ADVERTISEMENT

8 ವರ್ಷ ಭಾರತ ಪರ ಇನಿಂಗ್ಸ್ ಆರಂಭಿಸಿದ್ದೇನೆ: ರೋಹಿತ್–ವಾರ್ನರ್‌ಗೆ ಧವನ್ ತಿರುಗೇಟು

ಏಜೆನ್ಸೀಸ್
Published 14 ಮೇ 2020, 14:13 IST
Last Updated 14 ಮೇ 2020, 14:13 IST
   

ನವದೆಹಲಿ: ಶಿಖರ್‌ ಧವನ್‌ ವೇಗದ ಬೌಲರ್‌ಗಳೆದುರು ಬ್ಯಾಟಿಂಗ್‌ ಮಾಡುವುದನ್ನು ಬಯಸುವುದಿಲ್ಲ ಎಂದು ಭಾರತ ಕ್ರಿಕೆಟ್‌ ತಂಡದ ಉಪನಾಯಕ ರೋಹಿತ್‌ ಶರ್ಮಾ ಮತ್ತು ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಹೇಳಿದ್ದರು. ಈ ಹೇಳಿಕೆಯನ್ನು ಅಲ್ಲಗಳೆದಿರುವ ಶಿಖರ್ ಧವನ್‌, ನಾನು ಭಾರತ ಪರ 8 ವರ್ಷ ಇನಿಂಗ್ಸ್‌ ಆರಂಭಿಸಿದ್ದೇನೆ‌ ಎಂದು ತಿರುಗೇಟು ನೀಡಿದ್ದಾರೆ.

ಭಾರತ ಪರ ರೋಹಿತ್‌ ಜೊತೆಗೆ ಇನಿಂಗ್ಸ್‌ ಆರಂಭಿಸುವ ಧವನ್‌, ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದಲ್ಲಿ ಆಸ್ಟ್ರೇಲಿಯಾದ ವಾರ್ನರ್‌ ಜೊತೆ ಕಣಕ್ಕಿಳಿಯುತ್ತಾರೆ.

ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಮಾತುಕತೆ ನಡೆಸಿದ ವಾರ್ನರ್ ಹಾಗೂ ರೋಹಿತ್‌, ಶಿಖರ್‌ ಧವನ್ ಜೊತೆಗೆ ಇನಿಂಗ್ಸ್‌ ಆರಂಭಿಸುವ ಬಗೆಗಿನ ಅನುಭವ ಹಂಚಿಕೊಂಡಿದ್ದರು. ಈ ವೇಳೆ ವಾರ್ನರ್‌, ‘ಒಮ್ಮೆ ಮಾತ್ರವೇ ಧವನ್‌ ಇನಿಂಗ್ಸ್‌ನ ಮೊದಲ ಎಸೆತಆಡಿದ್ದನ್ನು ನೋಡಿದ್ದೇನೆ. ಅದೂ ಹರ್ಭಜನ್ ಸಿಂಗ್‌‌ ಬೌಲಿಂಗ್‌ನಲ್ಲಿ. ಎಡಗೈ ವೇಗಿಗಳು ಬೌಲಿಂಗ್ ಮಾಡುವುದಿದ್ದರೆ, ನೀನೇ ಸ್ಟ್ರೈಕ್‌ನಲ್ಲಿ ಆಡು. ಇನ್‌ಸ್ವಿಂಗ್ ಎಸೆತಗಳನ್ನು ಆಡುವುದು ನನಗಿಷ್ಟವಿಲ್ಲ ಎಂದು ಧವನ್‌ ಯಾವಾಗಲೂ ಹೇಳುತ್ತಾರೆ’ ಎಂದು ವಾರ್ನರ್‌ ಹೇಳಿದ್ದರು.

ADVERTISEMENT

ಇ‌ದಕ್ಕೆಪ್ರತಿಯಾಗಿ ರೋಹಿತ್‌, ‘ಆತನೊಬ್ಬ ಮೂರ್ಖ. ನಾನೇನು ಹೇಳಲು ಸಾಧ್ಯ. ಆತ ಮೊದಲ ಎಸೆತವನ್ನು ಆಡಲು ಬಯಸುವುದಿಲ್ಲ. ಸ್ಪಿನ್ನರ್‌ಗಳೆದುರು ಬ್ಯಾಟ್‌ ಬೀಸಲು ಇಷ್ಟಪಡುತ್ತಾನೆ. ಆದರೆ, ವೇಗಿಗಳನ್ನು ಎದುರಿಸಲು ಬಯಸಲಾರ’ ಎಂದಿದ್ದರು.

ಧವನ್‌ ಜೊತೆಗೆ ಬುಧವಾರ ಇನ್‌ಸ್ಟಾಗ್ರಾಂ ಲೈವ್‌ ನಡೆಸಿದ ಇರ್ಫಾನ್‌ ಪಠಾಣ್‌, ವಾರ್ನರ್‌ ಮತ್ತು ರೋಹಿತ್‌ ಹೇಳಿಕೆಗಳಿಗೆ ಪ್ರತಿಕ್ರಿಯಿಸುವಂತೆ ಕೋರಿದ್ದರು. ಈ ವೇಳೆ ಧವನ್‌, ತಮ್ಮ ಬಗೆಗಿನ ಮಾತುಗಳನ್ನು ಅಲ್ಲಗಳೆದಿದ್ದಾರೆ. ಮುಂದುವರಿದು,ವೇಗಿಗಳೆದುರು ರಕ್ಷಣಾತ್ಮಕವಾಗಿ ಆಡುವುದು ನನಗಿಷ್ಟವಿಲ್ಲ ಎಂದಿದ್ದಾರೆ.

‘ಇಲ್ಲ ಇಲ್ಲ.ನಾನು ಅವರ ಮಾತನ್ನು ಒಪ್ಪುವುದಿಲ್ಲ. ವೇಗದ ಬೌಲಿಂಗ್‌ ಎದುರಿಸಲು ನನಗಿಷ್ಟವಿಲ್ಲ ಎಂದಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ದೃಷ್ಟಿಕೋನವಿದೆ. ನಾನು ಆರಂಭಿಕ ಬ್ಯಾಟ್ಸ್‌ಮನ್‌. ಆ ಕೆಲಸವನ್ನು ಭಾರತ ಪರ ಕಳೆದ ಎಂಟು ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ. ಮೊದಲ ಓವರ್‌ನಲ್ಲಿ ನಾನು ವೇಗದ ಎಸೆತಗಳನ್ನು ಆಡದಿದ್ದರೂ, ಎರಡನೇ ಓವರ್‌ನಲ್ಲಿ ಆಡುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಹೌದು. ನಾನು ಇನಿಂಗ್ಸ್‌ನ ಮೊದಲ ಎಸೆತವನ್ನು ಎದುರಿಸಲು ಇಷ್ಟಪಡುವುದಿಲ್ಲ. ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ. ಆದರೆ, ಪೃಥ್ವಿ ಶಾ ರೀತಿಯ ಯಾವುದೇ ಹೊಸ ಆಟಗಾರ ಕ್ರೀಸ್‌ಗೆ ಬಂದರೆ ಆಗ ನಾನೇ ಮೊದಲ ಎಸೆತ ಎದುರಿಸುತ್ತೇನೆ. ಏಕೆಂದರೆ, ಅವರಿಗೆ ಮೊದಲ ಎಸೆತ ಆಡುವುದು ಆರಾಮದಾಯವಾಗಿರುವುದಿಲ್ಲ. ಆದರೆ ರೋಹಿತ್‌ ಜೊತೆಗಿನ ಜೊತೆಯಾಟ ಚಾಂಪಿಯನ್ಸ್‌ ಟ್ರೋಫಿ (2013) ಇಂದ ಆರಂಭವಾಯಿತು. ಅಲ್ಲಿ ರೋಹಿತ್‌ಗೆ ಸ್ಟ್ರೈಕ್ ತೆಗೆದುಕೊಳ್ಳುವಂತೆ ಹೇಳಿದ್ದೆ. ನಾನು ಯಾವುದೇ ವಿಚಾರವನ್ನು ಆಗಾಗ್ಗೆ ಬದಲಿಸುವುದಿಲ್ಲವಾದ್ದರಿಂದ ಅದು ಹಾಗೆಯೇ ಮುಂದುವರಿಯಿತು’ ಎಂದಿದ್ದಾರೆ.

‘ಇಂಗ್ಲೆಂಡ್‌ನಂಥ ವೇಗದ ಪಿಚ್‌ಗಳಲ್ಲಿ ವೇಗಿಗಳನ್ನು ಎದುರಿಸುವುದು ಪ್ರತಿಯೊಬ್ಬ ಆರಂಭಿಕನಿಗೂ ಸವಾಲು. ಆಗನಾನು ವೇಗಿಗಳನ್ನು ಎದುರಿಸಲು ಇಷ್ಟಪಡುವುದಿಲ್ಲ ಎನ್ನುವಂತಿಲ್ಲ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.