ಬೆಂಗಳೂರು: ‘ಚೊಚ್ಚಲ ವಿಶ್ವಕಪ್ ಜಯಿಸಿದಾಗ ಕನಸು ನನಸಾದ ಸಂತಸ. ಈಗ ಎರಡನೇಯದನ್ನು ಜಯಿಸಿದ್ದು ವಿಶೇಷ ಹಾಗೂ ಎರಡೂ ವಿಶ್ವಕಪ್ ಜಯಿಸಿದ್ದು ನಮ್ಮ ಸಹಜ ಸಾಮರ್ಥ್ಯದಿಂದ ಎಂಬುದನ್ನು ಸಾಬೀತು ಮಾಡಲು ಮೂರನೇ ಪ್ರಶಸ್ತಿ ಗೆಲ್ಲಬೇಕು‘–
ಮಲೇಷ್ಯಾದಲ್ಲಿ ಈಚೆಗೆ 19 ವರ್ಷದೊಳಗಿನವರ ಟಿ20 ವಿಶ್ವಕಪ್ ಜಯಿಸಿದ ಭಾರತ ಯುವ ತಂಡದ ಮುಖ್ಯ ಕೋಚ್ ನೂಷಿನ್ ಅಲ್ ಖಾದೀರ್ ಅವರ ನುಡಿಗಳಿವು. 'ಡಬಲ್ ವಿಶ್ವ ಚಾಂಪಿಯನ್ ಕೋಚ್’ ನೂಷಿನ್ ಅವರು ಕರ್ನಾಟಕದವರು. ಪುರುಷರ ಕ್ರಿಕೆಟ್ ವಿಭಾಗದಲ್ಲಿ ಜೂನಿಯರ್ ಮತ್ತು ಯೂತ್ ವಿಭಾಗದಲ್ಲಿ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರಂತೆಯೇ ನೂಷಿನ್ ಕೂಡ ಮಹಿಳಾ ಕ್ರಿಕೆಟ್‌ನಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2023ರಲ್ಲಿ ಶಫಾಲಿ ವರ್ಮಾ ನಾಯಕತ್ವದ ತಂಡವು 19 ವರ್ಷದೊಳಗಿನವರ ಚೊಚ್ಚಲ ಟಿ20 ವಿಶ್ವಕಪ್ ಜಯಿಸಿತ್ತು. ಈಗ ಕರ್ನಾಟಕದ ನಿಕಿ ಪ್ರಸಾದ್ ಅವರ ನಾಯಕತ್ವದಲ್ಲಿ ಮತ್ತೆ ಕಿರೀಟ ಧರಿಸಿದೆ. ಎರಡೂ ಸಲವೂ ನೂಷಿನ್ ಮುಖ್ಯ ಕೋಚ್ ಆಗಿದ್ದರು. ಅವರು ತಮ್ಮ ಅನುಭವವನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.
ಎರಡು ವಿಶ್ವಕಪ್ ಗೆಲುವುಗಳಲ್ಲಿ ಏನು ವ್ಯತ್ಯಾಸ ಗುರುತಿಸುತ್ತೀರಿ?
ಚೊಚ್ಚಲ ಟ್ರೋಫಿ ಗೆದ್ದು ಇತಿಹಾಸ ರಚಿಸುವ ಕನಸಿತ್ತು. ಅದು ಈಡೇರಿತು. ಈ ಬಾರಿಯದ್ದು ವಿಶೇಷ. ಹೋದ ಸಲ ಭಾರತ ಸೀನಿಯರ್ ತಂಡದಲ್ಲಿ ಆಡಿದ್ದ ಶಫಾಲಿ ವರ್ಮಾ ಮತ್ತು ರಿಚಾ ಘೋಷ್ ಅವರು ಟೂರ್ನಿಗೆ ಎರಡು ದಿನ ಬಾಕಿಯಿದ್ದಾಗ ಬಂದು ಸೇರಿಕೊಂಡಿದ್ದರು. ಆದರೆ ಈ ಸಲ ಅನುಭವಿಗಳ ಸಾಂಗತ್ಯ ಇರಲಿಲ್ಲ. ಪ್ರತಿಭಾನ್ವಿತ ಆಟಗಾರ್ತಿಯರು ಅಜೇಯವಾಗಿ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದರು. ಕಳೆದ ಏಳೆಂಟು ತಿಂಗಳುಗಳಲ್ಲಿ ಅಟಗಾರ್ತಿಯರು ಬಹಳ ಪರಿಶ್ರಮಪಟ್ಟಿದ್ದಾರೆ. ಅದರಲ್ಲೂ ಗೋಂಗಡಿ ತ್ರಿಷಾ ಅವರ ಆಟ ಪ್ರಬುದ್ಧವಾಗಿತ್ತು. ಶಫಾಲಿ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಿದರು. ಹೋದ ಸಲವೂ ಆಡಿದ್ದ ಅವರ ಅನುಭವ ಇಲ್ಲಿ ಉಪಯೋಗವಾಯಿತು. ಟಿ20 ಬ್ಯಾಟಿಂಗ್ ಗೆ ಹೊಸ ಆಯಾಮ ನೀಡಿದರು.
ಈ ಗೆಲುವುಗಳು ಭಾರತದ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಹೇಗೆ ನೆರವಾಗಬಲ್ಲವು?
ಭಾರತ ಮಹಿಳಾ ಕ್ರಿಕೆಟ್‌ಗೆ ಈ ಗೆಲುವುಗಳು ಅಪಾರ ಶಕ್ತಿ ತುಂಬಲಿವೆ. ಇವರೇ ಮುಂದೆ ಸೀನಿಯರ್ ತಂಡದ ಆಟಗಾರ್ತಿಯರಾಗುತ್ತದೆ. ಕೌಶಲ, ಗಟ್ಟಿ ಮನೋದಾರ್ಢ್ಯ ಮತ್ತು ಅಪಾರ ಪ್ರತಿಭೆಗಳಿರುವ ಆಟಗಾರ್ತಿಯರು ಇವರು.
ನಿಕಿ ಪ್ರಸಾದ್ ಅವರ ನಾಯಕತ್ವದ ಕುರಿತು ಏನು ಹೇಳುವಿರಿ?
ಅವರು ಮುಂಚೂಣಿ ನಾಯಕಿ. ಇಷ್ಟು ಕಡಿಮೆ ವಯಸ್ಸಿನಲ್ಲಿಯೇ ಅಪಾರ ನಾಯಕತ್ವ ಗುಣ ಹೊಂದಿದ್ದಾರೆ. ತಂಡದಲ್ಲಿ ಯಾರಿಗೆ ಯಾವ ರೀತಿಯ ಸಾಮರ್ಥ್ಯ ಇದೆ ಎಂಬುದನ್ನು ಗುರುತಿಸಿ ಹೊಣೆ ನೀಡಿದ್ದರು. ಶಾಂತಚಿತ್ತ ಹಾಗೂ ಲವಲವಿಕೆಯಿಂದ ಸಹ ಆಟಗಾರ್ತಿಯರಿಗೆ ಸ್ಫೂರ್ತಿ ತುಂಬಿ ಮುನ್ನಡೆಸಿದರು. ಉತ್ತಮ ಭವಿಷ್ಯ ಇದೆ ಅವರಿಗೆ.
ಈ ಗೆಲುವುಗಳಲ್ಲಿ ನೆರವು ಸಿಬ್ಬಂದಿಯ ಪಾತ್ರವೇನು?
ಇಡೀ ಟೂರ್ನಿಯಲ್ಲಿ ಒಬ್ಬ ಆಟಗಾರ್ತಿಯೂ ಗಾಯಗೊಳ್ಳದೇ ಆಡಿದ್ದು ನೆರವು ಸಿಬ್ಬಂದಿಯ ಕಾರ್ಯತತ್ಪರತೆಗೆ ಉತ್ತಮ ನಿದರ್ಶನ. ಫಿಸಿಯೊ, ಟ್ರೇನರ್ ಮತ್ತಿತರರು ಕಳೆದ ಎಂಟು ತಿಂಗಳುಗಳಿಂದ ತಂಡವನ್ನು ನಿರ್ವಹಿಸಿದ್ದಾರೆ. ಯಶಸ್ಸಿನಲ್ಲಿ ನೆರವು ಸಿಬ್ಬಂದಿಯದ್ದೇ ಸಿಂಹಪಾಲಿದೆ. ಮಲೇಷ್ಯಾದಲ್ಲಿ ನಮಗೆ ಹವಾಗುಣದ್ದೇ ದೊಡ್ಡ ಸವಾಲಿತ್ತು. ಆರಂಭಿಕ ಪಂದ್ಯಗಳ ಸಂದರ್ಭದಲ್ಲಿ ಮಳೆ ಇತ್ತು. ಸೂಪರ್ ಸಿಕ್ಸ್ ಹಾಗೂ ನಂತರ ಸ್ಥಿತಿ ಸುಧಾರಿಸಿತು. ಈ ಬದಲಾವಣೆಗಳಿಗೆ ತ್ವರಿತವಾಗಿ ಹೊಂದಿಕೊಳ್ಳುವಲ್ಲಿ ತಂಡ ಯಶಸ್ವಿಯಾಯಿತು. ಇದರಲ್ಲಿ ನೆರವು ಸಿಬ್ಬಂದಿಯ ಪಾತ್ರವಿತ್ತು.
ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟೂರ್ನಿಯು ಹೆಣ್ಣುಮಕ್ಕಳ ಕ್ರಿಕೆಟ್‌ಗೆ ಉತ್ತೇಜನಕಾರಿಯೇ?
ಹೌದು; ಡಬ್ಲ್ಯುಪಿಎಲ್ ಆರಂಭವಾಗಿದ್ದು ಒಳ್ಳೆಯ ಬೆಳವಣಿಗೆ. ಇಲ್ಲಿಯ ಆಟಗಾರ್ತಿಯರಿಗೆ ವಿದೇಶಿ ಆಟಗಾರ್ತಿಯರೊಂದಿಗೆ ಒಡನಾಡಲು ಸಾಧ್ಯವಾಗುತ್ತದೆ. ಅವರ ಆಟ, ವ್ಯಕ್ತಿತ್ವ ಹಾಗೂ ಕಾರ್ಯಶೈಲಿಯನ್ನು ಸಮೀಪದಿಂದ ಗಮನಿಸುವ ಅವಕಾಶ ಸಿಗುತ್ತದೆ. ಇದು ಆಟಗಾರ್ತಿಯರಲ್ಲಿ ಆತ್ಮವಿಶ್ವಾಸ ಬೆಳೆಸುತ್ತದೆ. ಜಿ. ಕಮಲಿನಿ ಅವರು ಈಚೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ₹ 1.6 ಕೋಟಿ ಪಡೆದು ಸೇರ್ಪಡೆಗೊಂಡರು. ಅಲ್ಲಿ ಆಲ್‌ರೌಂಡರ್ ನ್ಯಾಟ್ ಸೀವರ್ ಅವರೊಂದಿಗೆ ಆಡುವುದು ಕಮಲಿನಿಯಂತಹ ಜೂನಿಯರ್ ಆಟಗಾರ್ತಿಯರಿಗೆ ಉತ್ತಮ ಅನುಭವವಾಗಲಿದೆ.
ಕಲಬುರ್ಗಿಯಲ್ಲಿ ಜನಿಸಿದ್ದ ನೂಷಿನ್
ಕಲಬುರ್ಗಿಯಲ್ಲಿ ಜನಿಸಿದ್ದ ನೂಷಿನ್ ಅವರು ಕರ್ನಾಟಕ ಮಹಿಳಾ ತಂಡದಲ್ಲಿ ಸ್ಪಿನ್ ಬೌಲರ್ ಆಗಿ ಮತ್ತು ನಾಯಕಿಯಾಗಿ ಹಲವು ವರ್ಷ ಆಡಿದ್ದರು. ಭಾರತ ತಂಡದಲ್ಲಿ 5 ಟೆಸ್ಟ್‌ಗಳಲ್ಲಿ 14 ವಿಕೆಟ್ ಗಳಿಸಿದ್ದರು. 78 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಿಂದ 100 ವಿಕೆಟ್ ಗಳಿಸಿದ್ದರು. ಟಿ20 ಮಾದರಿಯಲ್ಲಿ 2 ಪಂದ್ಯಗಳನ್ನು ಆಡಿದ್ದರು.
‘ಗುಲ್ಬರ್ಗದಲ್ಲಿ (ಕಲಬುರ್ಗಿ) ನನ್ನ ತಂದೆಯ ಸಹೋದರಿ ಸಂಬಂಧಿಕರು ಇದ್ದಾರೆ. ನಾನು ಅಡುವಾಗ ಬೆಂಗಳೂರಿನಲ್ಲಿದ್ದದ್ದೇ ಹೆಚ್ಚು. ಉದ್ಯೋಗ ಸಿಕ್ಕ ನಂತರ ಹೈದರಾಬಾದಿನಲ್ಲಿ ನೆಲೆಸಿದ್ದೇನೆ’ ಎಂದು ನೂಷಿನ್ ಹೇಳಿದರು. ಅವರು ಇದೇ 13ರಂದು 44ನೇ ವಸಂತಕ್ಕೆ ಕಾಲಿಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.