ADVERTISEMENT

38 ರನ್‌ಗಳಿಗೆ ಉರುಳಿದ ಐರ್ಲೆಂಡ್‌; ಇಂಗ್ಲೆಂಡ್‌ಗೆ ಗೆಲುವು

ಏಕೈಕ ಟೆಸ್ಟ್‌ಗೆ ನಾಟಕೀಯ ತಿರುವು

ರಾಯಿಟರ್ಸ್
Published 26 ಜುಲೈ 2019, 17:23 IST
Last Updated 26 ಜುಲೈ 2019, 17:23 IST
   

ಲಂಡನ್‌:ಇಂಗ್ಲೆಂಡ್‌ ತಂಡವನ್ನು ಸೋಲಿಸುವ ಮಹದಾಸೆ ಹೊತ್ತಿದ್ದ ಐರ್ಲೆಂಡ್‌ ತಂಡದ ಕನಸು ಬಲುಬೇಗ ನುಚ್ಚುನೂರಾಯಿತು. ಲಾರ್ಡ್ಸ್‌ನಲ್ಲಿ ನಡೆದ ಏಕೈಕ ಟೆಸ್ಟ್‌ನ ಮೂರನೇ ದಿನವಾದ ಶುಕ್ರವಾರ ನೆರೆಯ ರಾಷ್ಟ್ರವನ್ನು ಕೇವಲ 38 ರನ್ನಿಗೆ ಆಲೌಟ್‌ ಮಾಡಿದ ಇಂಗ್ಲೆಂಡ್‌ ಪಂದ್ಯವನ್ನು 143 ರನ್‌ಗಳ ಆಂತರದಿಂದ ಸುಲಭವಾಗಿ ಗೆದ್ದುಕೊಂಡಿತು.

ಎರಡನೇ ದಿನದ ಕೊನೆಗೆ 9 ವಿಕೆಟ್‌ಗೆ 303 ರನ್‌ ಗಳಿಸಿದ್ದ ಇಂಗ್ಲೆಂಡ್‌ ಶುಕ್ರವಾರ ಮೊದಲ ಎಸೆತದಲ್ಲೇ ಆಲೌಟ್‌ ಆಯಿತು. ಗೆಲ್ಲಲು 182 ರನ್‌ಗಳ ಗುರಿಹೊಂದಿದ್ದ ಐರ್ಲೆಂಡ್‌ ವೋಕ್ಸ್‌ (17ಕ್ಕೆ6) ಮತ್ತು ಬ್ರಾಡ್‌ (19ಕ್ಕೆ4) ದಾಳಿಗೆ 15.4 ಓವರ್‌ಗಳಲ್ಲೇ ಪತನಗೊಂಡಿತು.

ಓಪನರ್‌ ಜೆ.ಎ.ಮಕ್‌ಕೋಲಮ್‌ ಗಳಿಸಿದ್ದ 11 ರನ್‌ಗಳೇ ಅತ್ಯಧಿಕ ಮೊತ್ತ ಎನಿಸಿತು. ನೋಲಾಸ್‌ 11 ರನ್‌ ಗಳಿಸಿದ್ದ ತಂಡ ನಾಟಕೀಯ ಕುಸಿತ ಕಂಡಿತು.

ADVERTISEMENT

ಮೊದಲ ಇನಿಂಗ್ಸ್‌ನಲ್ಲಿ ಇಷ್ಟೊಂದು ಕಡಿಮೆ ಮೊತ್ತಕ್ಕೆ ಆಲೌಟ್‌ ಆದ ತಂಡ ಪಂದ್ಯ ಗೆಲ್ಲುತ್ತಿರುವುದು ಇದು ಎರಡನೇ ಬಾರಿ. 1907ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಲೀಡ್ಸ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 76 ರನ್‌ಗಳಿಗೆ ಕುಸಿದರೂ ಇಂಗ್ಲೆಂಡ್‌ ಪಂದ್ಯ ಗೆದ್ದಿತ್ತು.

ಇಂಗ್ಲೆಂಡ್‌ ಎರಡನೇ ಇನಿಂಗ್ಸ್‌ನಲ್ಲಿ, ‘ನೈಟ್‌ ವಾಚ್‌ಮನ್‌’ ಆಗಿ ಬಂದು ಅಮೂಲ್ಯ 92 ರನ್‌ಗಳಿಸಿದ್ದ ಎಡಗೈ ಸ್ಪಿನ್ನರ್‌ ಜಾಕ್‌ ಲೀಚ್‌ ಪಂದ್ಯದ ಆಟಗಾರ ಎನಿಸಿದರು.

ಸ್ಕೋರುಗಳು: ಇಂಗ್ಲೆಂಡ್‌: 85 ಮತ್ತು 303 (ಲೀಚ್‌ 92, ಜೇಸನ್‌ ರಾಯ್‌ 72); ಐರ್ಲೆಂಡ್‌: 207 ಮತ್ತು 38 (ವೋಕ್ಸ್‌ 17ಕ್ಕೆ6, ಬ್ರಾಡ್‌ 19ಕ್ಕೆ4).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.