ADVERTISEMENT

ಸೌರವ್‌ ಗಂಗೂಲಿಗೆ ಸಮನ್ಸ್‌

ಪಿಟಿಐ
Published 16 ಏಪ್ರಿಲ್ 2019, 18:22 IST
Last Updated 16 ಏಪ್ರಿಲ್ 2019, 18:22 IST
ಸೌರವ್ ಗಂಗೂಲಿ
ಸೌರವ್ ಗಂಗೂಲಿ   

ನವದೆಹಲಿ: ಹಿತಾಸಕ್ತಿ ಸಂಘರ್ಷ ಆರೋಪ ಎದುರಿಸುತ್ತಿರುವ ಹಿರಿಯ ಕ್ರಿಕೆಟಿಗ ಸೌರವ್‌ ಗಂಗೂಲಿಗೆ ಬಿಸಿಸಿಐ ಒಂಬುಡ್ಸ್‌ಮನ್‌ ಡಿ.ಕೆ.ಜೈನ್‌ ಮಂಗಳವಾರ ಸಮನ್ಸ್‌ ನೀಡಿದ್ದಾರೆ.

ಏಪ್ರಿಲ್‌ 20 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ನಿಗದಿತ ದಿನದಂದು ಫಿರೋಜ್‌ ಷಾ ಕೋಟ್ಲಾ ಮೈದಾನದಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವಣ ಪಂದ್ಯ ಆಯೋಜನೆಯಾಗಿದೆ.

ಬಂಗಾಳ ಕ್ರಿಕೆಟ್‌ ಸಂಸ್ಥೆಯ (ಸಿಎಬಿ) ಅಧ್ಯಕ್ಷರಾಗಿರುವ ಸೌರವ್‌, ಐಪಿಎಲ್‌ನಲ್ಲಿ ಆಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸಲಹೆಗಾರರಾಗಿಯೂ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಹಿತಾಸಕ್ತಿ ಸಂಘರ್ಷಕ್ಕೆ ಒಳಗಾಗಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋಲ್ಕತ್ತದ ರಂಜೀತ್‌ ಸೀಲ್‌, ಅಭಿಜಿತ್‌ ಮುಖರ್ಜಿ ಮತ್ತು ಭಾಸ್ವತಿ ಶಾಂತುವ ಅವರು ನಿವೃತ್ತ ನ್ಯಾಯಮೂರ್ತಿ ಜೈನ್‌ ಅವರಿಗೆ ಪ್ರತ್ಯೇಕವಾಗಿ ದೂರು ನೀಡಿದ್ದರು. ಈ ಸಂಬಂಧ ಒಂಬುಡ್ಸ್‌ಮನ್‌ ಗಂಗೂಲಿ ಅವರಿಂದ ಸ್ಪಷ್ಟನೆಯನ್ನೂ ಕೇಳಿತ್ತು.

ADVERTISEMENT

‘ಎರಡು ಹುದ್ದೆಗಳನ್ನು ನಿಭಾಯಿಸುತ್ತಿರುವುದು ನಿಜ. ಇದು ಬಿಸಿಸಿಐ ಸಂವಿಧಾನಕ್ಕೆ ವಿರುದ್ಧವಾಗಿಲ್ಲ. ಹೀಗಾಗಿ ಹಿತಾಸಕ್ತಿ ಸಂಘರ್ಷದ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಗಂಗೂಲಿ, ಕೆಲ ದಿನಗಳ ಹಿಂದೆ ಒಂಬುಡ್ಸ್‌ಮನ್‌ಗೆ ಬರೆದಿದ್ದ ಪತ್ರದಲ್ಲಿ ಸ್ಪಷ್ಟಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.