ADVERTISEMENT

‘ಪ್ರತಿದಿನ ತಂದೆಯ ಮುಂದೆ ಬಂದು ಅಳುತ್ತಿದ್ದೆ’ ಟೀಂ ಇಂಡಿಯಾ ವೇಗಿ ಭಾವುಕ ಮಾತು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜನವರಿ 2026, 14:40 IST
Last Updated 18 ಜನವರಿ 2026, 14:40 IST
ಭಾರತದ ಹರ್ಷಿತ್ ರಾಣಾ ಮತ್ತು ರವೀಂದ್ರ ಜಡೇಜ ಸಂಭ್ರಮ  –ಪಿಟಿಐ ಚಿತ್ರ
ಭಾರತದ ಹರ್ಷಿತ್ ರಾಣಾ ಮತ್ತು ರವೀಂದ್ರ ಜಡೇಜ ಸಂಭ್ರಮ  –ಪಿಟಿಐ ಚಿತ್ರ   

ಭಾರತ ಕ್ರಿಕೆಟ್‌ ತಂಡದಲ್ಲಿ ಮೂರು ಮಾದರಿಯ ಆಟಗಾರನಾಗಿರುವ ಹರ್ಷಿತ್ ರಾಣಾ ಅವರು ಕಳೆದ ಒಂದು ದಶಕದ‌ಲ್ಲಿ ಈ ಹಂತವನ್ನು ತಲುಪಲು ಏನೆಲ್ಲಾ ಶ್ರಮಪಟ್ಟಿದ್ದೇನೆ ಎಂಬುದನ್ನು ಬಹುರಂಗಪಡಿಸಿದ್ದಾರೆ. ಮಾತ್ರವಲ್ಲ, ಪ್ರತಿನಿತ್ಯ ತಮ್ಮ ತಂದೆ ಮುಂದೆ ನಿಂತು ಕಣ್ಣೀರಿಟ್ಟಿರುವುದಾಗಿ ತಿಳಿಸಿದ್ದಾರೆ.

ರಾಣಾ ಅವರು ಕ್ರಿಕೆಟ್‌ನಲ್ಲಿ ದಿನೇ ದಿನೇ ಮೇಲೇರುತ್ತಿದ್ದಾರೆ. 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಕೊಲ್ಕತ್ತ ನೈಟ್ ರೈಡರ್ಸ್ ಫ್ರಾಂಚೈಸಿ ರಾಣಾರನ್ನು ಖರೀದಿಸಿತ್ತು. ಮೊದಲ ಎರಡು ವರ್ಷ ಹೇಳಿಕೊಳ್ಳುವಂತ ಪ್ರದರ್ಶನ ತೋರದ ಅವರು, 2024ರಲ್ಲಿ 19 ವಿಕೆಟ್ ಪಡೆದು ಮಿಂಚಿದರು. ಮಾತ್ರವಲ್ಲ, ಕೆಕೆಆರ್ ತಂಡ ಟ್ರೋಫಿ ಗೆಲ್ಲುವಲ್ಲಿಯೂ ಮಹತ್ವದ ಪಾತ್ರ ವಹಿಸಿದರು.

ಕೆಕೆಆರ್‌ನಲ್ಲಿನ ಅವರ ಪ್ರದರ್ಶನದ ಬಳಿಕ ಅದೇ ವರ್ಷ ಭಾರತ ಟೆಸ್ಟ್ ತಂಡಕ್ಕೆ ಮೊದಲ ಬಾರಿ ಆಯ್ಕೆಯಾದರು. ಅದಾದ ಬಳಿಕ, ಟೀಂ ಇಂಡಿಯಾದ ಮೂರು ಮಾದರಿಯಲ್ಲಿ ಖಾಯಂ ಆಟಗಾರರಾಗಿದ್ದಾರೆ.

ADVERTISEMENT

ಕಳೆದ 10 ವರ್ಷಗಳ ಅವರ ಹೋರಾಟದ ಜೀವನದ ಕುರಿತು ಮೆನ್ಸ್‌ಎಕ್ಸ್‌ಪಿ ಜೊತೆ ಮಾತನಾಡಿದ ರಾಣಾ, ‘ಈಗ ನನಗೆ ವೈಫಲ್ಯವನ್ನು ಹೇಗೆ ನಿಭಾಯಿಸಬೇಕೆಂದು ತಿಳಿದಿದೆ’. ನನ್ನಿಂದ ಏನೂ ಮಾಡಲಾಗದ ಈ ಹಿಂದಿನ 10 ವರ್ಷಗಳನ್ನು ನೋಡಿದ್ದೇನೆ. ಪ್ರತಿ ಬಾರಿಯೂ ನಾನು ಪ್ರಯೋಗಕ್ಕೆ ಒಳಗಾಗುತ್ತಿದ್ದೆ. ಆದರೆ, ನನ್ನ ಹೆಸರು ಅಂತಿಮ ಪಟ್ಟಿಯಲ್ಲಿ ಕಾಣಿಸುತ್ತಿರಲಿಲ್ಲ. ಆಗ ನನ್ನ ತಂದೆಯ ಮುಂದೆ ಬಂದು ಪ್ರತಿದಿನ ಅಳುತ್ತಿದ್ದೆ. ಆ ವೈಫಲ್ಯ ಕಂಡಿರುವ ನನಗೆ, ಈಗ ಏನೇ ಸಮಸ್ಯೆ ಎದುರಾದರೂ ನಿಭಾಯಿಸಬಲ್ಲೆ ಎಂಬ ಆತ್ಮವಿಶ್ವಾಸವಿದೆ’ ಎಂದು ತಿಳಿಸಿದ್ದಾರೆ.

‘ನಾನು 12ನೇ ತರಗತಿ ಓದುವವರೆಗೂ ನನ್ನ ಬಳಿ ಸ್ಮಾರ್ಟ್‌ಫೋನ್ ಇರಲಿಲ್ಲ. ಅಪ್ಪ ನನ್ನನ್ನು ಬೆಳಿಗ್ಗೆ 4:30ಕ್ಕೆ ಎಬ್ಬಿಸುತ್ತಿದ್ದರು. 6 ಗಂಟೆಗೆ ತರಬೇತಿಯಿಂದ ವಾಪಾಸ್ ಕರೆದುಕೊಂಡು ಬರುತ್ತಿದ್ದರು. ಅಮ್ಮ ನನ್ನನ್ನು ಶಾಲೆಗೆ ಹೋಗುವಂತೆ ಒತ್ತಾಯಿಸುತ್ತಿದ್ದರು’.

‘ನನಗೆ ಶಾಲೆಗೆ ಹೋಗಲು ಇಷ್ಟವಿರಲಿಲ್ಲ. ಆದರೆ, ಅಮ್ಮ ನನ್ನನ್ನು ಶಾಲೆಗೆ ಹೋಗುವಂತೆ ಗದರಿಸುತ್ತಿದ್ದರು. ಮಧ್ಯಾಹ್ನ 1 ಗಂಟೆಗೆ ಮನೆಯಿಂದ ಎರಡೂವರೆ ಗಂಟೆಗಳ ಪ್ರಯಾಣದ ದೂರವಿದ್ದ ಮೈದಾನಕ್ಕೆ ಹೋಗಿ ಅಭ್ಯಾಸ ಮಾಡುತ್ತಿದ್ದೆ ಎಂದು ತಮ್ಮ ಬಾಲ್ಯ ಹಾಗೂ ಕಳೆದ 10 ವರ್ಷಗಳಲ್ಲಿ ಕ್ರಿಕೆಟ್ ವೃತ್ತಿ ಬದುಕು ಕಟ್ಟಿಕೊಳ್ಳಲು ನಡೆಸಿದ ಪರಿಶ್ರಮವನ್ನು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.