ಸುಪ್ರೀಂ ಕೋರ್ಟ್–ಪಿಟಿಐ ಚಿತ್ರ
ನವದೆಹಲಿ: ಕ್ರಿಕೆಟ್ ಸೇರಿದಂತೆ ಕ್ರೀಡೆಗೆ ಸಂಬಂಧಿಸಿದ ಪ್ರಕರಣಗಳಿಂದ ದೂರವಿರಲು ಕೋರ್ಟ್‌ಗೆ ಇದು ಸಕಾಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿತು.
‘ಕ್ರಿಕೆಟ್‌ನಲ್ಲಿ ಕ್ರೀಡೆಯಾಗಿ ಉಳಿದಿರುವುದು ಏನೂ ಇಲ್ಲ. ವಾಸ್ತವದಲ್ಲಿ ಇದೆಲ್ಲವೂ ಉದ್ಯಮವಾಗಿದೆ’ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನು ಒಳಗೊಂಡ ಪೀಠ ಅಭಿಪ್ರಾಯಪಟ್ಟಿತು.
ಜಬಲ್ಪುರ ವಿಭಾಗವನ್ನು ಕ್ರಿಕೆಟ್ ಸಂಸ್ಥೆ ಮಾಡಬೇಕೆಂಬ ವಿಷಯಕ್ಕೆ ಸಂಬಂಧಿಸಿ ಮಧ್ಯಪ್ರದೇಶ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಪೀಠವು ಹೀಗೆ ಹೇಳಿತು.
‘ನಾವೇ ಇವತ್ತು ಕ್ರಿಕೆಟ್ ಆಡುತ್ತಿದ್ದೇವೆ. ಮೂರು– ನಾಲ್ಕು ವಿಷಯ ಇದಕ್ಕೇ ಸಂಬಂಧಿಸಿದೆ. ಈಗಾಗಲೇ ಒಂದು ಪ್ರಕರಣವನ್ನು ಮುಂದಕ್ಕೆ ಹಾಕಲಾಗಿದೆ. ಇದು ಎರಡನೆಯ ಪ್ರಕರಣ. ಇವತ್ತೇ ಎಷ್ಟು ಟೆಸ್ಟ್ ಪಂದ್ಯಗಳನ್ನು ಆಡಬೇಕೆಂದಿದ್ದೀರಿ?‘ ಎಂದು ನ್ಯಾ. ನಾಥ್ ಅವರು ವಿವಿಧ ಕಕ್ಷಿದಾರರನ್ನು ಪ್ರತಿನಿಧಿಸಿದ್ದ ವಕೀಲರನ್ನು ಕೇಳಿದರು.
‘ಕ್ರಿಕೆಟ್, ಬ್ಯಾಡ್ಮಿಂಟನ್, ವಾಲಿಬಾಲ್, ಬ್ಯಾಸ್ಕೆಟ್‌ಬಾಲ್ ಸಹವಾಸದಿಂದ ದೂರವಿರಲು ಇದು ಕೋರ್ಟ್‌ಗೆ ಸಕಾಲ’ ಎಂದು ನ್ಯಾ.ನಾಥ್ ಹೇಳಿದರು.
ಪ್ರಕರಣವನ್ನು ಮುಂದುವರಿಸುವುದಕ್ಕೆ ಪೀಠವು ಒಲವು ವ್ಯಕ್ತಪಡಿಸಲಿಲ್ಲ. ಅರ್ಜಿದಾರರ ಪರ ವಕೀಲರು ಪ್ರಕರಣ ಹಿಂಪಡೆಯಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಪೀಠವು ಇದಕ್ಕೆ ಸಮ್ಮತಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.