ಕೆ ಉತ್ತರ ವಲಯವು ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗಳಿಗೆ 278 ರನ್ ಗಳಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ತಂಡವು ಪೇರಿಸಿದ್ದ 536 ರನ್‌ಗಳ ಮೊತ್ತವನ್ನು ಚುಕ್ತಾ ಮಾಡಲು ಉತ್ತರಕ್ಕೆ ಇನ್ನೂ 259 ರನ್‌ಗಳ ಅಗತ್ಯವಿತ್ತು. ಶತಕ ಬಾರಿಸಿದ್ದ ಶುಭಂ ಖಜೂರಿಯಾ ಕ್ರೀಸ್‌ನಲ್ಲಿದ್ದರು. ಅವರೂ ಸೇರಿದಂತೆ ಐದು ವಿಕೆಟ್‌ಗಳು ಇದ್ದವು. ಅದರಿಂದಾಗಿ ಕೊನೆಯ ದಿನದಾಟದಲ್ಲಿ ಎಚ್ಚರಿಕೆಯಿಂದ ಆಡಿ ಮುನ್ನಡೆ ಸಾಧಿಸುವ ಉತ್ತರ ವಲಯದ ಯೋಜನೆಗೆ ದಕ್ಷಿಣ ವಲಯ ಬೌಲರ್‌ಗಳು ಅಡ್ಡಗಾಲು ಹಾಕಿದರು. ಶಾಟ್ ಪಿಚ್, ಸ್ವಿಂಗ್ ಮತ್ತು ನಿಧಾನಗತಿಯ ನೇರ ಎಸೆತಗಳನ್ನು ಪ್ರಯೋಗಿಸಿದ ಬೌಲರ್‌ಗಳು ಬ್ಯಾಟರ್‌ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.
ಭಾನುವಾರ ಬೆಳಿಗ್ಗೆ ಆಟ ಆರಂಭವಾಗಿ ಸ್ಚಲ್ಪ ಹೊತ್ತು ಕಳೆದಿತ್ತು. ಶುಭಂ ಖಜೂರಿಯಾ ನಾಲ್ಕು ಎಸೆತಗಳನ್ನು ಆಡಿದ್ದರು. ಅಷ್ಟರಲ್ಲಿಯೇ ವಾಸುಕಿ ಕೌಶಿಕ್ ಅವರ ಸ್ವಿಂಗ್ ಮೋಡಿಗೆ ಶುಭಂ ಕ್ಲೀನ್‌ಬೌಲ್ಡ್ ಆದರು.
ಸಾಹಿಲ್ ಲೂತ್ರಾ (19 ರನ್) ಮತ್ತು ಮಯಂಕ್ ದಾಗರ್ (31ರನ್) ಅವರು ಸ್ವಲ್ಪ ಹೊತ್ತು ಇನಿಂಗ್ಸ್‌ಗೆ ಬಲ ತುಂಬುವ ಪ್ರಯತ್ನ ಮಾಡಿದರು. ಆದರೆ ಇವರಿಬ್ಬರನ್ನೂ ಬಲಗೈ ಮಧ್ಯಮವೇಗಿ ನಿಧೀಶ್ ಅವರು ಹೆಡೆಮುರಿ ಕಟ್ಟಿದರು. ಇದರಿಂದಾಗಿ ಉತ್ತರ ವಲಯದ ಫೈನಲ್ ಕನಸು ಕಮರಿತು.
ಎರಡನೇ ಇನಿಂಗ್ಸ್ ಆರಂಭಿಸಿದ ದಕ್ಷಿಣ ವಲಯವು 24.4 ಓವರ್‌ಗಳಲ್ಲಿ 1 ವಿಕೆಟ್‌ಗೆ 95 ರನ್ ಗಳಿಸಿತು. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಜಗದೀಶನ್ (52; 69ಎ, 4X6) ಅವರು ಎರಡನೇಯದ್ದರಲ್ಲಿಯೂ ಅಜೇಯ ಅರ್ಧಶತಕ ಗಳಿಸಿದರು. ನಂತರ ಉಭಯ ತಂಡಗಳು ಚಹಾ ವಿರಾಮಕ್ಕೆ ಅರ್ಧ ಗಂಟೆಗೂ ಮುನ್ನ ಡ್ರಾಗೆ ಸಮ್ಮತಿಸಿದವು.
ಯಶಸ್ವಿ ಅರ್ಧಶತಕ: ಇನ್ನೊಂದು ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಕೇಂದ್ರ ವಲಯವು ಶನಿವಾರವೇ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿತ್ತು. ಕೊನೆಯ ದಿನದಾಟದಲ್ಲಿ ಎರಡನೇ ಇನಿಂಗ್ಸ್ ಆಡಿದ ಪಶ್ಚಿಮ ವಲಯವು 53.3 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 216 ರನ್ ಗಳಿಸಿತು. ಯಶಸ್ವಿ ಜೈಸ್ವಾಲ್ (64; 70ಎ, 4X3, 6X3) ಬಿರುಸಾದ ಅರ್ಧಶತಕ ಗಳಿಸಿದರು. ಶ್ರೇಯಸ್ ಅಯ್ಯರ್ 12 ರನ್ ಗಳಿಸಿದರು.
ಕೇಂದ್ರ ತಂಡದ ಸ್ಪಿನ್ನರ್ ಸಾರಾಂಶ್ ಜೈನ್ ಐದು ವಿಕೆಟ್ ಗಳಿಸಿದರು.
ಸಂಕ್ಷಿಪ್ತ ಸ್ಕೋರು:
ಸೆಮಿಫೈನಲ್ 1: ಮೊದಲ ಇನಿಂಗ್ಸ್: ದಕ್ಷಿಣ ವಲಯ: 169.2 ಓವರ್‌ಗಳಲ್ಲಿ 536. ಉತ್ತರ ವಲಯ: 100.1 ಓವರ್‌ಗಳಲ್ಲಿ 361 (ಶುಭಂ ಖಜೂರಿಯಾ 128 ಮಯಂಕ್ ದಾಗರ್ 31 ಅನ್ಷುಲ್ ಕಾಂಬೋಜ್ ಔಟಾಗದೇ 11 ನಿಧೀಶ್ 82ಕ್ಕೆ3 ಗುರ್ಜಪನೀತ್ ಸಿಂಗ್ 96ಕ್ಕೆ4 ವಿ. ಕೌಶಿಕ್ 61ಕ್ಕೆ1) ಎರಡನೇ ಇನಿಂಗ್ಸ್: ದಕ್ಷಿಣ ವಲಯ: 24.4 ಓವರ್‌ಗಳಲ್ಲಿ 1 ವಿಕೆಟ್‌ಗೆ 95 (ತನ್ಮಯ್ ಅಗರವಾಲ್ 13 ಎನ್. ಜಗದೀಶನ್ ಔಟಾಗದೇ 52 ದೇವದತ್ತ ಪಡಿಕ್ಕಲ್ ಔಟಾಗದೇ 16 ಅಕೀಬ್ ನಬಿ ಧಾರ್ 23ಕ್ಕೆ1)
ಫಲಿತಾಂಶ: ಡ್ರಾ (ದಕ್ಷಿಣ ವಲಯಕ್ಕೆ ಮೊದಲ ಇನಿಂಗ್ಸ್ ಮುನ್ನಡೆ–ಫೈನಲ್ ಪ್ರವೇಶ)
ಸೆಮಿಫೈನಲ್ 2: ಮೊದಲ ಇನಿಂಗ್ಸ್: ಪಶ್ಚಿಮ ವಲಯ: 108 ಓವರ್‌ಗಳಲ್ಲಿ 438. ಕೇಂದ್ರ ವಲಯ: 164.3 ಓವರ್‌ಗಳಲ್ಲಿ 600 (ಸಾರಾಂಶ್ ಜೈನ್ ಔಟಾಗದೇ 63 ದೀಪಕ್ ಚಾಹರ್ 33 ಯಶ್ ಠಾಕೂರ್ 21 ಹರ್ಷ ದುಬೆ 75 ಅರ್ಝನ್ ನಾಗವಸ್ವಾಲಾ 57ಕ್ಕೆ3 ಧರ್ಮೇಂದ್ರಸಿಂಹ ಜಡೇಜ 130ಕ್ಕೆ4) ಪಶ್ಚಿಮ ವಲಯ: 53.3 ಓವರ್‌ಗಳಲ್ಲಿ 8ಕ್ಕೆ216 (ಯಶಸ್ವಿ ಜೈಸ್ವಾಲ್ 64 ಆರ್ಯಾ ದೇಸಾಯಿ 35 ತನುಷ್ ಕೋಟ್ಯಾನ್ ಔಟಾಗದೇ 40 ಹರ್ಷ ದುಬೆ 96ಕ್ಕೆ3 ಸಾರಾಂಶ್ ಜೈನ್ 84ಕ್ಕೆ5)
ಫಲಿತಾಂಶ: ಡ್ರಾ. (ಕೇಂದ್ರ ವಲಯಕ್ಕೆ ಮೊದಲ ಇನಿಂಗ್ಸ್ ಮುನ್ನಡೆ–ಫೈನಲ್‌ಗೆ ಅರ್ಹತೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.