
ಜೈಪುರ: ಭಾರತ ತಂಡದ ಕೋಚ್ ಆಗಿ ಸೀಮಿತ ಓವರುಗಳ ಕ್ರಿಕೆಟ್‌ನಲ್ಲಿ ಗೌತಮ್ ಗಂಭೀರ್ ಅವರ ದಾಖಲೆ ಪ್ರಭಾವಶಾಲಿಯಾಗಿದೆ. ಐಸಿಸಿ ಮತ್ತು ಎಸಿಸಿ ಟೂರ್ನಿಗಳ ಎರಡೂ ಮಾದರಿಗಳಲ್ಲಿ ಭಾರತ ಟ್ರೋಫಿಗಳನ್ನು ಗೆದ್ದಿದೆ. ಆದರೆ ಟೆಸ್ಟ್ ಮಾದರಿಗೆ ಬಂದಾಗ ಇದೇ ಮಾತನ್ನು ಹೇಳುವಂತಿಲ್ಲ.
ಗಂಭೀರ್ ಕೋಚ್ ಆಗಿರುವ ಅವಧಿಯಲ್ಲಿ ‘ಸೇನಾ’ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) ತಂಡಗಳ ವಿರುದ್ಧ ಭಾರತ ಒಟ್ಟು 10 ಟೆಸ್ಟ್‌ಗಳನ್ನು ಸೋತಿದೆ.
ದಕ್ಷಿಣ ಆಫ್ರಿಕಾ ಎದುರು ಸರಣಿಯಲ್ಲಿ 0–2 ಕ್ಲೀನ್‌ಸ್ವೀಪ್‌ಗೆ ಒಳಗಾದ ನಂತರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಪ್ರಭಾವಶಾಲಿ ವ್ಯಕ್ತಿಯೊಬ್ಬರು ವಿ.ವಿ.ಎಸ್.ಲಕ್ಷ್ಮಣ್ ಅವರನ್ನು ಭೇಟಿಯಾಗಿ ಅನೌಪಚಾರಿಕ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಅವರಿಗೆ ಟೆಸ್ಟ್ ತಂಡದ ಮುಖ್ಯ ಕೋಚ್ ಪಾತ್ರದಲ್ಲಿ ಆಸಕ್ತಿಯಿದೆಯೇ ಎಂದು ಕೇಳಿದ್ದಾರೆ. ಆದರೆ ಬ್ಯಾಟಿಂಗ್ ತಾರೆ ಲಕ್ಷ್ಮಣ್ ಅವರು ತಾವು ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಹುದ್ದೆಯಲ್ಲಿ ಸಂತೃಪ್ತಿ ಕಾಣುತ್ತಿರುವುದಾಗಿ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.
ಒಪ್ಪಂದದ ಪ್ರಕಾರ ಕೋಚ್ ಆಗಿ ಗಂಭೀರ್ ಅವರ ಅವಧಿ 2027ರ ಏಕದಿನ ವಿಶ್ವಕಪ್‌ವರೆಗೆ ಇದೆ. ಆದರೆ ಫೆಬ್ರುವರಿ– ಮಾರ್ಚ್‌ನಲ್ಲಿ ನಡೆಯುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ನೀಡುವ ಪ್ರದರ್ಶನದ ಅಧಾರದಲ್ಲಿ ಅವರ ಸ್ಥಾನ ಎಷ್ಟು ಸಮಯ ಮುಂದುವರಿಯಲಿದೆ ಎಂಬುದರ ನಿರ್ಧಾರವಾಗಲಿದೆ.
2025–27ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಆವೃತ್ತಿಯಲ್ಲಿ ಭಾರತಕ್ಕೆ ಇನ್ನೂ ಒಂಬತ್ತು ಟೆಸ್ಟ್‌ಗಳನ್ನು ಆಡಲು ಇದೆ. ಗಂಭೀರ್ ಅಲ್ಲಿಯವರೆಗೆ ‘ಟೆಸ್ಟ್’ ತಂಡದ ಕೋಚ್ ಆಗಲು ಸೂಕ್ತ ವ್ಯಕ್ತಿಯೇ ಎಂಬ ಪ್ರಶ್ನೆ ಎದುರಾಗಿದೆ. ಬಿಸಿಸಿಐ ಪಡಸಾಲೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿದೆ.
ಭಾರತ ತಂಡವು ಮುಂದಿನ (2026) ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್‌ಗಳನ್ನು ಆಡಲಿದೆ. ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಬೇಕಿದೆ. 2027ರ ಜನವರಿ–ಫೆಬ್ರುವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಐದು ಟೆಸ್ಟ್‌ಗಳ ಸರಣಿಗೆ ಆತಿಥ್ಯ ವಹಿಸಲಿದೆ.
‘ಭಾರತ ಕ್ರಿಕೆಟ್‌ನ ಶಕ್ತಿಕೇಂದ್ರ ಗಂಭೀರ್ ಅವರ ಬೆನ್ನಿಗಿದೆ. ಭಾರತ ತಂಡವು ಟಿ20 ವಿಶ್ವಕಪ್ ಗೆದ್ದರೆ ಅಥವಾ ಕಡೇಪಕ್ಷ ಫೈನಲ್ ತಲುಪಿದರೆ, ಅವರು ತಮ್ಮ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಆದರೆ ಅವರು ಟೆಸ್ಟ್ ತಂಡಕ್ಕೂ ಕೋಚ್ ಆಗಿ ಮುಂದುವರಿಯುತ್ತಾರೆಯೇ ಎಂಬುದು ಕುತೂಹಲದ ವಿಷಯ’ ಎಂದು ಮಂಡಳಿಯ ಮೂಲವೊಂದು ಪಿಟಿಐಗೆ ತಿಳಿಸಿದೆ.
‘ಸಾಕಷ್ಟು ಪರ್ಯಾಯಗಳು ಇಲ್ಲದಿರುವುದು ಗಂಭೀರ್ ಅವರಿಗೆ ಇರುವ ಒಂದು ಅನುಕೂಲ. ಸೀನಿಯರ್ ಟೆಸ್ಟ್ ತಂಡಕ್ಕೆ ಕೋಚ್ ಆಗಲು ಲಕ್ಷ್ಮಣ್ ಆಸಕ್ತಿ ತೋರಿಸಿಲ್ಲ’ ಎಂದು ಮೂಲ ತಿಳಿಸಿದೆ.
ಗಂಭೀರ್ ಅವರ ಅವಧಿಯಲ್ಲಿ ಡ್ರೆಸಿಂಗ್ ರೂಮ್‌ನಲ್ಲೂ ಗೊಂದಲ ಇದೆ. ಕೆಲವು ಆಟಗಾರರಿಗೆ ತಾವು ತಂಡದಲ್ಲಿ ಭದ್ರ ಎಂಬ ಭಾವನೆ ಮೂಡಿಲ್ಲ. ರಾಹುಲ್ ದ್ರಾವಿಡ್ ಕೋಚ್ ಆಗಿದ್ದಾಗ ಆಟಗಾರರಿಗೆ ನಿರ್ದಿಷ್ಟ ಪಾತ್ರಗಳಿದ್ದವು.
ಇತ್ತೀಚೆಗೆ ಟಿ20 ವಿಶ್ವಕಪ್‌ಗೆ ಶುಭಮನ್ ಗಿಲ್ ಅವರನ್ನು ಕೈಬಿಡಲಾಗಿತ್ತು. ಇದರಲ್ಲಿ ಗಂಭೀರ್ ಕೈವಾಡ ಇದೆ ಎಂಬ ಮಾತುಗಳಿವೆ.
‘ಭಾರತ ಕ್ರಿಕೆಟ್‌ನ ಪೋಸ್ಟರ್ ಬಾಯ್ ಆಟಗಾರನನ್ನೇ ತೆಗೆದುಬಿಡಬಹುದಾದರೆ ಯಾರನ್ನು ಬೇಕಾದರೂ ಕೈಬಿಡಬಹುದು’ ಎಂಬ ಭಾವನೆ ಇತರ ಆಟಗಾರರಲ್ಲಿ ಮೂಡಿದೆ. ಆದರೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರ್ಧಾರ ಕೈಗೊಳ್ಳಲು ಹಿಂದೆಲ್ಲಾ ಸಾಕಷ್ಟು ಸಮಯ ತೆಗೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.