ADVERTISEMENT

2ನೇ ಟೆಸ್ಟ್‌ | ಸಿಬ್ಲಿ, ಸ್ಟೋಕ್ಸ್ ಶತಕದಾಟ: ವಿಂಡೀಸ್ ಬೌಲರ್‌ಗಳ ಪರದಾಟ

ಏಜೆನ್ಸೀಸ್
Published 17 ಜುಲೈ 2020, 21:09 IST
Last Updated 17 ಜುಲೈ 2020, 21:09 IST
ಡಾಮ್ ಸಿಬ್ಲಿ (ಎಡ) ಮತ್ತು ಬೆನ್ ಸ್ಟೋಕ್ಸ್ –ಎಎಫ್‌ಪಿ ಚಿತ್ರ
ಡಾಮ್ ಸಿಬ್ಲಿ (ಎಡ) ಮತ್ತು ಬೆನ್ ಸ್ಟೋಕ್ಸ್ –ಎಎಫ್‌ಪಿ ಚಿತ್ರ   

ಮ್ಯಾಂಚೆಸ್ಟರ್: ವಿಶ್ವಕಪ್ ಹೀರೊ ಬೆನ್ ಸ್ಟೋಕ್ಸ್‌ (176; 356 ಎಸೆತ, 2 ಸಿಕ್ಸರ್‌, 17 ಬೌಂಡರಿ) ಶುಕ್ರವಾರ ಶತಕ ಸಿಡಿಸಿ ಮಿಂಚಿದರು. ವೆಸ್ಟ್ ಇಂಡೀಸ್ ಬೌಲರ್‌ಗಳನ್ನು ಕಾಡಿದ ಸ್ಟೋಕ್ಸ್ ಮತ್ತು ಆರಂಭಿಕ ಆಟಗಾರ ಡಾಮ್ ಸಿಬ್ಲಿ (120; 372 ಎ, 5 ಬೌಂ) ಅವರ ದ್ವಿಶತಕದ ಜೊತೆಯಾಟದ ನೆರವಿನಿಂದ ಇಂಗ್ಲೆಂಡ್ ತಂಡ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯುತ್ತಿರುವ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಉತ್ತಮ ಮೊತ್ತ ದಾಖಲಿಸಿತು.

ಆತಿಥೇಯ ತಂಡ 9 ವಿಕೆಟ್‌ ನಷ್ಟಕ್ಕೆ 469 ರನ್‌ ಗಳಿಸಿ ಮೊದಲ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಇನಿಂಗ್ಸ್ ಆರಂಭಿಸಿರುವ ವೆಸ್ಟ್‌ ಇಂಡೀಸ್‌ ಎರಡನೇ ದಿನದಾಟ ಮುಗಿದಾಗ ಒಂದು ವಿಕೆಟ್‌ ಕಳೆದುಕೊಂಡು 32 ರನ್‌ ಗಳಿಸಿತ್ತು. ಕ್ರೇಗ್‌ ಬ್ರಾತ್‌ವೇಟ್‌ (6)ಹಾಗೂ ಅಲ್ಜರಿ ಜೋಸೆಫ್‌ (14) ಕ್ರೀಸ್‌ ನಲ್ಲಿದ್ದರು.

ಮೊದಲ ದಿನವಾದ ಗುರುವಾರ ಕ್ರಮವಾಗಿ 86 ಮತ್ತು 59 ರನ್‌ ಗಳಿಸಿದ್ದ ಸಿಬ್ಲಿ –ಸ್ಟೋಕ್ಸ್‌ ಜೋಡಿ ಶುಕ್ರವಾರವೂ ಪ್ರಾಬಲ್ಯ ಮೆರೆದರು. ರಾಸ್ಟನ್ ಚೇಸ್ ಎಸೆತದಲ್ಲಿ ಕೆಮರ್ ರೋಚ್‌ಗೆ ಕ್ಯಾಚ್‌ ನೀಡಿ ಸಿಬ್ಲಿ ಮರಳಿದರು. ಇದು ಅವರ ಎರಡನೇ ಶತಕ. ಸ್ಟೋಕ್ಸ್ ಜೊತೆ ನಾಲ್ಕನೇ ವಿಕೆಟ್‌ಗೆ ಸಿಬ್ಲಿ 260 ರನ್‌ ಸೇರಿಸಿದ್ದರು.

ADVERTISEMENT

ಸಂಕ್ಷಿಪ್ತ ಸ್ಕೋರು
ಇಂಗ್ಲೆಂಡ್: 162 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 469 ಡಿಕ್ಲೇರ್ಡ್‌ (ಡಾಮ್ ಸಿಬ್ಲಿ 120, ಬೆನ್ ಸ್ಟೋಕ್ಸ್‌ 176, ಜೋಸ್ ಬಟ್ಲರ್ 40, ಡಾಮ್‌ ಬೆಸ್‌ 31; ಕೆಮರ್ ರೋಚ್ 58ಕ್ಕೆ2, ಅಲ್ಜರಿ ಜೋಸೆಫ್ 70ಕ್ಕೆ1, ರಾಸ್ಟನ್ ಚೇಸ್ 172ಕ್ಕೆ5).
ವೆಸ್ಟ್‌ ಇಂಡೀಸ್‌: ಮೊದಲ ಇನಿಂಗ್ಸ್‌: 14 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 32 (ಕ್ಯಾಂಪ್‌ಬೆಲ್‌ 12, ಅಲ್ಜರಿ ಜೋಸೆಫ್‌ ಬ್ಯಾಟಿಂಗ್‌ 14; ಸ್ಯಾಮ್‌ ಕರನ್‌ 8ಕ್ಕೆ 1) ಎರಡನೇ ದಿನದಾಟದ ಅಂತ್ಯಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.