
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಗೌತಮ್ ಗಂಭೀರ್ (ಒಳಚಿತ್ರದಲ್ಲಿ)
ಕೃಪೆ: ಪಿಟಿಐ
ವಿಶಾಖಪಟ್ಟಣಂ: 2027ರ ಏಕದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು, ಹಿರಿಯ ಆಟಗಾರರನ್ನು ಸಂಪೂರ್ಣವಾಗಿ ಕೈಬಿಡದೆ, ಹೊಸಬರನ್ನೂ ಒಳಗೊಂಡಂತೆ ಸಮತೋಲನದಿಂದ ಕೂಡಿದ ಭಾರತ ತಂಡ ಕಟ್ಟುವ ಪ್ರಯತ್ನಗಳು ನಡೆಯುತ್ತಿವೆ.
ಹೊಸ 'ಟೀಂ ಇಂಡಿಯಾ' ಕಟ್ಟುವ ಪ್ರಕ್ರಿಯೆಗೆ ಮುತುವರ್ಜಿ ವಹಿಸಿರುವ ಮುಖ್ಯ ಕೋಚ್ ಗೌತಮ್ ಗಂಭೀರ್, ಅನುಭವಿ ಹಾಗೂ ಯುವ ಆಟಗಾರರು ನೀಡುತ್ತಿರುವ ಕೊಡುಗೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಶನಿವಾರವಷ್ಟೇ (ಡಿ.6) ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಗಂಭೀರ್, ಅನುಭವಿಗಳಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅವರಿಬ್ಬರೂ ಪ್ರಸ್ತುತ ಸರಣಿಯಲ್ಲಿ ನೀಡಿದಂತಹ ಪ್ರದರ್ಶನವನ್ನು ಮುಂದುವರಿಸುವ ವಿಶ್ವಾಸವಿದೆ. ಇದರಿಂದ, ಏಕದಿನ ಕ್ರಿಕೆಟ್ ಉತ್ತಮ ಸ್ಥಿತಿಯಲ್ಲಿ ಉಳಿಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್, ಮೂರು ಪಂದ್ಯಗಳಲ್ಲಿ ಎರಡು ಶತಕ, ಒಂದು ಅರ್ಧಶತಕ ಸಹಿತ 302 ರನ್ ಗಳಿಸಿ ಸರಣಿ ಶ್ರೇಷ್ಠ ಎನಿಸಿದರೆ, ರೋಹಿತ್ ಎರಡು ಅರ್ಧಶತಕ ಸಹಿತ 146 ರನ್ ಗಳಿಸಿ ಉತ್ತಮ ಆಟವಾಡಿದರು.
'ನೋಡಿ, ಅವರಿಬ್ಬರೂ ಗುಣಮಟ್ಟದ ಆಟಗಾರರು. ವಿಶ್ವದರ್ಜೆ ಆಟಗಾರರು ಎಂಬುದನ್ನು ಸಾಕಷ್ಟು ಸಲ ಹೇಳಿದ್ದೇನೆ. ಡ್ರೆಸ್ಸಿಂಗ್ ಕೋಣೆಗೆ ಅವರ ಅನುಭವ ಅತ್ಯಗತ್ಯ. ತಮ್ಮಿಂದ ಏನು ಮಾಡಲು ಸಾಧ್ಯವೋ ಅದನ್ನು ಅವರಿಬ್ಬರೂ ಮಾಡುತ್ತಿದ್ದಾರೆ. ಅದನ್ನು ಮುಂದುವರಿಸುತ್ತಾರೆ ಎನ್ನುವ ವಿಶ್ವಾಸವಿದೆ' ಎಂದು ಹೇಳಿದ್ದಾರೆ.
ವೇಗಿಗಳಾದ ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರ ಗೈರು, ಬ್ಯಾಟರ್ ಶುಭಮನ್ ಗಿಲ್ ಮತ್ತು ಹಾರ್ದಿಪ್ ಪಾಂಡ್ಯ ಅವರು ಗಾಯದಿಂದ ವಿಶ್ರಾಂತಿಯಲ್ಲಿದ್ದ ಕಾರಣ ಉದಯೋನ್ಮುಖ ಆಟಗಾರರಿಗೆ ಅವಕಾಶ ನೀಡಲಾಯಿತು. ಅದರಲ್ಲಿ ಹರ್ಷಿತ್ ರಾಣಾ ಕೂಡ ಒಬ್ಬರು.
‘ಹರ್ಷಿತ್ ಅವರಿಗೆ ಅವಕಾಶ ನೀಡುತ್ತಿರುವುದರ ಹಿಂದೆ ಮುಖ್ಯ ಕಾರಣವೆಂದರೆ ಎಂಟನೇ ಕ್ರಮಾಂಕದಲಲ್ಲಿ ಬ್ಯಾಟರ್ ಒಬ್ಬರನ್ನು ಬೆಳೆಸುವುದಾಗಿದೆ. ಏಕೆಂದರೆ ಇನ್ನೆರಡು ವರ್ಷಗಳ ನಂತರ ನಾವು ದಕ್ಷಿಣ ಆಫ್ರಿಕಾದಲ್ಲಿ (2027ರ ಏಕದಿನ ವಿಶ್ವಕಪ್) ಆಡಬೇಕಿದೆ’ ಎಂದು ಗಂಭೀರ್ ಹೇಳಿದ್ದಾರೆ.
‘ಈ ಸರಣಿಯಲ್ಲಿ ಅರ್ಷದೀಪ್, ಪ್ರಸಿದ್ಧ ಮತ್ತು ಹರ್ಷಿತ್ ಅವರು ಅಮೋಘವಾಗಿ ಆಡಿದ್ದಾರೆ. ಈ ಮೂವರಿಗೂ ಹೆಚ್ಚು ಅನುಭವ ಇಲ್ಲ. ಆದರೆ ಒತ್ತಡವನ್ನು ನಿಭಾಯಿಸಿ ಉತ್ತಮವಾಗಿ ಆಡಿದ್ದಾರೆ’ ಎಂದು ಗಂಭೀರ್ ಶ್ಲಾಘಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.