ADVERTISEMENT

IPL 2022 | ಶುಭಮನ್ ಗಿಲ್ ವಿಶ್ವ ಕ್ರಿಕೆಟ್‌ನ ಪ್ರತಿಭಾವಂತ ಆಟಗಾರ: ರವಿಶಾಸ್ತ್ರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಏಪ್ರಿಲ್ 2022, 11:06 IST
Last Updated 4 ಏಪ್ರಿಲ್ 2022, 11:06 IST
ಶುಭಮನ್ ಗಿಲ್
ಶುಭಮನ್ ಗಿಲ್   

ಮುಂಬೈ:ಐಪಿಎಲ್‌–2022 ಟೂರ್ನಿಯಲ್ಲಿ ಹೊಸ ತಂಡವಾಗಿ ಕಣಕ್ಕಿಳಿದಿರುವ 'ಗುಜರಾತ್‌ಟೈಟನ್ಸ್' ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ತಂಡದ ಆರಂಭಿಕ ಆಟಗಾರ ಶುಭಮನ್ ಗಿಲ್‌ ಕುರಿತು ಭಾರತ ಕ್ರಿಕೆಟ್‌ ತಂಡದ ಮಾಜಿ ಕೋಚ್‌ ರವಿಶಾಸ್ತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಲಖನೌ ಸೂಪರ್‌ಜೈಂಟ್ಸ್‌ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ಗಿಲ್‌, ಎರಡನೇ ಪಂದ್ಯದಲ್ಲಿಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ 46 ಎಸೆತಗಳನ್ನು ಎದುರಿಸಿದ್ದ ಅವರು, 4 ಸಿಕ್ಸರ್‌ ಮತ್ತು 6 ಬೌಂಡರಿ ಸಹಿತ 84 ರನ್ ಚಚ್ಚಿದ್ದರು. ಇದರಿಂದಾಗಿ ಟೈಟನ್ಸ್‌ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 170 ರನ್ ಕಲೆಹಾಕಿತ್ತು. ಈ ಮೊತ್ತ ಬೆನ್ನತ್ತಿದ ಕ್ಯಾಪಿಟಲ್ಸ್‌ 157 ರನ್‌ ಗಳಿಸಲಷ್ಟೇ ಶಕ್ತವಾಗಿ, 14 ರನ್ ಅಂತರದ ಸೋಲೊಪ್ಪಿಕೊಂಡಿತ್ತು.

ಗಿಲ್‌ ಆಟದ ಕುರಿತು ಸ್ಟಾರ್‌ಸ್ಪೋರ್ಟ್ಸ್‌ ಸಂದರ್ಶನದಲ್ಲಿ ಮಾತನಾಡಿರುವ ರವಿಶಾಸ್ತ್ರಿ, 'ಆತ ಅಪ್ಪಟ ಪ್ರತಿಭೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಆ ಹುಡುಗ (ಗಿಲ್) ಭಾರತ ಮತ್ತು ವಿಶ್ವ ಕ್ರಿಕೆಟ್‌ನ ಅತ್ಯಂತ ಪ್ರತಿಭಾವಂತ ಆಟಗಾರ' ಎಂದು ಹೇಳಿದ್ದಾರೆ.

ADVERTISEMENT

'ಒಮ್ಮೆ ಆತ ಆಟಕ್ಕೆ ಕುದುರಿಕೊಂಡರೆ, ರನ್ ಗಳಿಸುತ್ತಾ ಸಾಗುತ್ತಾನೆ. ರನ್ ಗಳಿಸುವುದು ತುಂಬಾ ಸರಳ ಎನ್ನುವಂತೆ ಮಾಡುತ್ತಾನೆ. ಆತನಿಗೆ ಸಮಯ ಸಿಕ್ಕಿದೆ. ಬಲವಾಗಿ ಬಾರಿಸಬಲ್ಲ. ಚೆಂಡನ್ನು ಬೌಂಡರಿ ಗೆರೆಯಾಚೆ ಕಳುಹಿಸುವ ಶಕ್ತಿ ಪಡೆದಿದ್ದಾನೆ' ಎಂದಿದ್ದಾರೆ.

ಮುಂದುವರಿದು,'ಆತ ಈ ಮಾದರಿಗೆ (ಟಿ20ಗೆ) ಹೇಳಿಮಾಡಿಸಿದ ಆಟಗಾರ. ಹೊಡೆತಗಳ ಆಯ್ಕೆ, ಸ್ಟ್ರೇಕ್ ರೊಟೇಟ್‌ ಮಾಡುವ ರೀತಿಯೇ ಆತನ ಬಗ್ಗೆ ಹೇಳುತ್ತವೆ. ಇಂದು (ಡೆಲ್ಲಿ ವಿರುದ್ಧದ ಪಂದ್ಯದಲ್ಲಿ) ಕೆಲವೇಕೆಲವು ಡಾಟ್‌ ಬಾಲ್‌ಗಳು (ರನ್ ಇಲ್ಲದ ಎಸೆತಗಳು) ಗಿಲ್‌ ಮೇಲೆ ಮೇಲೆ ಒತ್ತಡ ಹೇರಿದವು. ಆದರೆ, ಕೆಟ್ಟ ಎಸೆತಗಳನ್ನು ದೂರಕ್ಕೆ ಹೊಡೆಯಬಲ್ಲ ಆಟಗಾರ ಆತ' ಎಂದು ಶ್ಲಾಘಿಸಿದ್ದಾರೆ.

ಡೆಲ್ಲಿ ವಿರುದ್ಧ ಆಡಿದ 46 ಎಸೆತಗಳ ಪೈಕಿ ಆರು ಎಸೆತಗಳು ಮಾತ್ರವೇ ಡಾಟ್ ಬಾಲ್ ಆಗಿದ್ದವು.

ಹಾರ್ದಿಕ್‌ ಪಾಂಡ್ಯ ನಾಯಕತ್ವದ ಟೈಟನ್ಸ್‌ ತನ್ನ ಮುಂದಿನ ಪಂದ್ಯದಲ್ಲಿ (ಏ.08) ಪಂಜಾಬ್ ಕಿಂಗ್ಸ್‌ ಎದುರು ಸೆಣಸಾಟ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.