ಲಂಡನ್: ಇಂಗ್ಲೆಂಡ್ ತಂಡದ ಭವಿಷ್ಯ ಮತ್ತು ವರ್ತಮಾನದ ತಾರೆಗಳಾದ ಹ್ಯಾರಿ ಬ್ರೂಕ್ ಹಾಗೂ ಜೋ ರೂಟ್ ಅವರು ‘ಬಾಝ್‌ಬಾಲ್’ ಆಟದ ಅನಾವರಣ ಮಾಡಿದರು. ಅದರೊಂದಿಗೆ ಟೆಸ್ಟ್ ಸರಣಿಯನ್ನು ತಮ್ಮ ಮಡಿಲಿಗೆ ಹಾಕಿಕೊಳ್ಳುವತ್ತ ದಾಪುಗಾಲಿಟ್ಟರು. ಆದರೆ ಭಾನುವಾರವೇ ಗೆಲುವಿನ ಸಂಭ್ರಮ ಆಚರಿಸುವ ಆತಿಥೇಯ ಬಳಗಕ್ಕೆ ಭಾರತದ ಬೌಲರ್‌ಗಳು ಅಡ್ಡಿಯಾದರು.
ದಿಟ್ಟತನ ಮತ್ತು ಛಲದ ಆಟವಾಡಿದ ಪ್ರವಾಸಿ ಬೌಲರ್‌ಗಳಿಂದಾಗಿ ಈ ಪಂದ್ಯ ಹಾಗೂ ಸರಣಿಯ ಕ್ಲೈಮ್ಯಾಕ್ಸ್ ಸೋಮವಾರಕ್ಕೆ ಮುಂದೂಡಲ್ಪಟ್ಟಿತು. ಸರಣಿಯನ್ನು 2–2ರಿಂದ ಸಮ ಮಾಡಿಕೊಳ್ಳುವ ಗಿಲ್ ಬಳಗದ ಅಸೆ ಇನ್ನೂ ‘ಚುಟುಕು ಜೀವ’ ಹಿಡಿದುಕೊಂಡಿದೆ. 374 ರನ್‌ಗಳ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ ತಂಡವು ಭಾನುವಾರ ದಿನದಾಟಕ್ಕೆ ಮಳೆ ಮತ್ತು ಮಂದಬೆಳಕಿನ ಕಾರಣದಿಂದ ತೆರೆ ಬೀಳುವ ಮುನ್ನ 76.2 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 339 ರನ್ ಗಳಿಸಿತು. ಗೆಲುವಿಗೆ ಇನ್ನೂ 35 ರನ್‌ಗಳು ಆತಿಥೇಯರಿಗೆ ಬೇಕು. ಪಂದ್ಯದಲ್ಲಿ ಇನ್ನೊಂದು ದಿನ ಬಾಕಿಯಿದೆ. ನಾಲ್ಕನೇ ದಿನದಾಟದ ಕೊನೆಯ ಹಂತದಲ್ಲಿ ದಿಟ್ಟ ಬೌಲಿಂಗ್ ಮಾಡಿದ ಭಾರತದ ಬೌಲರ್‌ಗಳೂ ಸೋಮವಾರ ಬೆಳಿಗ್ಗೆ ಇಂಗ್ಲೆಂಡ್ ತಂಡಕ್ಕೆ ತಡೆಯೊಡ್ಡಿ ಜಯ ಸಾಧಿಸುವ
ಛಲದಲ್ಲಿದ್ದಾರೆ.
ಜೀವದಾನ ಮತ್ತು ಜೊತೆಯಾಟ: ಪಂದ್ಯದ ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ 50 ರನ್‌ಗಳಿಗೆ 1 ವಿಕೆಟ್ ಕಳೆದು ಕೊಂಡಿತ್ತು. ಭಾನುವಾರ ಬೆಳಿಗ್ಗೆ ಸಿರಾಜ್, ಆಕಾಶ್ ದೀಪ್ ಮತ್ತು ಪ್ರಸಿದ್ಧಕೃಷ್ಣ ಅವರು ಅಮೋಘ ಬೌಲಿಂಗ್ ಮಾಡಿದರು. ಇದರ ಫಲವಾಗಿ ಬೆನ್ ಡಕೆಟ್ ಮತ್ತು ಓಲಿ ಪೋಪ್ ಅವರ ವಿಕೆಟ್‌ಗಳನ್ನು ಕ್ರಮವಾಗಿ ಪ್ರಸಿದ್ಧ ಮತ್ತು ಸಿರಾಜ್ ಕಬಳಿಸಿದರು. ಇದರಿಂದಾಗಿ ಇಂಗ್ಲೆಂಡ್ ತಂಡವು 106 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಗಿಲ್ ಬಳಗದ ಉತ್ಸಾಹ ಮುಗಿಲುಮುಟ್ಟಿತು. ಆದರೆ ಕ್ರೀಸ್‌ಗೆ ಬಂದ ಬ್ರೂಕ್ (111 ರನ್, 98ಎಸೆತ) ಅಕ್ಷರಶಃ ಟಿ20 ಮಾದರಿಯ ಬ್ಯಾಟಿಂಗ್ ಪ್ರದರ್ಶಿಸಿದರು.
ಇಂಗ್ಲೆಂಡ್ ನಿಗದಿಯ ಓವರ್‌ಗಳ ಕ್ರಿಕೆಟ್ ತಂಡದ ನಾಯಕರಾಗಿರುವ 26 ವರ್ಷದ ಬ್ರೂಕ್ ಹಾಗೂ ಮಾಜಿ ನಾಯಕ ಜೋ ರೂಟ್ (105; 152 ಎಸೆತ) ಅವರಿಬ್ಬರೂ ಶತಕ ದಾಖಲಿಸಿದರು. ಅಲ್ಲದೇ 195 ರನ್‌ಗಳ ಜೊತೆಯಾಟವಾಡಿ ತಂಡದ ಸೋಲಿನ ಆತಂಕವನ್ನು ದೂರ ಮಾಡಿದರು. ಇದಕ್ಕೆ ಕಾರಣವಾಗಿದ್ದು ಮೊಹಮ್ಮದ್ ಸಿರಾಜ್ ಅವರು ಬ್ರೂಕ್‌ಗೆ ನೀಡಿದ ‘ಜೀವದಾನ’.
ಪ್ರಸಿದ್ಧ ಹಾಕಿದ 35ನೇ ಓವರ್‌ನ ಮೊದಲ ಎಸೆತವನ್ನು ಬ್ರೂಕ್ ಹುಕ್ ಮಾಡಿದರು. ಆದರೆ ಟೈಮಿಂಗ್ ನಿಖರವಾಗಿರಲಿಲ್ಲ. ಡೀಪ್ ಫೈನ್ ಲೆಗ್‌ನಲ್ಲಿದ್ದ ಸಿರಾಜ್ ಅವರು ಚೆಂಡನ್ನು ಕೈತುಂಬಿಕೊಂಡರು. ಆದರೆ ಸಿರಾಜ್ ತಮ್ಮ ಕಾಲನ್ನು ಬೌಂಡರಿಗೆರೆಯ ಮೇಲೆ ಇಟ್ಟರು. ಅದಾಗಲೇ ಇತ್ತ ಒಂದು ಸುತ್ತು ಸಂಭ್ರಮಿಸಿದ್ದ ಬೌಲರ್ ಪ್ರಸಿದ್ಧ ನಿರಾಶೆಗೊಂಡರು. ಬ್ರೂಕ್ ಆ ಸಂದರ್ಭದಲ್ಲಿ 19 ರನ್ ಮಾತ್ರ ಗಳಿಸಿದ್ದರು. ಜೀವದಾನ ಸಿಕ್ಕ ನಂತರ ಬ್ರೂಕ್ ಎಲ್ಲ ಬೌಲರ್‌ಗಳಿಗೂ ಬೆವರಿಳಿಸಿದರು. ಮೂವರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳಿಗೂ ಬ್ರೂಕ್ ಜಗ್ಗಲಿಲ್ಲ. ಇನ್ನೊಂದು ಬದಿಯಲ್ಲಿ ರೂಟ್ ತಮ್ಮ ಎಂದಿನ ಶಾಂತ ಮತ್ತು ಚೆಂದದ ಶೈಲಿಯ ಬ್ಯಾಟಿಂಗ್ ಮಾಡುತ್ತಿದ್ದರು. ಆರಡಿ ಎತ್ತರದ ಬ್ರೂಕ್ ಅವರು ಪ್ರಯೋಗಿಸುತ್ತಿದ್ದ ಪುಲ್, ಹುಕ್, ಡ್ರೈವ್ ಮತ್ತು ಫ್ಲಿಕ್‌ಗಳಿಗೆ ಚೆಂಡು ಬೌಂಡರಿ ಗೆರೆ ದಾಟುತ್ತಿತ್ತು. ಭಾರತದ ಫೀಲ್ಡರ್‌ಗಳ ಕೆಲವು ಲೋಪಗಳೂ ಅವರಿಗೆ ಅನುಕೂಲವಾದವು. ಬ್ರೂಕ್ ಈ ಸರಣಿಯಲ್ಲಿ ಎರಡನೇ ಶತಕ ದಾಖಲಿಸಿದರು.
ಚಹಾ ವಿರಾಮಕ್ಕೆ ಸ್ವಲ್ಪ ಹೊತ್ತಿಗೆ ಮುನ್ನ ಆಕಾಶ್ ದೀಪ್ ಎಸೆತವನ್ನು ಮುನ್ನುಗ್ಗಿ ಹೊಡೆಯುವ ಯತ್ನದಲ್ಲಿ ಬ್ರೂಕ್ ಅವರು ಮಿಡ್ ಆಫ್‌ನಲ್ಲಿದ್ದ ಸಿರಾಜ್ ಅವರಿಗೆ ಕ್ಯಾಚ್ ಆದರು. ಇದರ ನಂತರ ರೂಟ್ ಅವರು ಇನಿಂಗ್ಸ್ ಹೊಣೆ ಹೊತ್ತುಕೊಂಡರು. ಜೊತೆಗೆ ತಮ್ಮ ಶತಕದತ್ತಲೂ ಹೆಜ್ಜೆ ಹಾಕಿದರು. ಸಿರಾಜ್ ಅವರ ಒಂದೇ ಓವರ್‌ನಲ್ಲಿ ಎರಡು ಬೌಂಡರಿ ಕೂಡ ಬಾರಿಸಿದರು.
ಚಹಾ ವಿರಾಮದ ನಂತರದ ಆಟದಲ್ಲಿ ಪ್ರಸಿದ್ಧ ನಿಖರ ದಾಳಿಗೆ ಜೋ ರೂಟ್ ಮತ್ತು ಜೇಕಬ್ ಬೆಥೆಲ್ (5 ರನ್) ಔಟಾದರು. ಈ ಹಂತದಲ್ಲಿ ಭಾರತ ತಂಡದಲ್ಲಿ ಮತ್ತೆ ಗೆಲುವಿನ ಆಸೆ ಚಿಗುರಿತು. ಎಲ್ಲರ ಮುಖದಲ್ಲಿಯೂ ಹೊಳಪು ಮರುಕಳಿಸಿತು. ಕ್ರೀಸ್‌ನಲ್ಲಿದ್ದ ಜೆಮಿ ಸ್ಮಿತ್ (ಬ್ಯಾಟಿಂಗ್ 2) ಮತ್ತು ಜೆಮಿ ಓವರ್ಟನ್ ಅವರು ತಾಳ್ಮೆಯ ಆಟಕ್ಕೆ ಮೊರೆಹೋದರು. ಇದೇ ಹೊತ್ತಿನಲ್ಲಿ ಮಳೆ ಆಟ ಆರಂಭವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.