ಲಂಡನ್: ಇಂಗ್ಲೆಂಡ್ ಮಹಿಳೆಯರ ಕ್ರಿಕೆಟ್ ತಂಡವು ಶನಿವಾರ ಮಳೆಯಿಂದ ಅಚರಣೆಯಾದ ಎರಡನೇ ಏಕದಿನ ಪಂದ್ಯವನ್ನು ಡಕ್ವರ್ಥ್ ಲೂಯಿಸ್ ನಿಯಮದ (ಡಿಎಲ್‌ಎಸ್) ಆಧಾರದಲ್ಲಿ ಎಂಟು ವಿಕೆಟ್‌ಗಳಿಂದ ಭಾರತ ತಂಡವನ್ನು ಮಣಿಸಿತು.
ಮೂರು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1–1 ಸಮಬಲ ಸಾಧಿಸಿದಂತಾಗಿದೆ. ಸೌತಾಂಪ್ಟನ್‌ನಲ್ಲಿ ನಡೆದ ಮೊದಲ ಪಂದ್ಯವನ್ನು ಭಾರತ ನಾಲ್ಕು ವಿಕೆಟ್‌ಗಳಿಂದ ಗೆದ್ದಿತ್ತು. ಹೀಗಾಗಿ, ಇದೇ 22ರಂದು ನಡೆಯುವ ಕೊನೆಯ ಪಂದ್ಯ ನಿರ್ಣಾಯಕವಾಗಿದೆ.
ಲಾರ್ಡ್ಸ್‌ನಲ್ಲಿ ನಡೆದ ಪಂದ್ಯವು ಮಳೆಯಿಂದಾಗಿ ವಿಳಂಬವಾಗಿ ಆರಂಭವಾಯಿತು. ಪ್ರತಿ ಇನಿಂಗ್ಸ್‌ಗೆ 29 ಓವರ್‌ಗಳನ್ನು ನಿಗದಿ ಮಾಡಲಾಯಿತು. ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ಉಪ ನಾಯಕಿ ಸ್ಮೃತಿ ಮಂದಾನ (42; 51ಎ, 4X5) ಮತ್ತು ದೀಪ್ತಿ ಶರ್ಮಾ (ಔಟಾಗದೇ 30; 34ಎ, 4X2) ಅವರಿಬ್ಬರ ಆಟದ ಬಲದಿಂದ ಭಾರತ ತಂಡವು ನಿಗದಿಯ ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 143 ರನ್ ಪೇರಿಸಿತು.
ಈ ಗುರಿಯನ್ನು ಬೆನ್ನಟ್ಟಿದ ಆತಿಥೇಯ ತಂಡವು 18.4 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 102 ರನ್ ಗಳಿಸಿದ್ದಾಗ ಮತ್ತೆ ಮಳೆ ಅಡಚಣೆ ಉಂಟುಮಾಡಿತು. ಹೀಗಾಗಿ, ಗೆಲುವಿನ ಗುರಿಯನ್ನು 115 ರನ್‌ಗೆ (24 ಓವರ್) ಪರಿಷ್ಕರಿಸಲಾಯಿತು. ಇನ್ನೂ 18 ಎಸೆತಗಳು ಬಾಕಿ ಇರುವಂತೆ ಇಂಗ್ಲೆಂಡ್ ಎರಡು ವಿಕೆಟ್‌ಗೆ 116 ರನ್ ಗಳಿಸಿ ಸರಣಿಯನ್ನು ಜೀವಂತವಾಗಿ ಉಳಿಸಿತು.
ಎಮಿ ಜೋನ್ಸ್ (ಔಟಾಗದೇ 46; 57ಎ, 4x5) ಮತ್ತು ಟ್ಯಾಮಿ ಬ್ಯೂಮಾಂಟ್ (34;35ಎ, 4x5) ಮೊದಲ ವಿಕೆಟ್ ಜೊತೆಯಾಟದಲ್ಲಿ 54 ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿದರು. ಟ್ಯಾಮಿ ಅವರನ್ನು ಸ್ನೇಹಾ ರಾಣಾ ಎಲ್‌ಬಿಡಬ್ಲ್ಯು ಬಲೆಗೆ ಕೆಡಿವಿದರು. ನಂತರ ಬಂದ ನಾಯಕಿ ನ್ಯಾಟ್ ಸ್ಕಿವರ್ ಬ್ರಂಟ್ (21;25ಎ) ಅವರು ಎಮಿ ಅವರೊಂದಿಗೆ ಎರಡನೇ ವಿಕೆಟ್‌ಗೆ 48 ರನ್ ಸೇರಿಸಿದರು.
ಇದಕ್ಕೂ ಮುನ್ನ ಭಾರತದ ಆರಂಭ ಉತ್ತಮವಾಗಿ ಇರಲಿಲ್ಲ. ಇಂಗ್ಲೆಂಡ್ ವೇಗಿ ಎಮ್ ಆರ್ಲೋಟ್ ಅವರು ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಪ್ರತೀಕಾ ರಾವಲ್ (3 ರನ್) ವಿಕೆಟ್ ಉರುಳಿಸಿದರು. ಸ್ಮೃತಿ ಅವರೊಂದಿಗೆ ಸೇರಿಕೊಂಡ ಹರ್ಲಿನ್ ಡಿಯೊಲ್ (16; 24ಎ) ಇನಿಂಗ್ಸ್‌ಗೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 40 ರನ್ ಸೇರಿದ್ದಾಗ, ಹರ್ಲಿನ್ ಅವರ ವಿಕೆಟ್ ಪಡೆಯುವಲ್ಲಿ ಸೋಫಿ ಎಕ್ಲೆಸ್ಟೋನ್ ಯಶಸ್ವಿಯಾದರು.
ಸೋಫಿ ತಮ್ಮ ಇನ್ನೊಂದು ಓವರ್‌ನಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ (7 ರನ್) ಅವರನ್ನು ಕ್ಲೀನ್‌ಬೌಲ್ಡ್ ಮಾಡಿದರು. ಇನ್ನೊಂದು ಬದಿಯಿಂದ ಚಾರ್ಲೀ ಡೀನ್ ಅವರು ಜಿಮಿಮಾ ರಾಡ್ರಿಗಸ್ (3 ರನ್) ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು. ರಿಚಾ ಘೋಷ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಸೋಫಿ ವಿಜೃಂಭಿಸಿದರು.
72 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡ ಪ್ರವಾಸಿ ತಂಡವು ಆತಂಕಕ್ಕೊಳಗಾಯಿತು. ಏಕಾಂಗಿಯಾಗಿ ಹೋರಾಡುತ್ತಿದ್ದ ಸ್ಮೃತಿ ಅವರೊಂದಿಗೆ ಸೇರಿಕೊಂಡ ದೀಪ್ತಿ ಚೇತರಿಕೆ ನೀಡಿದರು. ಸರಣಿಯ ಮೊದಲ ಪಂದ್ಯದಲ್ಲಿಯೂ ಗೆಲುವಿನ ರೂವಾರಿಯಾಗಿದ್ದ ದೀಪ್ತಿ ಇಲ್ಲಿಯೂ ಉಪಯುಕ್ತ ಕಾಣಿಕೆ ನೀಡಿದರು. ಸ್ಮೃತಿ ಅವರೊಂದಿಗೆ 6ನೇ ವಿಕೆಟ್ ಜೊತೆಯಾಟದಲ್ಲಿ 26 ರನ್ ಸೇರಿಸಿದರು. ಸ್ಮೃತಿ ನಿರ್ಗಮಿಸಿದ ನಂತರ ಅರುಂಧತಿ ರೆಡ್ಡಿ (14; 18ಎ) ಅವರೊಂದಿಗೆ ಕೂಡ 26 ರನ್ ಪೇರಿಸಿದರು. ಇದರಿಂದಾಗಿ ತಂಡವು ಸವಾಲಿನ ಮೊತ್ತ ಗಳಿಸಿತ್ತು.
ಸಂಕ್ಷಿಪ್ತ ಸ್ಕೋರು:
ಭಾರತ: 29 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 143 (ಸ್ಮೃತಿ ಮಂದಾನ 42, ಹರ್ಲೀನ್ ಡಿಯೊಲ್ 16, ದೀಪ್ತಿ ಶರ್ಮಾ ಔಟಾಗದೇ 30, ಅರುಂಧತಿ ರೆಡ್ಡಿ 14, ಎಮ್ ಅರ್ಲಾಟ್ 26ಕ್ಕೆ2, ಸೋಫಿ ಎಕ್ಲೆಸ್ಟೋನ್ 27ಕ್ಕೆ3, ಲಿನ್ಸಿ ಸ್ಮಿತ್ 28ಕ್ಕೆ2).
ಇಂಗ್ಲೆಂಡ್: 21 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 116 (ಎಮಿ ಜೋನ್ಸ್ ಔಟಾಗದೇ 46, ಟ್ಯಾಮಿ ಬ್ಯೂಮಾಂಟ್ 34, ನ್ಯಾಟ್ ಸ್ಕಿವರ್ ಬ್ರಂಟ್ 21). ಫಲಿತಾಂಶ: ಇಂಗ್ಲೆಂಡ್‌ಗೆ ಎಂಟು ವಿಕೆಟ್ ಜಯ (ಡಿಎಲ್‌ಎಸ್ ನಿಯಮದನ್ವಯ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.