ADVERTISEMENT

‘ಆತ ರಾಕ್‌ಸ್ಟಾರ್’: ಹ್ಯಾಟ್ರಿಕ್ ವಿಕೆಟ್ ಸಾಧನೆಗೆ ಜಡೇಜಾ ಸ್ಫೂರ್ತಿ ಎಂದ ಅಗರ್

ಏಜೆನ್ಸೀಸ್
Published 22 ಫೆಬ್ರುವರಿ 2020, 11:04 IST
Last Updated 22 ಫೆಬ್ರುವರಿ 2020, 11:04 IST
   

ನವದೆಹಲಿ:ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಹ್ಯಾಟ್ರಿಕ್‌ ಸಹಿತ 5 ವಿಕೆಟ್‌ ಉರುಳಿಸಿ ಆಸ್ಟ್ರೇಲಿಯಾ ಗೆಲುವಿಗೆ ಕಾರಣರಾದ ಸ್ಪಿನ್ನರ್‌ ಆಸ್ಟನ್‌ ಅಗರ್‌, ತಮ್ಮ ಸಾಧನೆಗೆ ಭಾರತದ ಆಲ್ರೌಂಡರ್‌ ರವೀಂದ್ರ ಜಡೇಜಾ ಸ್ಫೂರ್ತಿ ಎಂದು ಹೇಳಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವಆಸ್ಟ್ರೇಲಿಯಾತಲಾ ಮೂರು ಪಂದ್ಯಗಳ ಟಿ20 ಹಾಗೂ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಅದರಂತೆ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ.

ಜೋಹಾನ್ಸ್‌ಬರ್ಗ್‌ನಲ್ಲಿ ಜರುಗಿದ ಮೊದಲ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡಿದ ಆಸಿಸ್‌, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 196 ರನ್‌ ಕಲೆಹಾಕಿತ್ತು. ಈ ಮೊತ್ತ ಬೆನ್ನಟ್ಟಿದ ಹರಿಣಗಳ ತಂಡ ಅಗರ್‌ ಅವರ ಪರಿಣಾಮಕಾರಿ ದಾಳಿ ಎದುರು ಕೇವಲ 89ರನ್‌ಗೆ ಕುಸಿದಿತ್ತು.

ADVERTISEMENT

ಆಫ್ರಿಕಾ ಇನಿಂಗ್ಸ್‌ನ 8ನೇ ಓವರ್‌ನಲ್ಲಿ ದಾಳಿಗಿಳಿದ ಅಗರ್‌, 4, 5 ಮತ್ತು ಆರನೇ ಎಸೆತಗಳಲ್ಲಿ ಕ್ರಮವಾಗಿ ಫಾಫ್‌ ಡು ಪ್ಲೆಸಿ, ಆ್ಯಂಡಿಲೆ ಪೆಹ್ಲುಕ್ವಾಯೊ ಹಾಗೂ ಡೇಲ್‌ ಸ್ಟೇಯ್ಸ್‌ ಅವರ ವಿಕೆಟ್‌ ಪಡೆದು ಹ್ಯಾಟ್ರಿಕ್‌ ಸಾಧನೆ ಮಾಡಿದ್ದರು.ಇದರೊಂದಿಗೆ ಮಾಜಿ ವೇಗಿ ಬ್ರೆಟ್‌ ಲೀ ಬಳಿಕ ಆಸ್ಟ್ರೇಲಿಯಾ ಪರ ಈ ಸಾಧನೆ ಮಾಡಿದ ಎರಡನೇ ಬೌಲರ್‌ ಎನಿಸಿದರು.

ಈ ಪಂದ್ಯದಲ್ಲಿ ನಾಲ್ಕು ಓವರ್‌ ಎಸೆದ ಅಗರ್‌ 24 ರನ್‌ ನೀಡಿ ಪ್ರಮುಖ 5 ವಿಕೆಟ್‌ ಪಡೆದು ಮಿಂಚಿದರು. ಇದೂ ಕೂಡ ಆಸಿಸ್‌‍ ಪರ ಅತ್ಯುತ್ತಮ ಬೌಲಿಂಗ್‌ ನಿರ್ವಹಣೆ ಎನಿಸಿತು. ಈ ಹಿಂದೆ 2016ರ ವಿಶ್ವಕಪ್‌ ವೇಳೆ ಜೇಮ್ಸ್‌ ಫ್ಯಾಕ್ನರ್‌ ಅವರೂ ಪಾಕಿಸ್ತಾನ ವಿರುದ್ಧ 24 ರನ್‌ ನೀಡಿ 5 ವಿಕೆಟ್‌ ಪಡೆದಿದ್ದರು.

ಅಗರ್‌ಗೆ ಉತ್ತಮ ಬೆಂಬಲ ನೀಡಿದ ಆ್ಯಡಂ ಜಂಪಾ ಮತ್ತು ಪ್ಯಾಟ್‌ ಕಮಿನ್ಸ್‌ ತಲಾ ಎರಡು ವಿಕೆಟ್‌ ಪಡೆದಿದ್ದರು. ಇನ್ನೊಂದು ವಿಕೆಟ್‌ ಮಿಚೇಲ್‌ ಸ್ಟಾರ್ಕ್‌ ಪಾಲಾಯಿತು.

ಜಡೇಜಾ ಸ್ಫೂರ್ತಿ
ಪಂದ್ಯದ ಬಳಿಕ ಮಾತನಾಡಿರುವ ಅಗರ್‌, ಭಾರತದಲ್ಲಿ ನಡೆದ ಏಕದಿನ ಸರಣಿ ಬಳಿಕ ಜಡೇಜಾ ಅವರೊಂದಿಗೆ ನಡೆಸಿದ ಮಾತುಕತೆಯೇ ಈ ಸಾಧನೆಗೆ ಸ್ಫೂರ್ತಿ ಎಂದು ಹೇಳಿಕೊಂಡಿದ್ದಾರೆ. ‘ಭಾರತ ಸರಣಿ ಬಳಿಕ ಜಡೇಜಾ ಜೊತೆ ಉತ್ತಮವಾದ ಮಾತುಕರೆ ನಡೆಸಿದ್ದೆ. ಆತ ನನ್ನ ನೆಚ್ಚಿನ ಆಟಗಾರ. ನಾನೂ ಜಡೇಜಾ ರೀತಿ ಆಡಲು ಬಯಸುತ್ತೇನೆ’ ಎಂದಿದ್ದಾರೆ.

ಮುಂದುವರಿದು, ‘ಖಂಡಿತಾ ಆತ ರಾಕ್‌ಸ್ಟಾರ್‌. ಅಮೋಘ ಫೀಲ್ಡರ್‌. ಸ್ಪಿನ್‌ ಬೌಲಿಂಗ್ ಮಾಡಬಲ್ಲ. ಧನಾತ್ಮಕ ಆಲೋಚನೆಯೊಂದಿಗೆಬ್ಯಾಟಿಂಗ್‌ ನಡೆಸುತ್ತಾರೆ. ಫೀಲ್ಡಿಂಗ್‌ನಲ್ಲಿಯೂ ಅದೇ ಮನೋಭಾವನೆಯೊಂದಿಗೆ ಕಾಣಿಸಿಕೊಳ್ಳುತ್ತಾರೆ’ ಎಂದು ಹೇಳಿಕೊಂಡಿದ್ದಾರೆ.

ಎಡಗೈ ಆಫ್‌ ಸ್ಪಿನ್ನರ್‌ಗಳಾಗಿರುವ ಈ ಇಬ್ಬರೂತಮ್ಮ ತಮ್ಮ ತಂಡಗಳ ಪರ ಏಳನೇ ಕ್ರಮಾಂಕದಲ್ಲಿಯೇ ಬ್ಯಾಟಿಂಗ್‌ ಮಾಡುತ್ತಾರೆ ಎಂಬುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.