
ಬೆಂಗಳೂರಿನ ಬಿಸಿಸಿಐ ಸೆಂಟರ್ ಫಾರ್ ಎಕ್ಸೆಲೆನ್ಸ್ ಕ್ರೀಡಾಂಗಣದಲ್ಲಿಗುರುವಾರ ಆರಂಭವಾದ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಕೇಂದ್ರ ವಲಯ ತಂಡದ ಕುಮಾರ್ ಕಾರ್ತಿಕೇಯ ಹಾಗು ಸಾರಾಂಶ ಜೈನ್
ಪ್ರಜಾವಾಣಿ ಚಿತ್ರ : ಪ್ರಶಾಂತ್ ಎಚ್.ಜಿ.
ಬೆಂಗಳೂರು: ದುಲೀಪ್ ಟ್ರೋಫಿಯ ಕ್ವಾರ್ಟರ್‌ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳಲ್ಲಿ ಬ್ಯಾಟರ್‌ಗಳ ಸ್ವರ್ಗವಾಗಿದ್ದ ಪಿಚ್ ಫೈನಲ್‌ನಲ್ಲಿ ಬೌಲರ್‌ಗಳ ‘ಆಪ್ತಮಿತ್ರ’ನಂತೆ ವರ್ತಿಸಿತು. ಅದರ ಫಲವಾಗಿ ದಕ್ಷಿಣ ವಲಯ ತಂಡವು ಅಲ್ಪಮೊತ್ತಕ್ಕೆ ಕುಸಿಯಿತು.
ಆದರೆ ಟಾಸ್ ಗೆದ್ದ ಕೇಂದ್ರ ವಲಯ ತಂಡದ ನಾಯಕ ರಜತ್ ಪಾಟೀದಾರ್ ಮಾತ್ರ ಹಸಿರು ಹೊದ್ದ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿರುವ ಮೈದಾನದ ಪಿಚ್ ಮರ್ಮವನ್ನು ಚೆನ್ನಾಗಿ ಅರಿತು ಬೌಲಿಂಗ್ ಆಯ್ಕೆ ಮಾಡಿಕೊಂಡರು.
ತಮ್ಮ ನಾಯಕನ ನಿರೀಕ್ಷೆ ಈಡೇರಿಸಿದ ‘ಸ್ಪಿನ್ ಜೋಡಿ’ ಕುಮಾರ್ ಕಾರ್ತಿಕೇಯ (21–1–53–4) ಮತ್ತು ಸಾರಾಂಶ್ ಜೈನ್ (24–2–49–5) ಮೋಡಿಗೆ ದಕ್ಷಿಣ ವಲಯ ತಡಬಡಾಯಿಸಿತು.
ಗುರುವಾರ ಚಹಾ ವಿರಾಮದ ಹೊತ್ತಿಗೆ 149 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ಸೆಮಿಫೈನಲ್ ಪಂದ್ಯದಲ್ಲಿ 197 ರನ್ ಗಳಿಸಿದ್ದ ಎನ್. ಜಗದೀಶನ್ ಅವರ ಗೈರು ಹಾಜರಿ ತಂಡವನ್ನು ಕಾಡಿತು. ಜಗದೀಶನ್ ಭಾರತ ಎ ತಂಡದಲ್ಲಿ ಆಡಲು ತೆರಳಿದ್ದಾರೆ.
ಮಧ್ಯಾಹ್ನ ಇನಿಂಗ್ಸ್ ಆರಂಭಿಸಿದ ಕೇಂದ್ರ ತಂಡವು ವಿಕೆಟ್ ನಷ್ಟವಿಲ್ಲದೇ 19 ಓವರ್‌ಗಳಲ್ಲಿ 50 ರನ್ ಗಳಿಸಿತು. ದನೀಶ್ ಮಾಳೆವರ್ (ಬ್ಯಾಟಿಂಗ್ 28) ಮತ್ತು ಅಕ್ಷಯ್ ವಾಡಕರ್ (ಬ್ಯಾಟಿಂಗ್ 20) ಕ್ರೀಸ್‌ನಲ್ಲಿದ್ದಾರೆ.
ದಕ್ಷಿಣ ವಲಯಕ್ಕೆ ತನ್ಮಯ್ ಅಗರವಾಲ್ (31; 76ಎ, 4X3) ಮತ್ತು ಮೋಹಿತ್ ಕಾಳೆ (9; 50ಎ) ತಾಳ್ಮೆಯ ಆರಂಭ ನೀಡಿದರು. ಕಪ್ಪುಮೋಡಗಳು ಠಳಾಯಿಸುತ್ತಿದ್ದ ಆಗಸದ ಅಡಿ ಇಬ್ಬರೂ ಬ್ಯಾಟರ್‌ಗಳು 15.5 ಓವರ್‌ಗಳವರೆಗೆ ಕ್ರೀಸ್‌ನಲ್ಲಿ ಲಂಗರು ಹಾಕಿದ್ದರು. ಆದರೆ ಗಳಿಸಿದ್ದು ಮಾತ್ರ 27 ರನ್ ಮಾತ್ರ. ಆದರೆ 16ನೇ ಓವರ್‌ನಲ್ಲಿ ಸ್ಪಿನ್ ಬೌಲರ್ ಕಾರ್ತಿಕೆಯಗೆ ಚೆಂಡು ಕೊಟ್ಟ ರಜತ್ ಯೋಜನೆ ಸಫಲವಾಯಿತು. ಅದೇ ಓವರ್ ಕೊನೆಯ ಎಸೆತವನ್ನು ಆಡುವ ಭರದಲ್ಲಿ ಮೋಹಿತ್ ಅವರು ಕ್ಲೀನ್‌ಬೌಲ್ಡ್ ಆದರು.
ಕರ್ನಾಟಕದ ಉದಯೋನ್ಮುಖ ಪ್ರತಿಭೆ ಆರ್. ಸ್ಮರಣ್ (1; 19ಎ) ಅವರು ಲಯ ಕಂಡುಕೊಳ್ಳಲು ಪರದಾಡಿದರು. ಕಳೆದ ರಣಜಿ ಟೂರ್ನಿಯಲ್ಲಿ ಅಮೋಘವಾಗಿ ಆಡಿದ್ದರು. ಆದರೆ ಕುಮಾರ್ ಎಸೆತವನ್ನು ಸ್ಲಾಗ್ ಸ್ವೀಪ್ ಮಾಡಿದರು. ಆದರೆ ಬ್ಯಾಟ್ ಮೇಲಿನ ಅಂಚಿಗೆ ಬಡಿದ ಚೆಂಡು ಮೇಲಕ್ಕೆಗರಿತು. ಮಿಡ್‌ವಿಕೆಟ್‌ವರೆಗೂ ವೇಗವಾಗಿ ಓಡಿದ ಫೀಲ್ಡರ್ ಸಾರಾಂಶ್ ಕ್ಯಾಚ್ ಪಡೆದರು. ಕೆಲವೇ ನಿಮಿಷಗಳ ನಂತರ ಅನಗತ್ಯ ರನ್‌ಗಾಗಿ ಓಡಿದ ತನ್ಮಯ್ ಅವರನ್ನು ಫೀಲ್ಡರ್‌ಗಳಾದ ದನೀಶ್ ಮತ್ತು ಅಕ್ಷಯ್ ಸೇರಿ ರನ್‌ಔಟ್ ಮಾಡಿದರು.
ಇದರ ನಂತರ ರಿಕಿ ಭುಯ್ (15; 53ಎ), ಸಲ್ಮಾನ್ ನಿಜಾರ್ (24; 52ಎ) ಮತ್ತು ಅಂಕಿತ್ ಶರ್ಮಾ (20; 64ಎ) ಅವರನ್ನು ಬಿಟ್ಟರೆ ಉಳಿದವರಿಂದ ಗಟ್ಟಿ ಆಟ ಬರಲಿಲ್ಲ. ಒಂದು ಕಡೆ ಕುಮಾರ್ ಇನ್ನೊಂದು ಬದಿಯಲ್ಲಿ ಸಾರಾಂಶ್ ಕೈಚಳಕ ಮೇಲುಗೈ ಸಾಧಿಸಿತು. ಸೆಮಿಫೈನಲ್‌ನಲ್ಲಿ ಐದು ವಿಕೆಟ್ ಗೊಂಚಲು ಗಳಿಸಿದ್ದ ಸಾರಾಂಶ್ ಇಲ್ಲಿ ಮತ್ತೊಮ್ಮೆ ಐದು ವಿಕೆಟ್ ಪಡೆದು ಮಿಂಚಿದರು.
ಸಂಕ್ಷಿಪ್ತ ಸ್ಕೋರು:
ಮೊದಲ ಇನಿಂಗ್ಸ್: ದಕ್ಷಿಣ ವಲಯ: 63 ಓವರ್‌ಗಳಲ್ಲಿ 149 (ತನ್ಮಯ್ ಅಗರವಾಲ್ 31, ಸಲ್ಮಾನ್ ನಿಜಾರ್ 24, ಅಂಕಿತ್ ಶರ್ಮಾ 20, ಕುಮಾರ ಕಾರ್ತಿಕೇಯ 53ಕ್ಕೆ4, ಸಾರಾಂಶ್ ಜೈನ್ 49ಕ್ಕೆ5) ಕೇಂದ್ರ ವಲಯ: ದಾನೀಶ್ ಮಾಳೆವರ್ ಬ್ಯಾಟಿಂಗ್ 28, ಅಕ್ಷಯ್ ವಾಡಕರ್ ಬ್ಯಾಟಿಂಗ್ 20)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.