ಸಿಂಗಪುರ: ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಸ್ತರ ಪದ್ಧತಿ ಜಾರಿ, ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ತಂಡಗಳ ಹೆಚ್ಚಳ ಹಾಗೂ ನೂತನ ಸದಸ್ಯರ ಸೇರ್ಪಡೆಗೆ ಅನುಮೋದನೆಯ ಕುರಿತು ಗುರುವಾರ ಆರಂಭವಾಗಲಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸರ್ವಸದಸ್ಯರ ಸಭೆಯಲ್ಲಿ (ಎಜಿಎಂ) ಚರ್ಚೆ ನಡೆಯಲಿದೆ.
ನಾಲ್ಕು ದಿನಗಳ ಈ ಸಭೆಯಲ್ಲಿ ಹಲವು ಪ್ರಮುಖ ವಿಷಯಗಳು ಚರ್ಚೆಯಾಗಲಿವೆ. ಪ್ರಸ್ತುತ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಆವರ್ತ (2025–27) ನಡೆಯುತ್ತಿದೆ. ಆದ್ದರಿಂದ ಅದರಲ್ಲಿ ಯಾವುದೇ ಬದಲಾವಣೆ ಕುರಿತ ನಿರ್ಧಾರ ಕೈಗೊಳ್ಳುವುದು ಖಚಿತವಿಲ್ಲ. 2027ರ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಸ್ತರ ಮಾದರಿ ಜಾರಿಗೊಳಿಸುವುದು, ಹಣದ ಹಂಚಿಕೆ, ಬಡ್ತಿ ಮತ್ತು ರೆಲಿಗೇಷನ್ ನಿಯಮಗಳ ರಚನೆ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ.
ಐಸಿಸಿ ಮುಖ್ಯಸ್ಥ ಜಯ್ ಶಾ ಮತ್ತು ಹೊಸದಾಗಿ ನೇಮಕವಾಗಿರುವ ಸಿಇಒ ಸಂಜೋಗ್ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ ಈ ಎಜಿಎಂ ನಡೆಯಲಿದೆ.
ಆದರೆ ಏಕದಿನ ಕ್ರಿಕೆಟ್ ಮಾದರಿಯ ವಿಶ್ವಕಪ್ ಟೂರ್ನಿಯಲ್ಲಿ ಯಾವುದೇ ಹೊಸ ತಂಡವನ್ನು ಸೇರ್ಪಡೆ ಮಾಡುವ ಪ್ರಸ್ತಾವ ಇಲ್ಲ. ಆದರೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಂಡಗಳ ಸಂಖ್ಯೆಯನ್ನು 24ಕ್ಕೆ ಹೆಚ್ಚಿಸುವ ಯೋಚನೆ ಇದೆ. ಈ ಕುರಿತು ಮುಂದಿನ ವರ್ಷದವರೆಗೆ ಯಾವುದೇ ದೃಢ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳು ಕಡಿಮೆ ಇವೆ. ಸದ್ಯ ಟೂರ್ನಿಯಲ್ಲಿ 20 ತಂಡಗಳು ಮಾತ್ರ ಆಡುತ್ತಿವೆ.
2028ರಲ್ಲಿ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಟಿ20 ಕ್ರಿಕೆಟ್ ಸೇರ್ಪಡೆಯಾಗಿದೆ. ಮುಂಬರುವ ಟಿ20 ವಿಶ್ವಕಪ್ ಟೂರ್ನಿಯು ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಈ ಟೂರ್ನಿಗೆ ಹೊಸದಾಗಿ ಇಟಲಿ ತಂಡವು ಈಚೆಗೆ ಅರ್ಹತೆ ಪಡೆದುಕೊಂಡಿದೆ. ಇದರಿಂದಾಗಿ ಮುಂಬರುವ ವರ್ಷಗಳಲ್ಲಿ ಹೊಸ ತಂಡಗಳಿಗೆ ಅವಕಾಶ ಒದಗಿಸುವ ಬಗ್ಗೆ ಚರ್ಚೆಗಳು ನಡೆಯಬಹುದು.
‘ಇಟಲಿಯು ಅರ್ಹತೆ ಗಿಟ್ಟಿಸಿರುವುದು ವಿಶ್ವದಲ್ಲಿ ಕ್ರಿಕೆಟ್ ವ್ಯಾಪ್ತಿಯು ಹೆಚ್ಚುತ್ತಿರುವುದರ ಸಂಕೇತ. ಇದರಿಂದಾಗಿ ಜಗತ್ತಿನಾದ್ಯಂತ ಕ್ರಿಕೆಟ್ ಪ್ರೇಕ್ಷಕರ ಸಂಖ್ಯೆಯನ್ನು ವೃದ್ದಿಸುವತ್ತ ಐಸಿಸಿ ಮಂಡಳಿಯು ಚಿತ್ತ ನೆಟ್ಟಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೋದ ವರ್ಷ ಅಮೆರಿಕ–ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಣದ ದುರ್ಬಳಕೆ ನಡೆದಿತ್ತೆನ್ನಲಾಗಿದೆ. ಈ ಆರೋಪದ ಕುರಿತ ಅಂತಿಮ ವರದಿಯ ನಿರೀಕ್ಷೆಯಲ್ಲಿಯೂ ಐಸಿಸಿ ಇದೆ. ಹೋದ ಜನವರಿಯಲ್ಲಿ ಐಸಿಸಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಜಿಎಫ್ ಅಲಾರ್ಡಿಸ್ ಅವರು ರಾಜೀನಾಮೆ ನೀಡಿದ್ದು ಕೂಡ ಇದೇ ಪ್ರಕರಣಕ್ಕೆ ಸಂಬಂಧಿಸಿಯೇ ಎಂಬ ಮಾತುಗಳೂ ಕೇಳಿಬಂದಿದ್ದವು.
ಈ ಮಧ್ಯೆ ಝಾಂಬಿಯಾ ದೇಶವು ಐಸಿಸಿಯ ಸಹಸದಸ್ಯ ಸ್ಥಾನಕ್ಕೆ ಮರಳುವ ಸಾಧ್ಯತೆ ಇದೆ. 2019ರಲ್ಲಿ ನಿಯಮ ಉಲ್ಲಂಘನೆಯ ಕಾರಣಕ್ಕೆ ಝಾಂಬಿಯಾ ಅಮಾನತುಗೊಂಡಿತ್ತು. ಈ ಬಾರಿ ಈಸ್ಟ್ ಟೈಮೊರ್ ಕೂಡ ಮೊದಲ ಬಾರಿಗೆ ಐಸಿಸಿ ಸಹಸದಸ್ಯತ್ವ ಪಡೆಯುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.