
ದುಬೈ: ಮುಂದಿನ ತಿಂಗಳ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಪಾಲ್ಗೊಳ್ಳುವುದಕ್ಕೆ ಸಂಬಂಧಿಸಿ ಉಂಟಾಗಿರುವ ಕಗ್ಗಂಟು ಬಗೆಹರಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಇಬ್ಬರು ಸದಸ್ಯರ ತಂಡ ಶನಿವಾರ ಮಧ್ಯಾಹ್ನ ಢಾಕಾಕ್ಕೆ ಬಂದಿಳಿಯಲಿದೆ.
ಭದ್ರತೆಗೆ ಸಂಬಂಧಿಸಿ ಬಿಸಿಬಿ ವ್ಯಕ್ತಪಡಿಸಿರುವ ಆತಂಕವನ್ನು ದೂರ ಮಾಡುವ ಮತ್ತು ಪ್ರಸ್ತುತ ಸ್ಥಿತಿಯಲ್ಲಿ ನಿಗದಿಯಾದ ತಾಣಗಳ ಬದಲಾವಣೆ ಕಾರ್ಯಸಾಧ್ಯವಲ್ಲ ಎಂದು ಮನವರಿಕೆ ಮಾಡುವ ವಿಶ್ವಾಸವನ್ನು ಈ ತಂಡ ಹೊಂದಿದೆ.
ಬಾಂಗ್ಲಾದೇಶ ತಂಡವು ತನ್ನ ವಿಶ್ವಕಪ್ ಪಂದ್ಯಗಳನ್ನು ಕೋಲ್ಕತ್ತ ಮತ್ತು ಮುಂಬೈನಲ್ಲಿ ಆಡಬೇಕಿದೆ. ಆದರೆ ತಂಡಕ್ಕೆ ಭದ್ರತಾ ಕಳವಳ ವ್ಯಕ್ತಪಡಿಸಿ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರಿಸುವಂತೆ ಐಸಿಸಿಗೆ ಮವನಿ ಮಾಡಿದೆ.
ಬಿಸಿಸಿಐ ನಿರ್ದೇಶನದ ಮೇರೆಗೆ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಐಪಿಎಲ್‌ನಿಂದ ವೇಗದ ಬೌಲರ್ ಮುಸ್ತಫಿಝುರ್ ರೆಹಮಾನ್ ಅವರನ್ನು ಕೈಬಿಟ್ಟಿದ್ದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಸಮಾಧಾನಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಭಾರತದಲ್ಲಿ ತನ್ನ ಆಟಗಾರರಿಗೆ ಭದ್ರತೆಯ ಆತಂಕ ವ್ಯಕ್ತಪಡಿಸಿದ ಬಿಸಿಬಿಯು ವಿಶ್ವಕಪ್ ಪಂದ್ಯಗಳ ಸ್ಥಳಾಂತರಕ್ಕೆ ಬೇಡಿಕೆಯಿಟ್ಟಿದೆ.
‘ಐಸಿಸಿಯ ತಂಡ ಢಾಕಾಕ್ಕೆ ಭೇಟಿ ನೀಡಲಿದೆ. ಕಗ್ಗಂಟು ಬಗೆಹರಿಸಲು ಸಾಧ್ಯವಿರುವ ಎಲ್ಲ ದಾರಿಗಳ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ಬಾಂಗ್ಲಾದೇಶದ ಸರ್ಕಾರಿ ಅಧಿಕಾರಿಗಳೂ ಚರ್ಚೆಯಲ್ಲಿ ಭಾಗವಹಿಸುವರೆಂಬ ನಿರೀಕ್ಷೆ ಹೊಂದಿದ್ದೇವೆ’ ಎಂದು ಈ ಬೆಳವಣಿಗೆಯನ್ನು ಬಲ್ಲ ವ್ಯಕ್ತಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ..
ಭಾರತದಲ್ಲಿ ಆಡುವುದಕ್ಕೆ, ಅದರಲ್ಲೂ ವಿಶೇಷವಾಗಿ ಮುಂಬೈನಲ್ಲಿ ಆಡುವುದಕ್ಕೆ ಸಂಬಂಧಿಸಿ ಬಾಂಗ್ಲಾದೇಶವು ತನ್ನ ಆತಂಕವನ್ನು ಐಸಿಸಿ ಮುಂದೆ ಈಗಾಗಲೇ ವ್ಯಕ್ತಪಡಿಸಿದೆ ಎಂದೂ ತಿಳಿಸಿದ್ದಾರೆ. ಬಾಂಗ್ಲಾದೇಶ ತಂಡವು ಫೆಬ್ರುವರಿ 17ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನೇಪಾಳ ವಿರುದ್ಧ ‘ಸಿ’ ಗುಂಪಿನ ಪಂದ್ಯ ಆಡಬೇಕಾಗಿದೆ. ಆದರೆ ಮುಂಬೈನ ಕೆಲವು ರಾಜಕೀಯ ಮುಖಂಡರ ಹೇಳಿಕೆಗಳು ತಂಡದ ಆಟಗಾರರ ಸುರಕ್ಷತೆಗೆ ಬೆದರಿಕೆಯ ಧಾಟಿಯಲ್ಲಿವೆ ಎಂದು ಬಿಸಿಬಿ ಐಸಿಸಿಗೆ ತಿಳಿಸಿದೆ.
ಮಾತುಕತೆಯ ವೇಳೆ ಐಪಿಎಲ್‌ನಿಂದ ಮುಸ್ತಫಿಝುರ್ ಅವರನ್ನು ಕೈಬಿಟ್ಟಿರುವ ವಿಷಯವನ್ನು ಬಾಂಗ್ಲಾದೇಶವು ಮತ್ತೆ ಎತ್ತಲಿದೆ ಎನ್ನಲಾಗಿದೆ.
ಆದರೆ ಪಂದ್ಯಗಳನ್ನು ಸ್ಥಳಾಂತರಿಸಲು ಐಸಿಸಿ ಒಪ್ಪುವ ಸಾಧ್ಯತೆಯಿಲ್ಲ. ಕೊನೆಗಳಿಗೆಯಲ್ಲಿ ಒಪ್ಪಿದರೆ ಅದು ಕೆಟ್ಟ ನಿದರ್ಶನಕ್ಕೆ ದಾರಿಮಾಡಿಕೊಡಲಿದೆ ಎನ್ನುವುದು ಐಸಿಸಿ ನಿಲುವಿಗೆ ಕಾರಣ.
ಎಸಿಯು ಮುಖ್ಯಸ್ಥ ಭೇಟಿ:
ಐಸಿಸಿಯ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥ ಆ್ಯಂಡ್ರೂ ಎಫ್‌ಗ್ರೇವ್ ಅವರೂ ಢಾಕ್ಕಾಕ್ಕೆ ಭೇಟಿ ನೀಡಲಿದ್ದಾರೆ. ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪದ ಮೇಲೆ ಒಂಬತ್ತು ಮಂದಿಯನ್ನು ಬಿಸಿಬಿ ಅಮಾನತು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಅವರು ವಿವರ ಸಂಗ್ರಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.