ನವದೆಹಲಿ: ‘ರನ್ ಯಂತ್ರ’ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ತೆಗೆದುಕೊಳ್ಳಲು ಬಿಸಿಸಿಐಗೆ ಮನವಿ ಮಾಡಿದ್ದರೆನ್ನಲಾದ ವರದಿಗಳಿಂದ ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿಯು ಅಚ್ಚರಿಗೊಂಡಿದೆ. ಮುಂಬರುವ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡವನ್ನು ಮುನ್ನಡೆಸಲು ವಿರಾಟ್ ಕೊಹ್ಲಿ ಅವರಿಗೆ ಪ್ರಸ್ತಾವ ನೀಡುವ ಚಿಂತನೆಯನ್ನೂ ನಡೆಸಿದೆ.
ಟೆಸ್ಟ್ ಕ್ರಿಕೆಟ್‌ನಿಂದ ತಮ್ಮ ನಿವೃತ್ತಿಯ ಕುರಿತು ವಿರಾಟ್ ಅವರು ಇದುವರೆಗೂ ಯಾವುದೇ ರೀತಿಯ ಹೇಳಿಕೆಯನ್ನು ನೀಡಿಲ್ಲ. ಆದರೆ ಶನಿವಾರ ಕೆಲವು ಮಾಧ್ಯಮಗಳಲ್ಲಿ ಈ ಸುದ್ದಿ ಹರಿದಾಡಿತ್ತು. ಆದರೆ ಈ ಕುರಿತು ಬಿಸಿಸಿಐ ತುಟಿ ಬಿಚ್ಚಿಲ್ಲ.
‘ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ವಿರಾಟ್ ಕೊಹ್ಲಿ ಅವರಿಗೆ ನಾಯಕತ್ವ ನೀಡಲು ಆಯ್ಕೆಗಾರರು ಒಲವು ತೋರಿದ್ದಾರೆ. 25 ವರ್ಷದ ಶುಭಮನ್ ಗಿಲ್ ಅವರು ನಾಯಕತ್ವಕ್ಕೇರಲು ಇನ್ನಷ್ಟು ಪಳಗಬೇಕಿದೆ. ರಿಷಭ್ ಪಂತ್ ಅವರಿಗೆ ಉಪನಾಯಕ ಪಟ್ಟ ನೀಡಲೂ ಚಿಂತನೆ ನಡೆಸಲಾಗಿದೆ’ ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ.
ಕನ್ನಡಿಗ ಕೆ.ಎಲ್. ರಾಹುಲ್ ಅವರಿಗೆ ನಾಯಕತ್ವ ನೀಡುವ ಕುರಿತು ಯಾವುದೇ ಮಾತುಗಳು ಕೇಳಿಬಂದಿಲ್ಲ ಎನ್ನಲಾಗಿದೆ. 33 ವರ್ಷದ ರಾಹುಲ್ ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿ ಬೇರೆಲ್ಲ ಆಟಗಾರರಿಗಿಂತ ಉತ್ತಮವಾಗಿ ಆಡಿದ್ದರು. 11 ವರ್ಷದಿಂದ ಟೆಸ್ಟ್ ಆಡುತ್ತಿರುವ ರಾಹುಲ್ 50 ಪಂದ್ಯಗಳಲ್ಲಿ 35ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
ಇಂಗ್ಲೆಂಡ್ ಪ್ರವಾಸಕ್ಕಾಗಿ ಇದೇ ತಿಂಗಳ ಮೂರನೇ ವಾರದಲ್ಲಿ ಭಾರತ ಎ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಅದರಲ್ಲಿ ತಮಿಳುನಾಡಿನ ಸಾಯಿ ಸುದರ್ಶನ್ ಅವರಿಗೆ ಸ್ಥಾನ ಸಿಗುವ ಸಾಧ್ಯತೆ ನಿಚ್ಚಳವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.