ADVERTISEMENT

ಕೇನ್ ತಾಳ್ಮೆಯ ಆಟಕ್ಕೆ ಒಲಿದ ಜಯ: ದಕ್ಷಿಣ ಆಫ್ರಿಕಾ ತಂಡಕ್ಕೆ ಮತ್ತೊಂದು ಸೋಲು

ಆಮ್ಲಾ, ಡಸೆನ್ ಹೋರಾಟ ವ್ಯರ್ಥ

ಏಜೆನ್ಸೀಸ್
Published 19 ಜೂನ್ 2019, 20:30 IST
Last Updated 19 ಜೂನ್ 2019, 20:30 IST
   

ಬರ್ಮಿಂಗಂ: ಬುಧವಾರ ರಾತ್ರಿ ನ್ಯೂಜಿಲೆಂಡ್‌ನ ‘ಕೂಲ್ ಕ್ಯಾಪ್ಟನ್’ ಕೇನ್ ವಿಲಿಯಮ್ಸನ್ ತಾಳ್ಮೆಯ ಶತಕಕ್ಕೆ ಜಯ ಒಲಿಯಿತು. ದಕ್ಷಿಣ ಆಫ್ರಿಕಾ ತಂಡದ ಸೋಲಿನ ಪಯಣ ಮುಂದುವರಿಯಿತು.

ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ತಮ್ಮ ತಂಡವನ್ನು ಸೋಲಿನ ದವಡೆಯಿಂದ ಹೊರ ತಂದ ಕೇನ್ (106; 138ಎಸೆತ, 9ಬೌಂಡರಿ, 1ಸಿಕ್ಸರ್) ದಕ್ಷಿಣ ಆಫ್ರಿಕಾ ಬೌಲರ್‌ಗಳ ಬೆವರಿಳಿಸಿದರು. ಇದರಿಂದಾಗಿ ನ್ಯೂಜಿಲೆಂಡ್ ತಂಡವು 4 ವಿಕೆಟ್‌ಗಳಿಂದ ಜಯಿಸಿತು.

ಮಳೆ ಬಂದ ಕಾರಣ ಪಂದ್ಯವು ತಡವಾಗಿ ಆರಂಭವಾಯಿತು. ಟಾಸ್ ಗೆದ್ದ ಕಿವೀಸ್ ಬಳವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. 49 ಓವರ್‌ಗಳ ಇನಿಂಗ್ಸ್‌ ಅನ್ನು ನಿಗದಿಪಡಿಸಲಾಯಿತು. ಅನುಭವಿ ಬ್ಯಾಟ್ಸ್‌ಮನ್ ಹಾಶೀಂ ಆಮ್ಲಾ (55; 83ಎಸೆತ; 4ಬೌಂಡರಿ) ಮತ್ತು ರಸ್ಸಿ ವ್ಯಾನ್ ಡರ್ ಡಸೆನ್ (ಔಟಾಗದೆ 67; 64ಎಸೆತ, 2ಬೌಂಡರಿ, 3ಸಿಕ್ಸರ್) ಅವರ ಅರ್ಧಶತಕಗಳ ಬಲದಿಂದ ದಕ್ಷಿಣ ಆಫ್ರಿಕಾ 6 ವಿಕೆಟ್‌ಗಳಿಗೆ 241 ರನ್‌ ಗಳಿಸಿತು.

ADVERTISEMENT

ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರ ಮನ್ರೊ ಮೂರನೇ ಓವರ್‌ನಲ್ಲಿ ಔಟಾದರು. ಚೆನ್ನಾಗಿ ಆಡುತ್ತಿದ್ದ ಮಾರ್ಟಿನ್ ಗಪ್ಟಿಲ್ (35 ರನ್) ಹಿಟ್‌ವಿಕೆಟ್ ಆದರು. ರಾಸ್ ಟೇಲರ್ ಮತ್ತು ಟಾಮ್ ಲಥಾಮ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ತಂಡವು 80 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು.

ಆಗ ಜೊತೆಗೂಡಿದ ಕೇನ್ ಮತ್ತು ಜೇಮ್ಸ್‌ ನಿಶಾಮ್ ಅವರು ಐದನೇ ವಿಕೆಟ್ ಜೊತೆಯಾಟದಲ್ಲಿ 57 ರನ್‌ ಸೇರಿಸಿದರು. 33ನೇ ಓವರ್‌ನಲ್ಲಿ ನಿಶಾಮ್ ಔಟಾದಾಗ ತಂಡವು ಗೆಲುವಿನ ಗುರಿಯಿಂದ ಇನ್ನೂ ಬಹುದೂರದಲ್ಲಿತ್ತು. ನಾಯಕ ಕೇನ್‌ ಜೊತೆಗೂಡಿದ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ (60; 47ಎಸೆತ, 5ಬೌಂಡರಿ, 2 ಸಿಕ್ಸರ್) ಆರನೇ ವಿಕೆಟ್ ಜೊತೆಯಾಟದಲ್ಲಿ 91 ರನ್ ಸೇರಿಸಿದರು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳಿಗೆ ದಕ್ಷಿಣ ಆಫ್ರಿಕಾ ಫೀಲ್ಡರ್‌ಗಳಿಂದ ತಲಾ ಒಂದು ಜೀವದಾನ ಲಭಿಸಿತ್ತು. 48ನೇ ಓವರ್‌ನಲ್ಲಿ ಕಾಲಿನ್ ಔಟಾದರು. ಆದರೆ, ಕೇನ್ ತಮ್ಮ ಶತಕವನ್ನೂ ಪೂರೈಸಿಕೊಂಡು, ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು. ಕಿವೀಸ್ ಅಜೇಯ ಓಟವೂ ಮುಂದುವರಿಯಿತು.

ಇಲ್ಲಿ ಸೇರಿದ್ದ ದಕ್ಷಿಣ ಆಫ್ರಿಕಾ ಅಭಿಮಾನಿಗಳ ದುಃಖದ ಕಟ್ಟೆ ಒಡೆಯಿತು. ತಂಡವು ಈ ಪಂದ್ಯದಲ್ಲಿ ಗೆದ್ದಿದ್ದರೆ ನಾಕೌಟ್ ಆಸೆ ಜೀವಂತವಾಗಿರುತ್ತಿತ್ತು. ಆಡಿರುವ ಒಟ್ಟು ಆರು ಪಂದ್ಯಗಳಲ್ಲಿ ಗೆದ್ದಿದ್ದು ಒಂದೇ ಪಂದ್ಯ. ಇನ್ನೊಂದು ಪಂದ್ಯ ಮಳೆಗೆ ರದ್ದಾಗಿತ್ತು. ನಾಲ್ಕರಲ್ಲಿ ಸೋಲಿನ ಕಹಿ ಅನುಭವಿಸಿದೆ. ಇನ್ನುಳಿದಿರುವ ಮೂರು ಪಂದ್ಯಗಳಲ್ಲಿ ಗೆದ್ದರೂ ಸೆಮಿಫೈನಲ್ ತಲುವುದು ಕಷ್ಟ.

ಡಸೆನ್ ಮಿಂಚು: ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಕೂಡ ಸಾಧಾರಣವಾಗಿತ್ತು. ಆರಂಭದಲ್ಲಿಯೇ ಆಘಾತ ಅನುಭವಿಸಿತ್ತು. ಆಮ್ಲಾ ತಾಳ್ಮೆಯ ಆಟದ ಹೊರತಾಗಿಯೂ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಆತಂಕದಲ್ಲಿತ್ತು.ಆಮ್ಲಾ ಔಟಾದ ನಂತರ ಜೊತೆಗೂಡಿದ ಡಸೆನ್ ಮತ್ತು ಡೇವಿಡ್ ಮಿಲ್ಲರ್ (36; 37 ಎಸೆತ, 2ಬೌಂಡರಿ, 1ಸಿಕ್ಸರ್) ಆಸರೆಯಾದರು.

ಮಿಂಚಿನ ಬ್ಯಾಟಿಂಗ್ ಮಾಡಿದ ಡಸೆನ್ ಕಿವೀಸ್ ಬೌಲರ್‌ಗಳನ್ನು ಕಾಡಿದರು. ಮೂರು ಭರ್ಜರಿ ಸಿಕ್ಸರ್‌ಗಳನ್ನೂ ಎತ್ತಿದರು. ಇದರಿಂದಾಗಿ ತಂಡದ ಮೊತ್ತವು ಏರುಗತಿಯಲ್ಲಿ ಸಾಗಿತು. ಇಬ್ಬರೂ ಐದನೇ ವಿಕೆಟ್‌ ಜೊತೆಯಾಟದಲ್ಲಿ 72 ರನ್‌ಗಳನ್ನು ಸೇರಿಸಿದರು. ಇದರಿಂದಾಗಿ ತಂಡವು ಇನ್ನೂರರ ಗಡಿ ದಾಟಿತು. ಮಿಲ್ಲರ್ ಅವರ ವಿಕೆಟ್ ಗಳಿಸಿದ ಲಾಕಿ ಫರ್ಗ್ಯುಸನ್ ಜೊತೆಯಾಟವನ್ನು ಮುರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.