ಕರ್ನಾಟಕ–ಮುಂಬೈ ರಣಜಿ ಪಂದ್ಯ
ಚಿತ್ರ: @AdarshaUm
ಹುಬ್ಬಳ್ಳಿ: ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡದ ವಿರುದ್ಧ ಕರ್ನಾಟಕ ತಂಡ ರೋಚಕ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಪಂದ್ಯದ ಸಂದರ್ಭದ ಘಟನೆಯನ್ನು ಹುಬ್ಬಳ್ಳಿ ಪೊಲೀಸರು ಸಂಚಾರ ಜಾಗೃತಿಗೆ ಬಳಸಿಕೊಂಡಿದ್ದಾರೆ.
ಪಂದ್ಯದ ನಡುವೆ ಮುಂಬೈ ವೇಗಿ ತುಷಾರ ದೇಶಪಾಂಡೆ ಅವರು ಬ್ಯಾಟಿಂಗ್ ಮಾಡುತ್ತಿದ್ದ ವಿದ್ಯಾಧರ್ ಪಾಟೀಲ್ ಅವರನ್ನು ಕೆಣಕಲು ಮುಂದಾಗುತ್ತಾರೆ. ಆದರೆ, ತಾಳ್ಮೆ ಕಳೆದುಕೊಳ್ಳದ ವಿದ್ಯಾಧರ್ ಪಂದ್ಯ ಗೆಲ್ಲಿಸಿ ಹೀರೊ ಆಗಿದ್ದಾರೆ. ಈ ಘಟನೆಯನ್ನು ಹುಬ್ಬಳ್ಳಿ ಜಿಲ್ಲಾ ಪೊಲೀಸರು, ವಾಹನ ಚಲಾಯಿಸುವಾಗ ತಾಳ್ಮೆ ಎಷ್ಟು ಮುಖ್ಯ ಎಂಬುಕ್ಕೆ ಹೋಲಿಸಿ, ಪೋಸ್ಟ್ ಒಂದನ್ನು ಹಂಚಿಕೊಂಡಿದೆ.
ತಾಳ್ಮೆ ಮತ್ತು ಸಮಯೋಜಿತವಾಗಿರಿ
ಹುಬ್ಬಳ್ಳಿ–ಧಾರವಾಡ ನಗರ ಪೊಲೀಸ್ ಪೋಸ್ಟ್ ಹಂಚಿಕೊಂಡು, ‘ಒತ್ತಡ ಹೆಚ್ಚಾದಾಗ ಕೆಲವರು ಜಾಸ್ತಿ ಕೂಗಾಡ್ತಾರೆ... ಆದರೆ ಕೂಗಾಡೋದ್ರಿಂದ ಆಟದ ದಿಕ್ಕು ಬದಲಾಗಲ್ಲ. ವಿದ್ಯಾಧರ ರೀತಿಯಲ್ಲಿ ತಾಳ್ಮೆ ಮತ್ತು ಸ್ಥಿತಪ್ರಜ್ಞ (Calm & Composed) ಆಟ ಆಡಿದಾಗಲೇ ಗೆಲುವು ಸಾಧ್ಯ’
‘ಆಟದಲ್ಲಿ ನಿಯಂತ್ರಣ ಕಳೆದುಕೊಂಡರೆ ಆಟ ಕೈ ತಪ್ಪುತ್ತದೆ. ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡರೆ ಜೀವ ಕೈ ತಪ್ಪುತ್ತದೆ’ ಎಂದು ಬರೆದುಕೊಂಡು ಸಂಚಾರಿ ನಿಯಮ ಪಾಲಿಸುವಂತೆ ಕರೆ ನೀಡಿದ್ದಾರೆ.
ಪಂದ್ಯದ ನಡುವೆ ಆಗಿದ್ದೇನು?
ನಿನ್ನೆ (ಸೋಮವಾರ) ಮುಕ್ತಾಯಗೊಂಡ ಪಂದ್ಯದಲ್ಲಿ ಕರ್ನಾಟಕ ತಂಡ ಸಂಕಷ್ಟದಲ್ಲಿದ್ದಾಗ ಕೆಚ್ಚೆದೆಯ ಬ್ಯಾಟಿಂಗ್ (30 ರನ್, 31ಎಸೆತ) ಪ್ರದರ್ಶಿಸಿದ ವಿದ್ಯಾಧರ ಪಾಟೀಲ್ ಅವರು ಪಂದ್ಯ ಗೆಲ್ಲಲು ನೆರವಾದರು.
ಈ ಸಂದರ್ಭದಲ್ಲಿ ಮುಂಬೈನ ವೇಗಿ ತುಷಾರ್ ದೇಶಪಾಂಡೆ ಅವರು ಬೌನ್ಸರ್ ಹಾಗಿ ವಿದ್ಯಾಧರ್ ಅವರನ್ನು ಗುರಾಯಿಸಿ, ಕೆಣಕಲು ಮುಂದಾಗುತ್ತಾರೆ. ಆದರೆ, ತಾಳ್ಮೆ ಕಳೆದುಕೊಳ್ಳದ ವಿದ್ಯಾಧರ್ ಪಂದ್ಯ ಗೆಲ್ಲಿಸುವ ಮೂಲಕ ಉತ್ತರ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.