ADVERTISEMENT

ನಿರಾಸೆ ಮರೆತು ಗೆಲುವಿನತ್ತ ಗಮನ ಹರಿಸಬೇಕು

ದಕ್ಷಿಣ ಆಫ್ರಿಕಾ ತಂಡದ ನಾಯಕ ಡು ಪ್ಲೆಸಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 31 ಮೇ 2019, 19:37 IST
Last Updated 31 ಮೇ 2019, 19:37 IST
ಫಾಫ್‌ ಡು ಪ್ಲೆಸಿ
ಫಾಫ್‌ ಡು ಪ್ಲೆಸಿ   

ಲಂಡನ್‌: ‘ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ಎದುರು ಸೋತಿದ್ದೇವೆ. ಹಾಗಂತ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡು ಕೂರಲು ಈಗ ಸಮಯವಿಲ್ಲ. ಮುಂದಿನ ಪಂದ್ಯದಲ್ಲಿ ಗೆಲುವಿನ ಸಿಹಿ ಸವಿದು ಈ ನಿರಾಸೆ ಮರೆಯಲು ಎಲ್ಲರೂ ಪ್ರಯತ್ನಿಸಬೇಕು’ ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್‌ ಡು ಪ್ಲೆಸಿ ಹೇಳಿದ್ದಾರೆ.

ದಿ ಓವಲ್‌ನಲ್ಲಿ ಶುಕ್ರವಾರ ನಡೆದಿದ್ದ ಉದ್ಘಾಟನಾ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾವು 104ರನ್‌ಗಳಿಂದ ಸೋತಿತ್ತು.

‘ಇಂಗ್ಲೆಂಡ್‌ ತಂಡವು ಆಟದ ಮೂರು ವಿಭಾಗಗಳಲ್ಲೂ ಮೇಲುಗೈ ಸಾಧಿಸಿತು. ನಾವು ಎಲ್ಲಾ ವಿಭಾಗಗಳಲ್ಲೂ ವೈಫಲ್ಯ ಕಂಡೆವು. ಪ್ರತಿಯೊಂದು ಸೋಲಿನಿಂದಲೂ ಪಾಠ ಕಲಿಯಬೇಕು. ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಹೋರಾಟಕ್ಕೆ ಅಣಿಯಾಗಬೇಕು’ ಎಂದಿದ್ದಾರೆ.

ADVERTISEMENT

ದಿ ಓವಲ್‌ನಲ್ಲಿ ಭಾನುವಾರ ನಡೆಯುವ ಹಣಾಹಣಿಯಲ್ಲಿ ಡು ಪ್ಲೆಸಿ ಬಳಗವು ಬಾಂಗ್ಲಾದೇಶ ಎದುರು ಸೆಣಸಲಿದೆ.

‘ಹಾಶೀಂ ಆಮ್ಲಾ ಗಾಯದ ಕಾರಣ ಸ್ವಯಂ ನಿವೃತ್ತಿ ಪಡೆದು ಪೆವಿಲಿಯನ್‌ಗೆ ವಾಪಸಾಗಿದ್ದು ನಮಗೆ ಮುಳುವಾಯಿತು. 312ರನ್‌ಗಳ ಗುರಿ ಬೆನ್ನಟ್ಟುವಾಗ ಸ್ಫೋಟಕ ಆರಂಭ ಪಡೆಯುವುದು ಅವಶ್ಯ. ಈ ವಿಚಾರದಲ್ಲಿ ನಾವು ಹಿಂದೆ ಬಿದ್ದೆವು’ ಎಂದು ತಿಳಿಸಿದರು.

‘ಇಂಗ್ಲೆಂಡ್‌ ಎದುರಿನ ಪಂದ್ಯದಲ್ಲಿ ಸ್ಪಿನ್ನರ್ ಇಮ್ರಾನ್‌ ತಾಹೀರ್‌ ಅವರಿಂದಲೇ ಮೊದಲ ಓವರ್‌ ಬೌಲ್‌ ಮಾಡಿಸಬೇಕೆಂಬುದು ನಮ್ಮ ಯೋಜನೆಯಾಗಿತ್ತು. ಹೀಗಾಗಿ ತಾಹೀರ್‌, ಅಭ್ಯಾಸದ ವೇಳೆ ಹೊಸ ಚೆಂಡು ಬಳಸಿ ಬೌಲಿಂಗ್‌ ಮಾಡುತ್ತಿದ್ದರು. ಅವರು ಮೊದಲ ಓವರ್‌ನ ಎರಡನೇ ಎಸೆತದಲ್ಲೇ ಜಾನಿ ಬೇಸ್ಟೊ ವಿಕೆಟ್‌ ಪಡೆದು ನನ್ನ ನಿರ್ಧಾರವನ್ನು ಸಮರ್ಥಿಸಿದರು’ ಎಂದು ನುಡಿದರು.

ಮಾರ್ಗನ್‌ ಮೆಚ್ಚುಗೆ: ತಂಡದ ಆಟಗಾರರ ಸಂಘಟಿತ ಆಟಕ್ಕೆ ಇಂಗ್ಲೆಂಡ್‌ ತಂಡದ ನಾಯಕ ಇಯಾನ್‌ ಮಾರ್ಗನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಕೆನ್ನಿಂಗ್ಟನ್ ಓವಲ್ ಅಂಗಳದ ಪಿಚ್‌ನಲ್ಲಿ ರನ್‌ ಗಳಿಸುವುದು ಅಷ್ಟು ಸುಲಭವಾಗಿರಲಿಲ್ಲ. ಓವರ್‌ಗೆ ಐದು ರನ್‌ ಕಲೆಹಾಕಬೇಕೆಂಬುದು ನಮ್ಮ ಯೋಜನೆಯಾಗಿತ್ತು. ಆರಂಭದಲ್ಲೇ ವಿಕೆಟ್‌ ಉರುಳಿದ್ದರಿಂದ ಅಲ್ಪ ಒತ್ತಡಕ್ಕೆ ಒಳಗಾಗಿದ್ದು ನಿಜ. ಇದರ ನಡುವೆಯೂ ನಮ್ಮ ಬ್ಯಾಟ್ಸ್‌ಮನ್‌ಗಳು ಯೋಜನೆಗೆ ಅನುಗುಣವಾಗಿ ಆಡಿ ಆತಂಕ ದೂರ ಮಾಡಿದರು’ ಎಂದು ಮಾರ್ಗನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.