ADVERTISEMENT

ಮೆಕಲಮ್ ನೀಡಿದ ಆ ಒಂದು ಸಲಹೆ ಫಲ ಕೊಟ್ಟಿತು: ಪಾಕ್ ಪಂದ್ಯದ ಬಳಿಕ ಬ್ರೂಕ್ ಹೇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಫೆಬ್ರುವರಿ 2026, 5:59 IST
Last Updated 25 ಫೆಬ್ರುವರಿ 2026, 5:59 IST
ಶತಕ ಗಳಿಸಿದ ಹ್ಯಾರಿ ಬ್ರೂಕ್‌
ಶತಕ ಗಳಿಸಿದ ಹ್ಯಾರಿ ಬ್ರೂಕ್‌   

ಪಲ್ಲೆಕೆಲೆ: ಇಲ್ಲಿ ಮುಕ್ತಾಯಗೊಂಡ ಟಿ20 ವಿಶ್ವಕಪ್‌ನ ಸೂಪರ್–8 ಹಂತದ ಗ್ರೂಪ್–2ರ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ‍ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಅವರು ಪಾಕಿಸ್ತಾನ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಈ ಪಂದ್ಯಕ್ಕೂ ಮೊದಲು ಹ್ಯಾರಿ ಬ್ರೂಕ್ ಅವರು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ, ಪಾಕ್ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಔಟ್ ಆಗುತ್ತಿದ್ದಂತೆ ಬ್ರೂಕ್ ಅವರು ಬ್ಯಾಟಿಂಗ್ ಬಂದರು. ಮಾತ್ರವಲ್ಲ, ಅಮೋಘ ಶತಕ ಸಿಡಿಸಿ ತಂಡವನ್ನು ಸೆಮಿಫೈನಲ್‌ಗೆ ತೆಗೆದುಕೊಂಡು ಹೋದರು.

5 ರಿಂದ 3ನೇ ಕ್ರಮಾಂಕಕ್ಕೆ ಬಡ್ತಿ

ADVERTISEMENT

ಆರಂಭಿಕ ಬ್ಯಾಟರ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿ ಹೋಗುತ್ತಿದ್ದಂತೆ, ತಂಡದ ಜವಾಬ್ದಾರಿ ತೆಗೆದುಕೊಂಡ ನಾಯಕ ಬ್ರೂಕ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದರು. ಈ ವೇಳೆ, ಅವರು ಕೇವಲ 51 ಎಸೆತಗಳಲ್ಲಿ 10 ಬೌಂಡರಿ, 4 ಸಿಕ್ಸರ್ ಸಹಿತ ಆಕರ್ಷಕ ಶತಕ ಸಿಡಿಸಿ ಮಿಂಚಿದರು.

ಮೆಕಲಮ್ ಕೊಟ್ಟ ಸಲಹೆ ಕೈಹಿಡಿಯಿತು

ಪಂದ್ಯದ ಬಳಿಕ ಮಾತನಾಡಿದ ಹ್ಯಾರಿ ಬ್ರೂಕ್, ‘ನಾನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬರಬೇಕು ಎಂಬುದು ತಕ್ಷಣ ನಿರ್ಧಾರವಲ್ಲ, ಅದು ಪೂರ್ವ ನಿಯೋಜಿತ ನಿರ್ಧಾರವಾಗಿತ್ತು. ಪಂದ್ಯಕ್ಕೆ ಮೊದಲು ತರಬೇತಿಯ ಸಂದರ್ಭದಲ್ಲಿ ಬ್ರೆಂಡನ್ ಮೆಕಲಮ್ ಅವರ ಜೊತೆ ಚರ್ಚೆ ನಡೆಸಿದಾಗ, ಅವರು ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಂತೆ ಸಲಹೆ ನೀಡಿದರು. ಅವರು ನೀಡಿದ ಸಲಹೆ ಅದೃಷ್ಟವಶಾತ್ ಫಲ ಕೊಟ್ಟಿತು’ ಎಂದು ತಿಳಿಸಿದ್ದಾರೆ.

ಪವರ್‌ಪ್ಲೇನಲ್ಲಿ ರನ್ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಿದಾಗ ಮೆಕಲಮ್ ಅವರು ಈ ಸಲಹೆ ನೀಡಿದರು ಎಂದರು. ಮಾತ್ರವಲ್ಲ, ತಮಗೂ ಅಗ್ರಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂಬ ಯೋಚನೆ ಇತ್ತು. ಸಾಧ್ಯವಾದಷ್ಟು ಹೆಚ್ಚುವರಿ ಎಸೆತಗಳನ್ನು ಎದುರಿಸಲು ಯೋಚಿಸಿದ್ದೆ, ಇಂಗ್ಲೆಂಡ್ ರಾಷ್ಟ್ರೀಯ ತಂಡದ ಪರ ಹಾಗೂ ಫ್ರಾಂಚೈಸಿ ಲೀಗ್‌ನಲ್ಲೂ ಅದನ್ನೇ ಮುಂದುವರೆಸಲು ಯೋಚಿಸುತ್ತೇನೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.