
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ
(ಪಿಟಿಐ ಚಿತ್ರ)
ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಏಕದಿನ ಬ್ಯಾಟರ್‌ಗಳ ಹೊಸ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಅನುಭವಿ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಅವರಿಗೆ ಅಗ್ರಸ್ಥಾನ ನಷ್ಟವಾಗಿದೆ.
ರೋಹಿತ್ ಅವರನ್ನು ಹಿಂದಿಕ್ಕಿರುವ ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್ ಅಗ್ರಸ್ಥಾನ ಅಲಂಕರಿಸಿದ್ದಾರೆ. ಮಿಚೆಲ್ 782 ಹಾಗೂ ರೋಹಿತ್ 781 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ.
ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ರೋಹಿತ್, ಅಗ್ರಸ್ಥಾನ ಗಳಿಸಿದ್ದರು.
ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ ಮಿಚೆಲ್, ಏಕದಿನದಲ್ಲಿ ಅಗ್ರಸ್ಥಾನ ಪಡೆದ ನ್ಯೂಜಿಲೆಂಡ್‌ನ ಎರಡನೇ ಬ್ಯಾಟರ್ ಎನಿಸಿದ್ದಾರೆ. ಅಲ್ಲದೆ ವೃತ್ತಿಜೀವನದಲ್ಲಿ ಮೊದಲನೇ ಸಲ ಅಗ್ರಸ್ಥಾನ ಪಡೆದಿದ್ದಾರೆ.
ಏಕದಿನ ಬ್ಯಾಟರ್‌ಗಳ ಅಗ್ರ 10ರ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ನಾಲ್ವರು ಬ್ಯಾಟರ್‌ಗಳು ಸ್ಥಾನ ಪಡೆದಿದ್ದಾರೆ.
ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ನಾಲ್ಕು ಹಾಗೂ ವಿರಾಟ್ ಕೊಹ್ಲಿ ಐದನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ ಒಂದು ಸ್ಥಾನ ಬಡ್ತಿ ಪಡೆದು ಎಂಟನೇ ಸ್ಥಾನ ಗಳಿಸಿದ್ದಾರೆ.
ಏಕದಿನ ಬೌಲರ್‌ಗಳ ಪಟ್ಟಿಯಲ್ಲಿ ಕುಲದೀಪ್ ಯಾದವ್ ಆರನೇ ಸ್ಥಾನ ಕಾಯ್ದುಕೊಂಡಿದ್ದಾರೆ.
ಟೆಸ್ಟ್ ಬ್ಯಾಟರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್ ಎರಡು ಸ್ಥಾನ ಕುಸಿತ ಕಂಡು 7ಕ್ಕೆ ತಲುಪಿದ್ದಾರೆ. ನಾಯಕ ಶುಭಮನ್ ಗಿಲ್ ಎರಡು ಸ್ಥಾನ ಏರಿಕೆ ಕಂಡು 11ಕ್ಕೆ ತಲುಪಿದ್ದಾರೆ. ಈ ನಡುವೆ ನಾಲ್ಕು ಸ್ಥಾನ ಕುಸಿತ ಕಂಡಿರುವ ರಿಷಭ್ ಪಂತ್ 12ಕ್ಕೆ ತಲುಪಿದ್ದಾರೆ.
ಟೆಸ್ಟ್ ಬೌಲರ್‌ಗಳ ವಿಭಾಗದಲ್ಲಿ ಭಾರತದ ಜಸ್‌ಪ್ರೀತ್ ಬೂಮ್ರಾ 895 ರೇಟಿಂಗ್ ಅಂಕದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.