ADVERTISEMENT

ಆಳ–ಅಗಲ: ಭಾರತದ ಟೆಸ್ಟ್ ಕ್ರಿಕೆಟ್ ಸ್ಥಿತಿ ‘ಗಂಭೀರ’!

ಸ್ಪಿನ್ ಕಲೆಯನ್ನು ಜಗತ್ತಿಗೆ ಕಲಿಸಿಕೊಟ್ಟ ಭಾರತವು ಈಗ ಸ್ಪಿನ್ ಎದುರು ಬ್ಯಾಟಿಂಗ್ ಮಾಡಲು ಮರೆತಿದೆ.

ಗಿರೀಶ ದೊಡ್ಡಮನಿ
Published 27 ನವೆಂಬರ್ 2025, 23:59 IST
Last Updated 27 ನವೆಂಬರ್ 2025, 23:59 IST
<div class="paragraphs"><p>ಆಳ–ಅಗಲ: ಭಾರತದ ಟೆಸ್ಟ್ ಕ್ರಿಕೆಟ್ ಸ್ಥಿತಿ ‘ಗಂಭೀರ’!</p></div>

ಆಳ–ಅಗಲ: ಭಾರತದ ಟೆಸ್ಟ್ ಕ್ರಿಕೆಟ್ ಸ್ಥಿತಿ ‘ಗಂಭೀರ’!

   

ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರು ಟೆಸ್ಟ್ ಸರಣಿ ಸೋತಿತು. ಆ ಹೊತ್ತಿನಲ್ಲಿಯೇ ಪರ್ತ್‌ನಲ್ಲಿ ಆ್ಯಷಸ್ ಸರಣಿಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾ ಎದುರು ಹೀನಾಯವಾಗಿ ಪರಾಭವಗೊಂಡಿತು. ಎರಡೇ ದಿನದಲ್ಲಿ ಪಂದ್ಯ ಮುಗಿದಿತ್ತು. ಆದರೆ ಹೆಚ್ಚು ಚರ್ಚೆಯಾಗುತ್ತಿರುವುದು ಭಾರತದ ಸೋಲಿನ ಬಗ್ಗೆ. ಅದರಲ್ಲೂ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಕಾರ್ಯವೈಖರಿ ಕುರಿತು ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ.  ಸ್ಪಿನ್ ಕಲೆಯನ್ನು ಜಗತ್ತಿಗೆ ಕಲಿಸಿಕೊಟ್ಟ ಭಾರತವು ಈಗ ಸ್ಪಿನ್ ಎದುರು ಬ್ಯಾಟಿಂಗ್ ಮಾಡಲು ಮರೆತಿದೆ. ಬೌಲಿಂಗ್ ಕೂಡ ಅಷ್ಟಕ್ಕಷ್ಟೆ. ‌ಒಟ್ಟಿನಲ್ಲಿ ಭಾರತದ ಟೆಸ್ಟ್ ಕ್ರಿಕೆಟ್ ಭವಿಷ್ಯ ಡೋಲಾಯಮಾನವಾಗಿದೆ

––––––

ADVERTISEMENT

ಗುವಾಹಟಿಯ ಪಿಚ್‌ ಮೇಲೆ ಹತಾಶೆಯಿಂದ ಮಂಡಿಯೂರಿ ಹಣೆಯನ್ನು ನೆಲಕ್ಕೆ ಹಚ್ಚಿದ್ದ ರವೀಂದ್ರ ಜಡೇಜ ಕಂಗಳಿಂದ ಜಾರಿದ್ದ ಹನಿಗಳು ಮಣ್ಣಿನಲ್ಲಿ ಬೆರೆತುಹೋದವು. ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟೆಸ್ಟ್‌ನಲ್ಲಿ ಸೋಲುವುದನ್ನು ತಪ್ಪಿಸಲು ಅವರು ಮಾಡಿದ ಹೋರಾಟವೂ ಮಣ್ಣುಪಾಲಾಯಿತು. ಪರಿಣತ ಬ್ಯಾಟರ್‌ಗಳು ವಿಫಲವಾಗಿದ್ದ ಅಂಗಣದಲ್ಲಿ ಸ್ಪಿನ್ನರ್‌–ಆಲ್‌ರೌಂಡರ್ ಜಡೇಜ ಅರ್ಧಶತಕ ಹೊಡೆದಿದ್ದರು. ಅವರು ತೋರಿದ್ದ ಛಲ, ಬಲ ಮತ್ತು ಹೋರಾಟವು ಇನ್ನುಳಿದ ಆಟಗಾರರಲ್ಲಿ ಕಾಣಲಿಲ್ಲ. ಅದರ ಫಲವಾಗಿ ತಂಡವು 408 ರನ್‌ಗಳ ಹೀನಾಯ ಸೋಲು ಅನುಭವಿಸಿತು.

ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳ ಆಕ್ರೋಶ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರತ್ತ ತಿರುಗಿತು. ‘ಗೋ ಬ್ಯಾಕ್‌...’ ಘೋಷಣೆಗಳು ಪ್ರತಿಧ್ವನಿಸಿದವು. ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಕಟ್ಟೆಯೊಡೆಯಿತು. ಒಂದು ವರ್ಷದ ಅಂತರದಲ್ಲಿ ಭಾರತ ತಂಡವು ತವರಿನಲ್ಲಿ ನಡೆದ ಎರಡು ಸರಣಿಗಳಲ್ಲಿ ವೈಟ್‌ವಾಷ್ ಆಗಿರುವುದೇ ಈ ಅಸಮಾಧಾನಕ್ಕೆ ಕಾರಣವಾಗಿದೆ. ಗಂಭೀರ್‌ ಬಂದ ನಂತರ ಭಾರತ ತಂಡವು 2–0ಯಿಂದ ಬಾಂಗ್ಲಾದೇಶ ಎದುರು ಟೆಸ್ಟ್ ಸರಣಿಯಲ್ಲಿ ಗೆದ್ದಿತು. ಅದರ ನಂತರ ತವರಿನಲ್ಲಿ ನಡೆದ ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ 0–3ರಿಂದ ಮಂಡಿಯೂರಿತು. ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಸರಣಿಯಲ್ಲಿ 1–3ರಿಂದ ಸೋತಿತ್ತು. ಇಂಗ್ಲೆಂಡ್‌ನಲ್ಲಿ 2–2ರ ಸಮಬಲ ಸಾಧಿಸಿದ್ದು, ಈಚೆಗೆ ಭಾರತದಲ್ಲಿಯೇ ನಡೆದಿದ್ದ ವೆಸ್ಟ್ ಇಂಡಿಸ್ ಎದುರಿನ ಸರಣಿ ಗೆಲುವು ಅವರ ಖಾತೆಯಲ್ಲಿವೆ.

ಭಾರತದ ಟೆಸ್ಟ್ ಕ್ರಿಕೆಟ್ ಅಧಃಪತನವಾಗಿರುವುದಂತೂ ಸತ್ಯ. ಉತ್ತುಂಗದಲ್ಲಿದ್ದ ದೇಶದ ಕ್ರಿಕೆಟ್ ಘನತೆ ಮಣ್ಣುಪಾಲಾಗಿದೆ. ಇದು ಗಂಭೀರ್ ಅವರು ಕಳೆದ ವರ್ಷ ಮುಖ್ಯ ಕೋಚ್ ಆಗಿ ಬಂದ ನಂತರ ಆಗುತ್ತಿರುವುದು ಗಮನಿಸಬೇಕಾದ ಸಂಗತಿ. ಕಳೆದ 66 ವರ್ಷಗಳ ಇತಿಹಾಸದಲ್ಲಿ ಈ ರೀತಿಯ ಹಿನ್ನಡೆಯನ್ನು ಭಾರತವು ಟೆಸ್ಟ್ ಕ್ರಿಕೆಟ್‌ನಲ್ಲಿ ಕಂಡಿರಲಿಲ್ಲ. ತವರಿನಲ್ಲಿ ಎರಡು ಸರಣಿಗಳಲ್ಲಿ ವೈಟ್‌ವಾಷ್ ಆಗಿರುವುದು ತಲೆತಗ್ಗಿಸುವ ವಿಚಾರವೇ ಸರಿ. ಹಾಗಿದ್ದರೆ, ಕೇವಲ ಗಂಭೀರ್ ಅವರೊಬ್ಬರತ್ತ ಬೊಟ್ಟು ತೋರಿಸಿದರೆ ಸಾಕೇ? ಇದರಲ್ಲಿ ತಂಡದ ಆಟಗಾರರ ಪಾತ್ರ ಇಲ್ಲವೇ? 

‘ಕೋಚ್ ಆದವರು ತಂಡವನ್ನು ಸಿದ್ಧಗೊಳಿಸುತ್ತಾರೆ. ಆದರೆ ಮೈದಾನದಲ್ಲಿ ಆಡಬೇಕಾದವರು ಆಟಗಾರರೇ ಅಲ್ಲವೇ? ಕೋಚ್ ತಮ್ಮ ಅನುಭವಕ್ಕೆ ತಕ್ಕ ಸಲಹೆ, ಸೂಚನೆಗಳನ್ನು ನೀಡುತ್ತಾರೆ. ಅವುಗಳನ್ನು ಅರಿತು ಆಡಬೇಕಾದವರು ಆಟಗಾರರೇ’ ಎಂದು ದಿಗ್ಗಜ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಅಭಿಪ್ರಾಯವನ್ನು ಇಲ್ಲಿ ಗಮನಿಸಬಹುದು. ದಕ್ಷಿಣ ಆಫ್ರಿಕಾ ಎದುರು ಆಡಿದ ತಂಡದಲ್ಲಿ ಯುವ ಆಟಗಾರರೇ ಹೆಚ್ಚಿದ್ದರು. ಆದರೆ ವರ್ಷದ ಹಿಂದೆ ಕಿವೀಸ್ ಎದುರು ನಡೆದ ಸರಣಿಯ ಕತೆ ಏನು? 

ನ್ಯೂಜಿಲೆಂಡ್ ತಂಡವು 1955–56ರಿಂದ 12 ಸಲ ಭಾರತ ಪ್ರವಾಸ ಮಾಡಿತ್ತು. ಆದರೆ ಹೋದವರ್ಷವೇ ಅವರಿಗೆ ಸರಣಿ ಜಯಿಸಲು ಸಾಧ್ಯವಾಗಿತ್ತು. ಬೆಂಗಳೂರಿನಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 46 ರನ್‌ಗಳಿಗೆ ಭಾರತ ತಂಡವು ಮುಗ್ಗರಿಸಿತ್ತು. ಅಷ್ಟೇನೂ ಅನುಭವಿಗಳಿಲ್ಲದ ಕಿವೀಸ್ ತಂಡದ ಎದುರು ತಂಡವು ಹೀನಾಯ ಸ್ಥಿತಿ ತಲುಪಿತ್ತು. ರೋಹಿತ್ ಶರ್ಮಾ ತಂಡದ ನಾಯಕರಾಗಿದ್ದರು. ವಿರಾಟ್ ಕೊಹ್ಲಿ ಕೂಡ ತಂಡದಲ್ಲಿದ್ದರು. ಆದರೆ ಬೆಂಗಳೂರು ಪಂದ್ಯದ ಸೋಲಿನಿಂದ ತಂಡವು ಬುದ್ಧಿ ಕಲಿಯಲಿಲ್ಲ. ಸರಣಿಯ ಎಲ್ಲ ಪಂದ್ಯಗಳಲ್ಲಿಯೂ ಸೋತಿತು. ನಂತರ ಆಸ್ಟ್ರೇಲಿಯಾದಲ್ಲಿಯೂ ನಿರಾಶೆ. ಖ್ಯಾತನಾಮ ಸ್ಪಿನ್ನರ್ ಆರ್.ಅಶ್ವಿನ್ ಅವರ ದಿಢೀರ್ ನಿವೃತ್ತಿ ಘೋಷಣೆ ಚರ್ಚೆಗೆ ಗ್ರಾಸವಾಯಿತು. ಅಲ್ಲದೇ ಡ್ರೆಸಿಂಗ್ ರೂಮ್ ವಾತಾವರಣ ಹದ ತಪ್ಪಿರುವ ಕುರಿತ ಗಾಳಿಸುದ್ದಿಗಳು ಓಡಾಡಿದವು.

ಕಳೆದ ಜುಲೈನಲ್ಲಿ ಇಂಗ್ಲೆಂಡ್ ಟೆಸ್ಟ್ ಸರಣಿಗೂ ಕೆಲವು ದಿನಗಳ ಮುನ್ನ ರೋಹಿತ್ ಮತ್ತು ಕೊಹ್ಲಿ ಅವರು ನಿವೃತ್ತಿ ಘೋಷಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿಯುವುದಾಗಿ ಹೇಳಿದರು. ಹೊಸ ನಾಯಕ ಶುಭಮನ್ ಗಿಲ್ ಅವರ ಬಳಗವು ಇಂಗ್ಲೆಂಡ್‌ನಲ್ಲಿ ಸಮಬಲ ಸಾಧಿಸಿ ಬಂದಿದ್ದು ದೊಡ್ಡ ಸಾಧನೆಯಾಯಿತು. ಮೇಲ್ನೋಟಕ್ಕೆ ಸಮಸ್ಯೆ ಬಗೆಹರಿದಂತೆ ಕಂಡಿತು. ಆದರೆ ಇದೀಗ ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡವು ಭಾರತ ತಂಡದೊಳಗೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಬಹಿರಂಗಗೊಳಿಸಿದೆ.

ಆಲ್‌ರೌಂಡರ್‌ ವ್ಯಾಮೋಹ

ಗಂಭೀರ್ ಅವರು ಹನ್ನೊಂದರ ಬಳಗವನ್ನು ಆಯ್ಕೆ ಮಾಡುತ್ತಿರುವ ವಿಧಾನ ಮತ್ತು ಬ್ಯಾಟರ್‌ಗಳ ಕ್ರಮಾಂಕದ ಕುರಿತು ಈಗ ಚರ್ಚೆ ಜೋರಾಗಿದೆ. ಬ್ಯಾಟಿಂಗ್‌ ಕ್ರಮಾಂಕಕ್ಕೆ ಬಲ ತುಂಬಲು ಹೆಚ್ಚು ಆಲ್‌ರೌಂಡರ್‌ಗಳಿಗೆ ಸ್ಥಾನ ನೀಡುವ ಗಂಭೀರ್ ಅವರ ಯೋಜನೆ ಕೈಕೊಡುತ್ತಿದೆ. ವಾಷಿಂಗ್ಟನ್ ಅವರನ್ನು ಮೊದಲ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿಸಲಾಯಿತು. ಎರಡನೆಯದ್ದರಲ್ಲಿ ಎಂಟನೇ ಕ್ರಮಾಂಕದಲ್ಲಿ ಆಡಿಸಲಾಯಿತು. ಗಾಯಗೊಂಡ ಶುಭಮನ್ ಗಿಲ್ ಬದಲು  ನಿತೀಶ್ ಕುಮಾರ್ ರೆಡ್ಡಿ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ಪ್ರಯೋಜನವಾಗಲಿಲ್ಲ.

ಇನ್ನು ಸ್ಪಿನ್ ಬೌಲರ್‌ಗಳೂ ಬ್ಯಾಟಿಂಗ್‌ಗೆ ಹೆಚ್ಚು ನೆರವು ಇದ್ದ ಪಿಚ್‌ನಲ್ಲಿ ಯಶಸ್ವಿಯಾಗುವ ಕಲೆಯನ್ನು ಮರೆತಂತಿದೆ. ಬಾಲಂಗೋಚಿ ಬ್ಯಾಟರ್‌ ಮಾರ್ಕೊ ಅವರಿಂದ ದಂಡಿಸಿಕೊಂಡ ರೀತಿಯೇ ಈ ಮಾತಿಗೆ ಉದಾಹರಣೆ. ಭಾರತ ಕ್ರಿಕೆಟ್‌ನ ಇತಿಹಾಸದ ಪುಟಗಳನ್ನು ಮತ್ತೊಮ್ಮೆ ತೆರೆದುನೋಡುವ ಅವಶ್ಯಕತೆ ಅವರಿಗೆ ಇದೆ. ವೆಂಕಟರಾಘವನ್‌, ಎರ್‍ರಪಳ್ಳಿ ಪ್ರಸನ್ನ, ಬಿಷನ್ ಸಿಂಗ್ ಬೇಡಿ, ಬಿ.ಎಸ್. ಚಂದ್ರಶೇಖರ್, ಅನಿಲ್ ಕುಂಬ್ಳೆ, ಆರ್. ಅಶ್ವಿನ್, ಹರಭಜನ್ ಸಿಂಗ್ ಅವರು ಬಲಾಢ್ಯ ತಂಡಗಳ ಬ್ಯಾಟರ್‌ಗಳ ಸವಾಲನ್ನು ಮೆಟ್ಟಿ ನಿಂತ ಐತಿಹಾಸಿಕ ಘಟನೆಗಳನ್ನು ಮತ್ತೊಮ್ಮೆ ನೋಡಿ ಕಲಿಯಬೇಕು. 

‘ಭಾರತದಲ್ಲಿ ಸರಣಿ ಆಡಲು ಬರುವ ತಂಡಗಳು ಆತಂಕದೊಂದಿಗೇ ಬರುತ್ತಿದ್ದವು. ಅದಕ್ಕೆ ಕಾರಣ ಭಾರತ ತಂಡಕ್ಕೆ ಇದ್ದ ಪ್ರಭಾವಳಿ. ಆದರೆ ಈಗ ಅಂತಹ ಪ್ರಭಾವಳಿಯೇ ಕಾಣುತ್ತಿಲ್ಲ’ ಎಂದು ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಹೇಳಿದ್ದಾರೆ.  

ಆ ವೈಭವವನ್ನು ಮರಳಿ ತರಲು ಬಿಸಿಸಿಐ ಏನು ಹೆಜ್ಜೆ ಇಡಲಿದೆ ಎಂಬ ಕುತೂಹಲ ಈಗ ಗರಿಗೆದರಿದೆ.  ಈ ಪ್ರಕ್ರಿಯೆಯಲ್ಲಿ ಗಂಭೀರ್ ಸ್ಥಾನ ಕಳೆದುಕೊಳ್ಳುವರೇ ಅಥವಾ ಮುಂಬರುವ ಟಿ20 ವಿಶ್ವಕಪ್ ಟೂರ್ನಿ ಮುಗಿಯುವವರೆಗೂ ಮುಂದುವರಿಯುವರೇ ಎಂದು ಕಾದು ನೋಡಬೇಕಿದೆ.

ಡಬ್ಲ್ಯುಟಿಸಿ ರ‍್ಯಾಂಕ್‌ ಕುಸಿತ

ಭಾರತ ತಂಡವು ಸದ್ಯ ಡಬ್ಲ್ಯುಟಿಸಿ ರ‍್ಯಾಂಕ್‌ನಲ್ಲಿ ಐದನೇ ಸ್ಥಾನಕ್ಕೆ ಕುಸಿದಿದೆ. ಇನ್ನುಳಿದ ಟೂರ್ನಿಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸುವ ಒತ್ತಡವಿದೆ. ಭಾರತ ತಂಡವು ತನ್ನಮುಂದಿನ ಟೆಸ್ಟ್ ಸರಣಿಯನ್ನು ಮುಂದಿನ ವರ್ಷದ ಆಗಸ್ಟ್‌ನಲ್ಲಿ ಆಡಲಿದೆ. ಅಲ್ಲಿಯವರೆಗೂ ಬಿಳಿ ಚೆಂಡಿನ ಕ್ರಿಕೆಟ್‌ ಭರಾಟೆ ಜೋರಾಗಲಿದೆ. 

ಸ್ಪಿನ್ ಆಡಲು ಬರಲ್ಲವೇ?

‘ಸ್ಪಿನ್ ಸುಲ್ತಾನರ ನಾಡು’ ಎಂಬ ಹೆಗ್ಗಳಿಕೆ ಹೊಂದಿರುವ ಭಾರತದಲ್ಲಿ ಈಗ ಸ್ಪಿನ್ ಬೌಲಿಂಗ್ ಎಂಬ ಕಲೆ ಅಸ್ತಿತ್ವ ಕಳೆದುಕೊಂಡಿದೆ ಎಂಬುದನ್ನೂ ತೆಂಬಾ ಬವುಮಾ ಬಳಗ ತೋರಿಸಿಕೊಟ್ಟಿದೆ.  

‘ದಶಕಗಳ ಹಿಂದೆ ಭಾರತಕ್ಕೆ ಸರಣಿ ಆಡಲು ಬರುವ ತಂಡಗಳು ಹೆದರುತ್ತಿದ್ದವು. ಆದರೆ ಈಗ ಹಾಗಿಲ್ಲ. ಭಾರತದಲ್ಲಿ ಸರಣಿ ಆಡಿದರೆ ತಮ್ಮ ಯಶಸ್ಸಿನ ಸೂಚ್ಯಂಕವನ್ನು ಹೆಚ್ಚು ಮಾಡಿಕೊಳ್ಳುವ ವಿಶ್ವಾಸದೊಂದಿಗೆ ವಿದೇಶಿ ಆಟಗಾರರು ಬರುತ್ತಿದ್ದಾರೆ’ ಎಂದು ವೀಕ್ಷಕ ವಿವರಣೆಗಾರ ದಿನೇಶ್ ಕಾರ್ತಿಕ್ ವ್ಯಂಗ್ಯ ಮಾಡಿದ್ದಾರೆ. 

ಅವರ ಮಾತುಗಳಲ್ಲಿ ಅರ್ಥವಿದೆ. ಕಿವೀಸ್ ಎದುರಿನ ಸರಣಿಯಲ್ಲಿ ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ ಅವರು ಯಶಸ್ವಿಯಾಗುವುದರೊಂದಿಗೆ ತಾರಾಪಟ್ಟಕ್ಕೇರಿದರು. ಇದೀಗ ದಕ್ಷಿಣ ಆಫ್ರಿಕಾದ ಸಿಮೊನ್ ಹಾರ್ಮರ್ ಪ್ರವರ್ಧಮಾನಕ್ಕೆ ಬಂದಿದ್ದಾರೆ. 

ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಭಾರತ ತಂಡವು ಪ್ರಮುಖವಾಗಿ ವಿಫಲವಾಗಿದ್ದು ಬ್ಯಾಟಿಂಗ್‌ನಲ್ಲಿ. ಪರಿಣತ ಬ್ಯಾಟರ್‌ಗಳಾದ  ಕೆ.ಎಲ್. ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್,  ರಿಷಭ್ ಪಂತ್, ಧ್ರುವ ಜುರೇಲ್ ಅವರಿಗೆ ಎರಡು ಪಂದ್ಯಗಳಿಂದ ಮೂರಂಕಿ ಮೊತ್ತ ಸೇರಿಸಲು ಸಾಧ್ಯವಾಗಲಿಲ್ಲ. ಇದ್ದುದರಲ್ಲಿ ಸ್ಪಿನ್‌–ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ ಅವರು ಬ್ಯಾಟರ್‌ಗಳಿಗಿಂತ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಕಳೆದರು. ದೇಶಿ ಕ್ರಿಕೆಟ್ ವ್ಯವಸ್ಥೆ ಅತ್ಯಂತ ಬಲಿಷ್ಠವಾಗಿರುವ ದೇಶಗಳಲ್ಲಿ ಭಾರತ ಅಗ್ರಗಣ್ಯವಾಗಿದೆ. ರಣಜಿ ಟ್ರೋಫಿ ಪಂದ್ಯಗಳು ನಡೆಯುವ ಪಿಚ್‌ಗಳಲ್ಲಿ ಸ್ಪಿನ್ನರ್‌ಗಳು ಮಿಂಚುವುದೇ ಹೆಚ್ಚು. ಆದರೂ ಹಾರ್ಮರ್ ಅವರಂತಹ ಸ್ಪಿನ್ನರ್‌ಗಳನ್ನು ಎದುರಿಸುವಲ್ಲಿ ಬ್ಯಾಟರ್‌ಗಳು ವಿಫಲವಾಗಿದ್ದು ಯಾಕೆ?

ಇನ್ನು ಸ್ಪಿನ್ ಬೌಲಿಂಗ್ ಕೂಡ ಈ ಸರಣಿಯಲ್ಲಿ ಉತ್ಕೃಷ್ಟವಾಗಿರಲಿಲ್ಲ. ಈಡನ್ ಗಾರ್ಡನ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಚೆಂಡು ಯರ್‍ರಾಬಿರ್‍ರಿ  ತಿರುಗುತ್ತಿತ್ತು. ಅದರಲ್ಲಿಯೇ ಎರಡನೇ ಇನಿಂಗ್ಸ್‌ನಲ್ಲಿ ಬವುಮಾ ಗಳಿಸಿದ ಹೋರಾಟದ ಅರ್ಧಶತಕ ಸ್ಪಿನ್ ಬೌಲಿಂಗ್‌ ಎದುರಿಸಿ ನಿಲ್ಲುವ ಪಾಠ ಕಲಿಸಿತ್ತು. ಆದರೆ ಗುವಾಹಟಿಯ ಪಿಚ್‌ ಬ್ಯಾಟರ್‌ಗಳಿಗೇ ಹೆಚ್ಚು ಉಪಯುಕ್ತವಾಗಿತ್ತು. ಕೇವಲ ಏಳು ಟೆಸ್ಟ್ ಪಂದ್ಯಗಳನ್ನಾಡಿದ ಅನುಭವಿ ಸೆನುರನ್ ಮುತ್ತುಸಾಮಿ ಶತಕ ಬಾರಿಸಿದರು. ಮಾರ್ಕೋ ಯಾನ್ಸೆನ್ ಅವರು ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಭಾರತದ ರವೀಂದ್ರ ಜಡೇಜ ಅವರ ದಿಟ್ಟ ಅರ್ಧಶತಕವೂ ಕಲಾತ್ಮಕವಾಗಿತ್ತು. ಸ್ವೀಪ್, ಸ್ಲಾಗ್ ಸ್ವೀಪ್, ಫ್ರಂಟ್‌ಫೂಟ್ ಡ್ರೈವ್‌ಗಳ ಮಿಶ್ರಣ ಗಮನಿಸುವಂತಿತ್ತು.

ಕ್ಷಮೆಯಾಚಿಸಿದ ಪಂತ್

ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಯ ಸೋಲಿಗೆ ಭಾರತ ತಂಡದ ಹಂಗಾಮಿ ನಾಯಕ ರಿಷಭ್ ಪಂತ್  ಅವರು ಕ್ಷಮೆ ಕೇಳಿದ್ದಾರೆ.

‘ಮತ್ತೆ ಒಗ್ಗೂಡಿ, ಮುಂದೆ ಸಾಗುವತ್ತ ಚಿತ್ತ ಹರಿಸುತ್ತೇವೆ’ ಎಂದು ಪಂತ್ ಹೇಳಿದ್ದಾರೆ.  ‘ಕಳೆದೆರಡು ವಾರಗಳಲ್ಲಿ ನಾವು ಒಳ್ಳೆಯ ಕ್ರಿಕೆಟ್ ಆಡಿಲ್ಲವೆಂಬ ಸತ್ಯವನ್ನು ಒಪ್ಪಿಕೊಳ್ಳಲು ನನಗೆ ಹಿಂಜರಿಕೆ ಇಲ್ಲ. ತಂಡವಾಗಿ ಮತ್ತು ವೈಯಕ್ತಿಕವಾಗಿ ಉತ್ಕೃಷ್ಟ ದರ್ಜೆಯ ಕ್ರಿಕೆಟ್ ಆಡಿ ಲಕ್ಷಾಂತರ ಭಾರತೀಯರನ್ನು ಸಂತುಷ್ಟಗೊಳಿಸಲು ನಾವು ಪ್ರಯತ್ನಿಸುತ್ತೇವೆ. ಆದರೆ ಈ ಬಾರಿ ನಿರೀಕ್ಷೆಗಳಿಗೆ ತಕ್ಕಂತಹ ಫಲಿತಾಂಶ ನೀಡಲು ನಮ್ಮಿಂದ ಸಾಧ್ಯವಾಗಿಲ್ಲ. ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ. ಈ ತಂಡದಲ್ಲಿ ಪುಟಿದೇಳುವ ಸಾಮರ್ಥ್ಯ ಇದೆ. ಮತ್ತೆ ಎಲ್ಲ ಶಕ್ತಿ  ಒಗ್ಗೂಡಿಸಿಕೊಂಡು ಕಣಕ್ಕೆ ಮರಳುತ್ತೇವೆ. ಕಠಿಣ ಪರಿಶ್ರಮದೊಂದಿಗೆ ಗೆಲುವಿನತ್ತ ಸಾಗುತ್ತೇವೆ’ ಎಂದು ಪಂತ್ ‘ಎಕ್ಸ್‌’ನಲ್ಲಿ ಸಂದೇಶ ಹಾಕಿದ್ದಾರೆ. 

ದಕ್ಷಿಣ ಆಫ್ರಿಕಾದ ಸರಣಿಯಲ್ಲಿ ಶುಭಮನ್ ಗಿಲ್ ಗಾಯಗೊಂಡಿದ್ದರಿಂದ ಎರಡನೇ ಟೆಸ್ಟ್‌ನಲ್ಲಿ ಪಂತ್ ಅವರು ನಾಯಕತ್ವ ವಹಿಸಿದ್ದರು.

–––

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.