ADVERTISEMENT

ನಾಯಕತ್ವ ವಿವಾದ: ಕೊಹ್ಲಿ ಹೇಳಿಕೆ ಬಗ್ಗೆ ಗಂಗೂಲಿ ಸ್ಪಷ್ಟಪಡಿಸಲಿ– ಗವಾಸ್ಕರ್

ಪಿಟಿಐ
Published 16 ಡಿಸೆಂಬರ್ 2021, 12:41 IST
Last Updated 16 ಡಿಸೆಂಬರ್ 2021, 12:41 IST
ಸುನಿಲ್ ಗವಾಸ್ಕರ್: ಎಎಫ್‌ಪಿ ಚಿತ್ರ
ಸುನಿಲ್ ಗವಾಸ್ಕರ್: ಎಎಫ್‌ಪಿ ಚಿತ್ರ   

ನವದೆಹಲಿ: ನಾಯಕತ್ವ ವಿವಾದದ ಬಗ್ಗೆ ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ನೀಡಿರುವ ಹೇಳಿಕೆಗಳ ಬಗ್ಗೆ ಸ್ಪಷ್ಟನೆ ನೀಡಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೂಕ್ತ ವ್ಯಕ್ತಿ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ಧಾರೆ.

ವಿರಾಟ್ ಕೊಹ್ಲಿಯವರು ಟಿ–20 ನಾಯಕತ್ವವನ್ನು ತ್ಯಜಿಸಿದಾಗ ಅವರ ನಿರ್ಧಾರವನ್ನು ಮರುಪರಿಶೀಲನೆ ನಡೆಸುವಂತೆ ಬಿಸಿಸಿಐ ಕೇಳಿತ್ತು ಎಂದು ಸೌರವ್ ಗಂಗೂಲಿ ಹೇಳಿದ್ದರು. ಆದರೆ, ಬಿಸಿಸಿಐನಿಂದ ಆ ರೀತಿಯ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ನನ್ನ ನಿರ್ಧಾರವನ್ನು ಸ್ವಾಗತಿಸಲಾಗಿತ್ತು ಎಂದು ನಿನ್ನೆಯ ಪತ್ರಿಕಾಗೋಷ್ಠಿಯಲ್ಲಿ ಗಂಗೂಲಿ ಹೇಳಿಕೆಯನ್ನು ವಿರಾಟ್ ಕೊಹ್ಲಿ ಅಲ್ಲಗಳೆದಿದ್ದರು.


‘ವಾಸ್ತವವಾಗಿ, ಇದು ಬಿಸಿಸಿಐಗೆ ಸಂಬಂಧಿಸಿದ ಹೇಳಿಕೆಯಲ್ಲ. ವಿರಾಟ್ ಕೊಹ್ಲಿಗೆ ನಿರ್ಧಾರ ಪರಿಶೀಲನೆಗೆ ಕೇಳಲಾಗಿತ್ತು ಎಂದು ಯಾರು ಹೇಳಿದ್ದಾರೋ ಅವರೇ ಉತ್ತರಿಸಬೇಕು’ಎಂದು ಗವಾಸ್ಕರ್ ಹೇಳಿದ್ದಾರೆ.

ADVERTISEMENT

‘ಈ ರೀತಿ ಹೇಗಾಯಿತು.. ಎಂಬ ಬಗ್ಗೆ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿಯವರನ್ನೇ ಕೇಳಬೇಕು. ಕೊಹ್ಲಿ ಹೇಳಿಕೆಗಳ ಬಗ್ಗೆ ಉತ್ತರಿಸಲು ಅವರೇ ಸೂಕ್ತ ವ್ಯಕ್ತಿ’ಎಂದು ಗವಾಸ್ಕರ್ ಹೇಳಿದ್ದಾರೆ.

ತಮ್ಮನ್ನು ಏಕದಿನ ಕ್ರಿಕೆಟ್ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಸಿದ ಬಳಿಕ ನಿನ್ನೆ ಮಾಧ್ಯಮಗಳ ಮುಂದೆ ವಿರಾಟ್ ಕೊಹ್ಲಿ ನೀಡಿದ ಸ್ಫೋಟಕ ಹೇಳಿಕೆಯು ಬಿಸಿಸಿಐನ ಉನ್ನತ ಹುದ್ದೆಯಲ್ಲಿರುವವರು ಮತ್ತು ಅವರ ನಡುವೆ ಕುದಿಯುತ್ತಿದ್ದ ಭಿನ್ನಾಭಿಪ್ರಾಯಗಳನ್ನು ಬಯಲಿಗೆಳೆದಿತ್ತು.

ಏಕದಿನ ತಂಡದಿಂದ ಕೆಳಗಿಳಿಸುವ ಘೋಷಣೆ ಹೊರಬಿದ್ದ ಒಂದೂವರೆ ಗಂಟೆ ಮುನ್ನವಷ್ಟೇ ನನಗೆ ಆ ಬಗ್ಗೆ ತಿಳಿಸಲಾಗಿತ್ತು ಎಂದು ವಿರಾಟ್ ಕೊಹ್ಲಿ ಹೇಳಿದ್ದರು. ಆದರೆ, ಇದರಲ್ಲಿ ಆಯ್ಕೆ ಸಮಿತಿಯ ಕಡೆಯಿಂದ ಯಾವುದೇ ಲೋಪವಿಲ್ಲ. ಸಮಿತಿಗೆ ನಾಯಕನ ಆಯ್ಕೆ ಕುರಿತಾದ ಸಂಪೂರ್ಣ ಅಧಿಕಾರ ಇದೆ ಎಂದು ಗವಾಸ್ಕರ್ ಹೇಳಿದ್ದಾರೆ.

ಭವಿಷ್ಯದಲ್ಲಿ ಈ ರೀತಿಯ ವಿವಾದ ತಪ್ಪಿಸಲು ಬಿಸಿಸಿಐ ಮತ್ತು ಆಟಗಾರರ ನಡುವಿನ ಸಂವಹನವನ್ನು ಸರಿಪಡಿಸಿಕೊಳ್ಳಬೇಕು. ಸೂಕ್ತ ಸಂವಹನ ವ್ಯವಸ್ಥೆ ಇದ್ದರೆ ವಿವಾದಗಳಿಗೆ ಆಸ್ಪದವೇ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.