ಕೊಲಂಬೊ: ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಜಯ ಸಾಧಿಸುವ ಪಾಕಿಸ್ತಾನ ತಂಡದ ಆಸೆಗೆ ಮಳೆ ಅಡ್ಡಿಯಾಯಿತು.
ಬುಧವಾರ ನಡೆದ ಪಂದ್ಯವು ಮಳೆಯಿಂದಾಗಿ ಸ್ಥಗಿತಗೊಂಡ ಕಾರಣ ಪಾಕ್ ಮತ್ತು ಇಂಗ್ಲೆಂಡ್ ತಂಡಗಳಿಗೆ ತಲಾ ಒಂದು ಅಂಕ ನೀಡಲಾಯಿತು.
ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ಫೀಲ್ಡಿಂಗ್ ಆಯ್ಕೆ ಮಾಡಿ ಕೊಂಡಿತು. ಪಾಕ್ ತಂಡದ ನಾಯಕಿ ಫಾತಿಮಾ ಸನಾ (27ಕ್ಕೆ4) ಅವರ ಅಮೋಘ ಬೌಲಿಂಗ್ ಎದುರು ಇಂಗ್ಲೆಂಡ್ ಮಹಿಳೆಯರ ಕ್ರಿಕೆಟ್ ತಂಡವು ಮಂಕಾಯಿತು. ಆರ್. ಪ್ರೇಮದಾಸ ಕ್ರೀಡಾಂಗಣ ದಲ್ಲಿ ನಡೆದ ಪಂದ್ಯದಲ್ಲಿ ಮಳೆಯಿಂದಾಗಿ ಸಮಯ ನಷ್ಟವಾದ ಕಾರಣ (ಡಕ್ವರ್ಥ್ ಲೂಯಿಸ್ ನಿಯಮ) ಪ್ರತಿ ಇನಿಂಗ್ಸ್‌ಗೆ 31 ಓವರ್ ನಿಗದಿ ಮಾಡಲಾಯಿತು. ಇಂಗ್ಲೆಂಡ್ ತಂಡವು 133 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಗುರಿ ಬೆನ್ನಟ್ಟಿದ ಪಾಕ್ ತಂಡವು 6.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 34 ರನ್ ಗಳಿಸಿತು. ಇದೇ ಸಂದರ್ಭದಲ್ಲಿ ಮತ್ತೆ ಮಳೆ ಸುರಿಯಿತು. ರಾತ್ರಿ 10 ಗಂಟೆಯ ಸುಮಾರಿಗೆ ಅಂಪೈರ್‌ಗಳು ಪಂದ್ಯ ಸ್ಥಗಿತಗೊಳಿಸಿ ಅಂಕಗಳನ್ನು ಹಂಚಿದರು.
ಪಾಕ್ ತಂಡವು ಟೂರ್ನಿಯಲ್ಲಿ ಇದುವರೆಗೆ ಆಡಿರುವ ಮೂರು ಪಂದ್ಯಗಳಲ್ಲಿಯೂ ಸೋತಿದೆ. ಆದರೆ ಈ ಪಂದ್ಯದಲ್ಲಿ ಆರಂಭಿಕ ಹಂತದಿಂದಲೇ ಛಲದ ಆಟವಾಡಿತು. ಸ್ವತಃ ಸನಾ ಅವರೇ (27ಕ್ಕೆ4) ಪರಿಣಾಮಕಾರಿ ದಾಳಿ ಮಾಡಿದರು. ಮಧ್ಯಮವೇಗಿ ಸನಾ ಅವರು ಇಂಗ್ಲೆಂಡ್ ತಂಡದ ಎಮಿ ಜೋನ್ಸ್ (8; 8ಎ), ಹೀದರ್ ನೈಟ್ (18; 17ಎ, 4X4), ನ್ಯಾಟ್ ಶಿವರ್ ಬ್ರಂಟ್ (4 ರನ್) ಅವರ ವಿಕೆಟ್‌ಗಳನ್ನು ಬೇಗನೆ ಉರುಳಿಸಿದರು. ಅದರಿಂದಾಗಿ ಇಂಗ್ಲೆಂಡ್ ತಂಡವು 57 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತು. ಆದರೆ ಕೆಳಕ್ರಮಾಂಕದ ಬ್ಯಾಟರ್‌ಗಳಾದ ಅಲೈಸ್ ಕ್ಯಾಪ್ಸಿ (16; 43ಎ), ಚಾರ್ಲಿ ಡೀನ್ (33; 51ಎ) ಹಾಗೂ ಎಮ್ ಅರ್ಲಾಟ್ (18; 23ಎ) ಅವರು ಇಂಗ್ಲೆಂಡ್ ತಂಡವು ಅಲ್ಪ
ಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.