
ವೆಸ್ಟ್ ಇಂಡೀಸ್ ತಂಡ
ಕೋಲ್ಕತ್ತ: ‘ಮೇಲಿನ ಕ್ರಮಾಂಕದಲ್ಲಿ ನಾನು ಇನ್ನೂ ವೇಗವಾಗಿ ಆಡಿ ಭಾರತ ತಂಡಕ್ಕೆ ಇನ್ನೂ ದೊಡ್ಡ ಗುರಿ ಇಡಬೇಕಾಗಿತ್ತು’ ಎಂದು ಟಿ20 ವಿಶ್ವಕಪ್‌ನಿಂದ ಹೊರಬಿದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ಶಾಯ್ ಹೋಪ್ ಒಪ್ಪಿಕೊಂಡಿದ್ದಾರೆ.
ಹಾಲಿ ಚಾಂಪಿಯನ್ ಭಾರತ ತಂಡವು ಭಾನುವಾರ ಈಡನ್ ಗಾರ್ಡನ್‌ನಲ್ಲಿ ನಡೆದ ಸೂಪರ್ ಎಂಟರ ಹಂತದ ನಿರ್ಣಾಯಕ ಪಂದ್ಯದಲ್ಲಿ ಸ್ವಲ್ಪ ಕಠಿಣವಾಗಿದ್ದ 196 ರನ್‌ಗಳ ಗುರಿಯನ್ನು ಐದು ಎಸೆತಗಳಿರುವಂತೆ ಸಾಧಿಸಿತ್ತು.
ಹೋಪ್ 33 ಎಸೆತಗಳಲ್ಲಿ 32 ರನ್ (ಸ್ಟ್ರೈಕ್‌ರೇಟ್ 96) ಗಳಿಸಿದ್ದರು. 17 ಎಸೆತಗಳಲ್ಲಿ ಅವರು ರನ್ ಗಳಿಸಲಾಗಿರಲಿಲ್ಲ.
‘ಸೋಲಿಗೆ ನಾನೇ ಹೊಣೆ ಹೊತ್ತುಕೊಳ್ಳುವೆ. ನಾನು ಇನ್ನೂ ತ್ವರಿತಗತಿಯಲ್ಲಿ ಬ್ಯಾಟಿಂಗ್ ಮಾಡಬೇಕಾಗಿತ್ತು’ ಎಂದು ಪಂದ್ಯಾನಂತರದ ಪತ್ರಿಕಾಗೋಷ್ಠಿಯಲ್ಲಿ ಹೋಪ್ ಒಪ್ಪಿಕೊಂಡರು.
ಅರ್ಷದೀಪ್, ಹಾರ್ದಿಕ್, ಅಕ್ಷರ್ ಪಟೇಲ್ ಅವರ ಎದುರು ಹೋಪ್ ಪರದಾಡಿದ್ದರು. ಪವರ್‌ಪ್ಲೇ ನಂತರ ವರುಣ್ ಚಕ್ರವರ್ತಿ ಅವರನ್ನು ಬೌಲ್ಡ್ ಮಾಡಿದ್ದರು. ‘ನಾವು ಪವರ್‌ಪ್ಲೇಯಲ್ಲಿ 65–70 ರನ್ ಗಳಿಸಲು ಬಯಸಿದ್ದೆವು. ಆದರೆ ನೋಲಾಸ್ 45 ರನ್ ಗಳಿಸಿದೆವು’ ಎಂದರು.
ಸಂಜು ಆಟಕ್ಕೆ ಎ+:
ಸ್ಯಾಮ್ಸನ್ ಆಟವನ್ನು ಹೋಪ್ ಶ್ಲಾಘಿಸಿದರು. ‘ಸಂಜು ತಮಗೆ ದೊರೆತ ಅವಕಾಶವನ್ನು ಬಹುಮುಖ್ಯ ಪಂದ್ಯದಲ್ಲಿ ಚೆನ್ನಾಗಿ ಬಳಸಿಕೊಂಡರು. ಆರಂಭದಿಂದಲೇ ಅವರು ಸರಾಗವಾಗಿ ಆಡಿದರು. ಇನಿಂಗ್ಸ್‌ಗೆ ವೇಗ ನೀಡಿದರು. ಅವರು ಆಡಿದ ರೀತಿಗೆ ಎ+ ಅಂಕ ಕೊಡಲೇಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.