ADVERTISEMENT

ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿ: ಮುಂಬೈ ತಂಡದಿಂದ ಕೋಕ್; ಪೃಥ್ವಿ ಶಾ ಬೇಸರ

ಶ್ರೇಯಸ್ ಅಯ್ಯರ್ ನಾಯಕತ್ವದ ತಂಡ ಪ್ರಕಟ

ಪಿಟಿಐ
Published 18 ಡಿಸೆಂಬರ್ 2024, 21:16 IST
Last Updated 18 ಡಿಸೆಂಬರ್ 2024, 21:16 IST
<div class="paragraphs"><p>ಪೃಥ್ವಿ ಶಾ</p></div>

ಪೃಥ್ವಿ ಶಾ

   

ಪಿಟಿಐ ಚಿತ್ರ

ನವದೆಹಲಿ: ‘ನಾನು ಇನ್ನು ಏನೇನು ನೋಡಬೇಕು. ದೇವರೇ ಹೇಳು. 65 ಇನಿಂಗ್ಸ್‌ಗಳಲ್ಲಿ 3399 ರನ್‌ಗಳನ್ನು 55.7 ಸರಾಸರಿಯಲ್ಲಿ ಗಳಿಸಿರುವೆ. ವಿಜಯ್ ಹಜಾರೆ ಟೂರ್ನಿಯಲ್ಲಿ 126ರ ಸ್ಟ್ರೈಕ್‌ ರೇಟ್ ಇದೆ. ಇಷ್ಟಾದರೂ ನಾನು ಉತ್ತಮವಲ್ಲ.  ಇಷ್ಟಾದರೂ ನಾನು ನಂಬಿಕೆ ಕಳೆದುಕೊಂಡಿಲ್ಲ. ಕೆಲವರಾದರೂ ನನ್ನ ಮೇಲೆ ನಂಬಿಕೆ ಇಟ್ಟಿರುವ ವಿಶ್ವಾಸವಿದೆ. ನಾನು ಮರಳಿ ಬರುವುದು ಖಚಿತ. ಓಂ ಸಾಯಿ ರಾಮ್’–

ADVERTISEMENT

ಮುಂಬೈ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಪೃಥ್ವಿ ಶಾ ಅವರು ಮಂಗಳವಾರ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬರೆದಿರುವ ಹತಾಶೆಯ ನುಡಿಗಳಿವು. ಇದೇ 21ರಿಂದ ಆರಂಭವಾಗುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಮುಂಬೈ ತಂಡಕ್ಕೆ ಅವರನ್ನು ಆಯ್ಕೆ ಮಾಡಿಲ್ಲ. ಇದರಿಂದಾಗಿ ಅವರು ಬೇಸರಗೊಂಡಿದ್ದಾರೆ. 

ಈಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಅವರು ಆಡಿದ್ದರು. ದೊಡ್ಡ ಮೊತ್ತದ ಇನಿಂಗ್ಸ್‌ ಆಡಿರಲಿಲ್ಲ. ಆದರೆ 30, 40 ರನ್‌ಗಳ ಇನಿಂಗ್ಸ್‌ಗಳು ಅವರಿಂದ ದಾಖಲಾಗಿದ್ದವು. ಮುಂಬೈ ತಂಡವು ಪ್ರಶಸ್ತಿ ಜಯಿಸಿತ್ತು. ಅದಕ್ಕೂ ಮುನ್ನ ರಣಜಿ ಟ್ರೋಫಿ ಟೂರ್ನಿಯಲ್ಲಿ ಶಿಸ್ತು ಉಲ್ಲಂಘನೆ ಕಾರಣಕ್ಕೆ ಕೆಲವು ಪಂದ್ಯಗಳಿಂದ ಅವರನ್ನು ಕೈಬಿಡಲಾಗಿತ್ತು. 

ಇದೀಗ ಶ್ರೇಯಸ್ ಅಯ್ಯರ್ ನಾಯಕತ್ವದ 17 ಆಟಗಾರರ ತಂಡದಲ್ಲಿ ಅವರಿಗೆ ಸ್ಥಾನ ನೀಡಲಾಗಿಲ್ಲ. ಪೃಥ್ವಿ ಈ ಹಿಂದೆ ಟೆಸ್ಟ್ ಕ್ರಿಕೆಟ್‌ನ ಪದಾರ್ಪಣೆ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಈಚೆಗೆ ಐಪಿಎಲ್‌ನಲ್ಲಿಯೂ ಅವರನ್ನು ಯಾವುದೇ ತಂಡವೂ ಖರೀದಿಸಿರಲಿಲ್ಲ.

ತಂಡ: ಶ್ರೇಯಸ್ ಅಯ್ಯರ್ (ನಾಯಕ), ಆಯುಷ್ ಮಾತ್ರೆ, ಅಂಗಕ್ರಿಷ್ ರಘುವಂಶಿ, ಜಯ್ ಬಿಷ್ಟ್, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಸೂರ್ಯಾಂಶ್ ಶೆಡಗೆ, ಸಿದ್ಧೇಶ್ ಲಾಡ್, ಹಾರ್ದಿಕ್ ತಮೊರೆ, ಪ್ರಸಾದ್ ಪವಾರ್ (ವಿಕೆಟ್‌ಕೀಪರ್), ಅಥರ್ವ್ ಅಂಕೋಲೆಕರ್, ತನುಷ್ ಕೋಟ್ಯಾನ್, ಶಾರ್ದೂಲ್ ಠಾಕೂರ್, ರಾಯಸ್ಟನ್ ದಿಯಾಸ್, ಜುನೇದ್ ಖಾನ್, ಹರ್ಷ ತನ್ನಾ, ವಿನಾಯಕ ಭೋರ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.