ADVERTISEMENT

T20 World Cup: ದಕ್ಷಿಣ ಆಫ್ರಿಕಾ–ವೆಸ್ಟ್ ಇಂಡೀಸ್‌ಗೆ ಜಯದ ನಿರೀಕ್ಷೆ

ಪಿಟಿಐ
Published 25 ಅಕ್ಟೋಬರ್ 2021, 11:14 IST
Last Updated 25 ಅಕ್ಟೋಬರ್ 2021, 11:14 IST
ಆ್ಯನ್ರಿಚ್ ನಾರ್ಕಿಯ –ರಾಯಿಟರ್ಸ್ ಚಿತ್ರ
ಆ್ಯನ್ರಿಚ್ ನಾರ್ಕಿಯ –ರಾಯಿಟರ್ಸ್ ಚಿತ್ರ   

ದುಬೈ: ಮೊದಲ ಪಂದ್ಯಗಳಲ್ಲಿ ಸೋತು ನಿರಾಸೆಗೆ ಒಳಗಾಗಿರುವ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಈ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಒತ್ತು ನೀಡಲು ಮುಂದಾಗುವ ಸಾಧ್ಯತೆ ಇದೆ.

ಮೊದಲ ಪಂದ್ಯದಲ್ಲಿ ಉಭಯ ತಂಡಗಳೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದವು. ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ 55 ರನ್‌ಗಳಿಗೆ ಪತನಗೊಂಡಿದ್ದರೆ ದಕ್ಷಿಣ ಆಫ್ರಿಕಾ 118 ರನ್‌ ಗಳಿಸಿ ಎದುರಾಳಿಗಳಿಗೆ ಮಣಿದಿತ್ತು. ಇತ್ತೀಚಿನ ಕೆಲವು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟರ್‌ಗಳು ಸತತ ವೈಫಲ್ಯ ಅನುಭವಿಸಿದ್ದಾರೆ. ಡೇವಿಡ್‌ ಮಿಲ್ಲರ್ ಒಳಗೊಂಡ ಮಧ್ಯಮ ಕ್ರಮಾಂಕವೂ ನಿರೀಕ್ಷೆಗೆ ತಕ್ಕ ಸಾಮರ್ಥ್ಯ ತೋರುತ್ತಿಲ್ಲ.

ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಕಗಿಸೊ ರಬಾಡ, ಆ್ಯನ್ರಿಚ್ ನಾರ್ಕಿಯಾ, ತಬ್ರೇಜ್ ಸಂಶಿ ಮತ್ತು ಕೇಶವ್ ಮಹಾರಾಜ್ ಅವರ ಬೌಲಿಂಗ್‌ನಲ್ಲಿ ಯಾವುದೇ ತಂಡದ ಬ್ಯಾಟರ್‌ಗಳನ್ನು ನಿಯಂತ್ರಿಸುವಷ್ಟು ಮೊನಚು ಇದೆ.

ADVERTISEMENT

ಎರಡು ಬಾರಿ ಪ್ರಶಸ್ತಿ ಗೆದ್ದಿರುವ ವೆಸ್ಟ್ ಇಂಡೀಸ್ ತಂಡದಲ್ಲಿ ಕ್ರಿಸ್ ಗೇಲ್ ಹೊರತುಪಡಿಸಿ ಬೇರೆ ಯಾರಿಗೂ ಮೊದಲ ಪಂದ್ಯದಲ್ಲಿ ಮಿಂಚಲು ಆಗಲಿಲ್ಲ. ಆರಂಭದಲ್ಲಿ ಅನುಭವಿಸಿದ ಆಘಾತದಿಂದ ತಂಡವನ್ನು ಮೇಲೆತ್ತಲು ಆ ಪಂದ್ಯದಲ್ಲಿ ಯಾರೂ ಮುಂದಾಗಲಿಲ್ಲ. ಒಂಬತ್ತು ಬ್ಯಾಟರ್‌ಗಳು ಭರ್ಜರಿ ಹೊಡೆತಗಳಿಗೆ ಕೈ ಹಾಕಿ ವಿಕೆಟ್ ಕಳೆದುಕೊಂಡಿದ್ದರು.

ಹೀಗಿದ್ದೂ ಈ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಯಾವುದೇ ಸಂದರ್ಭದಲ್ಲಿ ಹಳಿಗೆ ಮರಳುವ ಸಾಮರ್ಥ್ಯ ಕೀರನ್ ಪೊಲಾರ್ಡ್ ಬಳಗಕ್ಕೆ ಇದೆ.

ಟಿ20 ರ‍್ಯಾಂಕಿಂಗ್

ದಕ್ಷಿಣ ಆಫ್ರಿಕಾ 5

ವೆಸ್ಟ್ ಇಂಡೀಸ್ 9

ಹಿಂದಿನ 5 ಪಂದ್ಯಗಳ ಫಲಿತಾಂಶ

ದಕ್ಷಿಣ ಆಫ್ರಿಕಾ

ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ ಸೋಲು

ಶ್ರೀಲಂಕಾ ವಿರುದ್ಧ 10 ವಿಕೆಟ್ ಗೆಲುವು

ಶ್ರೀಲಂಕಾ ವಿರುದ್ಧ 9 ವಿಕೆಟ್ ಗೆಲುವು

ಶ್ರೀಲಂಕಾ ವಿರುದ್ಧ 28 ರನ್‌ ಗೆಲುವು

ಐರ್ಲೆಂಡ್ ವಿರುದ್ಧ 49 ರನ್‌ ಗೆಲುವು

ವೆಸ್ಟ್ ಇಂಡೀಸ್

ಇಂಗ್ಲೆಂಡ್ ವಿರುದ್ಧ 6 ವಿಕೆಟ್ ಸೋಲು

ಪಾಕಿಸ್ತಾನ ಎದುರು ಫಲಿತಾಂಶವಿಲ್ಲ

ಪಾಕಿಸ್ತಾನ ಎದುರು ಫಲಿತಾಂಶವಿಲ್ಲ

ಪಾಕಿಸ್ತಾನ ಎದುರು 7 ರನ್ ಸೋಲು

ಪಾಕಿಸ್ತಾನ ಎದುರು ಫಲಿತಾಂಶವಿಲ್ಲ

ವಿಶ್ವಕಪ್‌ನಲ್ಲಿ ಬಲಾಬಲ

ತಂಡ;ಪಂದ್ಯ;ಜಯ;ಸೋಲು;ಟೈ

ದಕ್ಷಿಣ ಆಫ್ರಿಕಾ;31;18;13;–

ವೆಸ್ಟ್ ಇಂಡೀಸ್;32;17;13;2

ಆರಂಭ ಮಧ್ಯಾಹ್ನ 3.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.