ADVERTISEMENT

ಮಹಾರಾಜ ಟ್ರೋಫಿ | ಸ್ಮರಣ್‌ ಅಬ್ಬರ: ಗುಲ್ಬರ್ಗಗೆ ಜಯ

ಮೋಹನ್‌ ಕುಮಾರ್‌ ಸಿ.
Published 20 ಆಗಸ್ಟ್ 2025, 5:15 IST
Last Updated 20 ಆಗಸ್ಟ್ 2025, 5:15 IST
ಶಿವಮೊಗ್ಗ ಲಯನ್ಸ್ ವಿರುದ್ಧ ಆಕರ್ಷಕ ಅರ್ಧಶತಕ ಸಿಡಿಸಿದ ಗುಲ್ಬರ್ಗ ಮಿಸ್ಟಿಕ್ಸ್‌ನ ಆರ್.ಶ್ರವಣ್‌ ಅವರ ಬ್ಯಾಟಿಂಗ್ ವೈಖರಿ – ಪ್ರಜಾವಾಣಿ ಚಿತ್ರ/ಅನೂಪ್ ರಾಘ .ಟಿ.
ಶಿವಮೊಗ್ಗ ಲಯನ್ಸ್ ವಿರುದ್ಧ ಆಕರ್ಷಕ ಅರ್ಧಶತಕ ಸಿಡಿಸಿದ ಗುಲ್ಬರ್ಗ ಮಿಸ್ಟಿಕ್ಸ್‌ನ ಆರ್.ಶ್ರವಣ್‌ ಅವರ ಬ್ಯಾಟಿಂಗ್ ವೈಖರಿ – ಪ್ರಜಾವಾಣಿ ಚಿತ್ರ/ಅನೂಪ್ ರಾಘ .ಟಿ.   

ಮೈಸೂರು: ಆರ್.ಸ್ಮರಣ್‌ ಅವರ (ಔಟಾಗದೆ 53; 30 ಎಸೆತ, 4x3, 6x4) ಅಮೋಘ ಅರ್ಧಶತಕದ ಬಲದಿಂದ ಗುಲ್ಪರ್ಗ ಮಿಸ್ಟಿಕ್ಸ್‌ ತಂಡವು ಮಂಗಳವಾರ ಶಿವಮೊಗ್ಗ ಲಯನ್ಸ್‌ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. 

ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ, ಸ್ಮರಣ್‌ ಆರಂಭಿಕ ಬ್ಯಾಟರ್ ನಿಕಿನ್‌ ಜೋಸ್‌ (40; 42 ಎಸೆತ, 4x3) ಜೊತೆ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. 

ಕಾಡಿದ ಕಾಂಬ್ಳೆ: ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಶಿವಮೊಗ್ಗ ಲಯನ್ಸ್‌ಗೆ ಪಿ.ಧ್ರುವ್ (18) ಹಾಗೂ ನಾಯಕ ನಿಹಾಲ್‌ ಉಳ್ಳಾಲ್‌ (18) ಉತ್ತಮ ಆರಂಭ ಒದಗಿಸಿದರು. ಧ್ರುವ್‌ ಅವರನ್ನು ತಮ್ಮ ಬೌಲಿಂಗ್‌ನಲ್ಲಿ ಔಟ್‌ ಮಾಡಿದ ಶಶಿಕುಮಾರ್ ಕಾಂಬ್ಳೆ (10ಕ್ಕೆ 2), ನಿಹಾಲ್‌ ಅವರನ್ನು ಚುರುಕಿನ ಕ್ಷೇತ್ರರಕ್ಷಣೆ ಮೂಲಕ ರನ್‌ಔಟ್‌ ಮಾಡಿದರು. ಅಲ್ಲಿಂದ ರನ್‌ ವೇಗ ಕಡಿಮೆಯಾಯಿತು. ಶಿವಮೊಗ್ಗ ತಂಡವು 16ನೇ ಓವರ್‌ನಲ್ಲಿ 100ರ ಗಡಿ ದಾಟಿತು. ಬೌಲಿಂಗ್‌ನಲ್ಲಿ ಶಶಿ ಜೊತೆ ಪೃಥ್ವಿರಾಜ್‌ (22ಕ್ಕೆ 2) ಕಾಡಿದರು.  

ADVERTISEMENT

ತುಷಾರ್ ಸಿಂಗ್‌ (32; 25 ಎಸೆತ, 4x4), ಹಾರ್ದಿಕ್ ರಾಜ್‌ (23), ಡಿ.ಅವಿನಾಶ್‌ (16) ಹೊರತು ಶಿವಮೊಗ್ಗದ ಯಾರೊಬ್ಬರೂ ಎರಡಂಕಿ ರನ್‌ ಗಳಿಸಲಿಲ್ಲ. 20 ಓವರ್‌ಗಳಲ್ಲಿ 7ಕ್ಕೆ 133 ರನ್‌ ಸಾಧಾರಣ ಗುರಿ ನೀಡಿತು. 

ಸ್ಮರಣ್‌ ಆಸರೆ:

ಲವ್‌ನಿತ್‌ ಸಿಸೋಡಿಯಾ (7) ಹಾಗೂ ಪ್ರಜ್ವಲ್‌ ಪವನ್ (20) ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಗುಲ್ಬರ್ಗ ತಂಡಕ್ಕೆ ಸ್ಮರಣ್ ಆಸರೆಯಾದರು. ನಿಕಿನ್‌ ಜೋಸ್‌ ಜೊತೆಗೆ 3ನೇ ವಿಕೆಟ್‌ಗೆ 74 ರನ್‌ಗಳ (51 ಎಸೆತ) ಅದ್ಭುತ ಇನ್ನಿಂಗ್ಸ್ ಕಟ್ಟಿದ ಅವರು ಸತತ ಎರಡನೇ ಅರ್ಧಶತಕ ದಾಖಲಿಸಿದರು. ತಾಳ್ಮೆಯಿಂದ ಆಡಿದ ಜೋಸ್‌ ವಿಕೆಟ್‌ ಬೀಳದಂತೆ ಗೋಡೆಯಾಗಿ ನಿಂತರು. ಗೆಲುವಿಗೆ 10 ರನ್‌ ಬಾಕಿ ಇದ್ದಾಗ ಅವರು ಕೌಶಿಕ್‌ ಬೌಲಿಂಗ್‌ಗೆ ಔಟಾದರೂ ಸ್ಮರಣ್‌ ತಂಡವನ್ನು ಗೆಲುವಿನ ದಡ ಸೇರಿಸಿದರು. ಶಿವಮೊಗ್ಗ ಆಡಿದ ಐದು ಪಂದ್ಯಗಳಲ್ಲಿ ಸತತ ನಾಲ್ಕನೇ ಸೋಲು ಕಂಡಿತು. 

ಸಂಕ್ಷಿಪ್ತ ಸ್ಕೋರ್:

ಶಿವಮೊಗ್ಗ ಲಯನ್ಸ್ 20 ಓವರ್‌ಗಳಲ್ಲಿ 7ಕ್ಕೆ 133 ರನ್‌ (ತುಷಾರ್ ಸಿಂಗ್‌ 32, ಹಾರ್ದಿಕ್ ರಾಜ್‌ 23. ಶಶಿಕುಮಾರ್ ಕಾಂಬ್ಳೆ 10ಕ್ಕೆ 2, ಪೃಥ್ವಿರಾಜ್‌ 22ಕ್ಕೆ 2)

ಗುಲ್ಬರ್ಗ ಮಿಸ್ಟಿಕ್ಸ್‌ 17 ಓವರ್‌ಗಳಲ್ಲಿ 3ಕ್ಕೆ 135 (ಆರ್.ಸ್ಮರಣ್‌ ಔಟಾಗದೆ 53, ನಿಕಿನ್ ಜೋಸ್‌ 40. ವಿ.ಕೌಶಿಕ್‌ 15ಕ್ಕೆ 1, ಹಾರ್ದಿಕ್ ರಾಜ್‌ 26ಕ್ಕೆ 1) ಪಂದ್ಯದ ಆಟಗಾರ: ಆರ್.ಸ್ಮರಣ್‌

ಇಂದಿನ ಪಂದ್ಯಗಳು:

ಗುಲ್ಬರ್ಗ ಮಿಸ್ಟಿಕ್ಸ್– ಮೈಸೂರು ವಾರಿಯರ್ಸ್. ಮಧ್ಯಾಹ್ನ 3.15

ಹುಬ್ಬಳ್ಳಿ ಟೈಗರ್ಸ್– ಬೆಂಗಳೂರು ಬ್ಲಾಸ್ಟರ್ಸ್. ಸಂಜೆ 7.15

ಶಿವಮೊಗ್ಗ ಲಯನ್ಸ್ ವಿರುದ್ಧ ಆಕರ್ಷಕ ಅರ್ಧಶತಕ ಸಿಡಿಸಿದ ಗುಲ್ಬರ್ಗ ಮಿಸ್ಟಿಕ್ಸ್‌ನ ಆರ್.ಶ್ರವಣ್‌ ಅವರ ಬ್ಯಾಟಿಂಗ್ ವೈಖರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.