ADVERTISEMENT

ICC Ranking | ಕಿವೀಸ್ ಸರಣಿಯಲ್ಲಿ ವಿಕೆಟ್ ಇಲ್ಲ: ಅಗ್ರಸ್ಥಾನ ಕಳೆದುಕೊಂಡ ಬೂಮ್ರಾ

ಯಾರಿಗೆ ಯಾವ ಸ್ಥಾನ?

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 12:21 IST
Last Updated 12 ಫೆಬ್ರುವರಿ 2020, 12:21 IST
   

ನವದೆಹಲಿ:ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ವಿಕೆಟ್‌ ಪಡೆಯಲು ವಿಫಲವಾಗಿದ್ದ ಭಾರತದ ಪ್ರಮುಖ ವೇಗಿ ಜಸ್‌ಪ್ರೀತ್‌ ಬೂಮ್ರಾ, ಐಸಿಸಿ ಬುಧವಾರ ಪ್ರಕಟಿಸಿರುವ ಬೌಲರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಕಿವೀಸ್‌ ಸರಣಿಯ ಮೂರು ಪಂದ್ಯಗಳಲ್ಲಿ 30 ಓವರ್‌ ಎಸೆದು 167 ರನ್‌ ಬಿಟ್ಟುಕೊಟ್ಟಿದ್ದಬೂ‌ಮ್ರಾ, ಒಂದೇಒಂದು ವಿಕೆಟ್‌ ಪಡೆದಿರಲಿಲ್ಲ. ಹೀಗಾಗಿ ಅವರು ಒಟ್ಟು 45 ರೇಟಿಂಗ್ ಪಾಯಿಂಟ್‌ಗಳನ್ನು ಕಳೆದುಕೊಂಡು ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಸದ್ಯ ಅವರ ಬಳಿ719 ಪಾಯಿಂಟ್ಸ್‌ ಇವೆ.

ನ್ಯೂಜಿಲೆಂಡ್‌ನ ವೇಗಿ ಟ್ರೆಂಟ್‌ ಬೌಲ್ಟ್‌ (727) ಮೊದಲ ಸ್ಥಾನಕ್ಕೇರಿದ್ದಾರೆ. ಅಫ್ಗಾನಿಸ್ತಾನದ ಮುಜೀಬ್‌ ಉರ್‌ ರೆಹಮಾನ್‌ (701), ದಕ್ಷಿಣ ಆಫ್ರಿಕಾದ ಕಗಿಸೊ ರಬಡ (674) ಹಾಗೂ ಆಸ್ಟ್ರೇಲಿಯಾದ ಪ್ಯಾಟ್‌ ಕಮಿನ್ಸ್‌ (673) ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿದ್ದಾರೆ.

ADVERTISEMENT

ಪಾಯಿಂಟ್ಸ್‌ ಕಳೆದುಕೊಂಡರೂ ಅಗ್ರಸ್ಥಾನದಲ್ಲಿಯೇ ಉಳಿದ ಕೊಹ್ಲಿ
ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ, ನ್ಯೂಜಿಲೆಂಡ್‌ ವಿರುದ್ಧದ ಸರಣಿಯ ಮೂರು ಪಂದ್ಯಗಳಿಂದ ಗಳಿಸಿದ್ದು 73 ರನ್ ಮಾತ್ರ. ಮೊದಲ ಪಂದ್ಯದಲ್ಲಿ ಅರ್ಧಶತಕ (51) ಗಳಿಸಿದ್ದು ಬಿಟ್ಟರೆ, ಉಳಿದೆರಡು ಪಂದ್ಯಗಳಲ್ಲಿ ಕ್ರಮವಾಗಿ 15 ಮತ್ತು 9 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು.

ಈ ಸರಣಿಗೂ ಮೊದಲು ಕೊಹ್ಲಿ ಖಾತೆಯಯಲ್ಲಿ 886 ಪಾಯಿಂಟ್‌ಗಳಿದ್ದವು. ಕಿವೀಸ್ ಸರಣಿಯಲ್ಲಿನ ವೈಫಲ್ಯದಿಂದಾಗಿ ಅವರ ಖಾತೆಯಿಂದ17 ಅಂಕಗಳು ಮೈನಸ್‌ ಆಗಿವೆ. ಆದಾಗ್ಯೂ ಕೊಹ್ಲಿ ಅಗ್ರ ಸ್ಥಾನದಲ್ಲಿಯೇ ಉಳಿದುಕೊಂಡಿದ್ದಾರೆ. ಗಾಯಾಳಾಗಿದ್ದ ಕಾರಣ ಈ ಸರಣಿಯನ್ನು ತಪ್ಪಿಸಿಕೊಂಡಿದ್ದ ರೋಹಿತ್‌ ಶರ್ಮಾ (855) ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

829 ಪಾಯಿಂಟ್ಸ್‌ ಹೊಂದಿರುವ ಪಾಕಿಸ್ತಾನ ಬ್ಯಾಟ್ಸ್‌ಮನ್‌ ಬಾಬರ್ ಅಜಂ ಮತ್ತು 828 ಅಂಕ ಹೊಂದಿರುವ ನ್ಯೂಜಿಲೆಂಡ್‌ನ ರಾಸ್‌ ಟೇಲರ್‌ ಕ್ರಮವಾಗಿ 3 ಮತ್ತು 4ನೇ ಸ್ಥಾನಗಳಲ್ಲಿ ಇದ್ದಾರೆ.

ಮೇಲೇರಿದ ಜಡೇಜಾ, ಚಾಹಲ್‌
ಕಿವೀಸ್ ಸರಣಿಯಲ್ಲಿ 2 ವಿಕೆಟ್‌ ಹಾಗೂ 63 ರನ್‌ ಗಳಿಸಿದ್ದರವೀಂದ್ರ ಜಡೇಜಾ, ಆಲ್ರೌಂಡರ್‌ಗಳ ವಿಭಾಗದಲ್ಲಿ ಮೂರು ಸ್ಥಾನ ಮೇಲೇರಿದ್ದಾರೆ. ಸದ್ಯ ಅವರ ಬಳಿ246 ಪಾಯಿಂಟ್ಸ್ ಇದ್ದು, 7ನೇ ಸ್ಥಾನದಲ್ಲಿದ್ದಾರೆ. ಅಫ್ಗಾನಿಸ್ತಾನದ ಮೊಹಮದ್‌ ನಬಿ (301), ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌ (294) ಮತ್ತು ಪಾಕಿಸ್ತಾನದ ಇಮದ್ ವಾಸಿಂ (278) ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.

ಎರಡು ಪಂದ್ಯಗಳಿಂದ ಆರು ವಿಕೆಟ್‌ ಪಡೆದಿರುವ ಮಣಿಕಟ್ಟಿನ ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಮೂರು ಸ್ಥಾನ ಮೇಲೇರಿ 13ರಲ್ಲಿ ಕಾಣಿಸಿಕೊಂಡಿದ್ದಾರೆ.

36ರಲ್ಲಿ ರಾಹುಲ್, 62ರಲ್ಲಿ ಅಯ್ಯರ್‌
ವಿಕೆಟ್‌ ಕೀಪಿಂಗ್‌ ಹಾಗೂ ಐದನೇ ಕ್ರಮಾಂಕದ ಬ್ಯಾಟಿಂಗ್‌ ಶಕ್ತಿಯಾಗಿರುವ ಕೆ.ಎಲ್‌.ರಾಹುಲ್‌596 ಅಂಕಗಳೊಂದಿಗೆ 36ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕಿವೀಸ್‌ ಸರಣಿಯಲ್ಲಿ ಒಂದು ಶತಕ ಸಹಿತಒಟ್ಟು 204 ರನ್‌ ಕಲೆಹಾಕಿದ್ದರು. ಜೊತೆಗೆ ಬಹುದಿನಗಳಿಂದ ತಲೆನೋವಾಗಿದ್ದ ನಾಲ್ಕನೇ ಕ್ರಮಾಂಕದ ಪ್ರಶ್ನೆಗೆ ಉತ್ತರವಾಗಿರುವ ಶ್ರೇಯಸ್‌ ಅಯ್ಯರ್‌ 513 ಅಂಕಗಳೊಂದಿಗೆ 62ನೇ ಸ್ಥಾನದಲ್ಲಿ ಇದ್ದಾರೆ.

ಅಯ್ಯರ್‌ ಕಿವೀಸ್‌ ಸರಣಿಯಲ್ಲಿ ಕ್ರಮವಾಗಿ 103, 52 ಮತ್ತು 62 ರನ್‌ (217) ರನ್‌ ಗಳಿಸಿ ಗಮನ ಸೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.