ಗುವಾಹಟಿ ಕ್ರಿಕೆಟ್ ಸ್ಟೇಡಿಯಂ
– ರಾಜಸ್ಥಾನ್ ರಾಯಲ್ಸ್ ವೆಬ್‌ಸೈಟ್
ಗುವಾಹಟಿ: ಭಾರತದ ಈಶಾನ್ಯ ಭಾಗದಲ್ಲಿ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯ ನಡೆಯಲಿದ್ದು, ಅಸ್ಸಾಂನ ಅತಿ ದೊಡ್ಡ ನಗರ ಗುವಾಹಟಿ ಆತಿಥ್ಯ ವಹಿಸಲಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ಪ್ರಧಾನ ಕಾರ್ಯದರ್ಶಿ ದೇವಜಿತ್ ಸೈಕಿಯಾ ಭಾನುವಾರ ಹೇಳಿದ್ದಾರೆ.
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯಗಳಿಗೂ ಗುವಾಹಟಿ ಆತಿಥ್ಯ ವಹಿಸಲಿದ್ದು, ಅದು ಇಲ್ಲಿ ನಡೆಯುವ ವಿಶ್ವಕಪ್‌ನ ಮೊದಲ ಪಂದ್ಯ ಆಗಿರಲಿದೆ ಎಂದು ಅವರು ಹೇಳಿದ್ದಾರೆ.
‘ಗುವಾಹಟಿಯಲ್ಲಿ ಈವರೆಗೂ ಯಾವುದೇ ಟೆಸ್ಟ್ ಟೆಸ್ಟ್ ಅಥವಾ ವಿಶ್ವಕಪ್ ಪಂದ್ಯ ನಡೆದಿರಲಿಲ್ಲ. ಈ ವರ್ಷ ಗುವಾಹಟಿಯಲ್ಲಿ ಟೆಸ್ಟ್ ಹಾಗೂ ವಿಶ್ವಕಪ್ ಪಂದ್ಯಗಳನ್ನು ನಡೆಸಲು ಐಸಿಸಿ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸೈಕಿಯಾ ಮಾಹಿತಿ ನೀಡಿದ್ದಾರೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಕೊನೆಯ ಪಂದ್ಯ ನ. 22ರಿಂದ ಇಲ್ಲಿನ ಅಸ್ಸಾಂ ಕ್ರಿಕೆಟ್ ಎಸೋಶಿಯೇಷನ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಅದು ಗುವಾಹಟಿಯನ್ನು ಟೆಸ್ಟ್ ಕ್ರಿಕೆಟ್ ಮ್ಯಾಪ್‌ನಲ್ಲಿ ಗುರುತಿಸುವಂತೆ ಮಾಡಲಿದೆ ಎಂದು ಅವರು ಹೇಳಿದ್ದಾರೆ.
ಐಸಿಸಿ ಏಕದಿನ ಮಹಿಳಾ ವಿಶ್ವಕಪ್ ಟೂರ್ನಿಯ 5–6 ಪಂದ್ಯಗಳು ಗುವಾಹಟಿಯಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ 24ರಿಂದ ನವೆಂಬರ್ 2ರವರೆಗೆ ಮಹಿಳಾ ಏಕದಿನ ವಿಶ್ವಕಪ್ ನಡೆಯಲಿದ್ದು, ವೇಳಾಪಟ್ಟಿ ಅಂತಿಮಗೊಳ್ಳುತ್ತಿದೆ ಎಂದು ಹೇಳಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.