ದುಬೈ: ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿ ವೇಳೆ ಅಫ್ಗಾನಿಸ್ತಾನದ ಮೂವರು ಯುವ ಕ್ರಿಕೆಟಿಗರು ಮೃತಪಟ್ಟಿರುವುದಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅಧ್ಯಕ್ಷ ಜಯ್ ಶಾ ಸಂತಾಪ ಸೂಚಿಸಿದ್ದಾರೆ.
ಪಾಕಿಸ್ತಾನ ಸೇನೆ ಅಫ್ಗಾನಿಸ್ತಾನದ ಪಕ್ತಿಕಾ ಪ್ರಾಂತ್ಯದ ಅರ್ಗುನ್ ಮತ್ತು ಬರ್ಮಲ್ ಜಿಲ್ಲೆಗಳ ಮೇಲೆ ಶನಿವಾರ ದಾಳಿ ನಡೆಸಿತ್ತು. ಈ ವೇಳೆ ಮೂವರು ಕ್ರಿಕೆಟಿಗರು ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್/ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಜಯ್ ಶಾ, 'ಅನರ್ಥದ ಕೃತ್ಯದಿಂದ ತಮ್ಮ ಕನಸುಗಳನ್ನು ಅಂತ್ಯಗೊಳಿಸಿರುವ ಯುವ ಕ್ರಿಕೆಟಿಗರಾದ ಕಬೀರ್ ಆಘಾ, ಸಿಬ್ಘತ್‌ವುಲ್ಲಾ ಹಾಗೂ ಹರೂನ್ ಅವರನ್ನು ಕಳೆದುಕೊಂಡಿರುದು ತೀವ್ರ ದುಃಖ ತಂದಿದೆ' ಎಂದಿದ್ದಾರೆ.
'ಭರವಸೆಯ ಕ್ರಿಕೆಟಿಗರನ್ನು ಕಳೆದುಕೊಂಡಿರುವುದು ಅಫ್ಗಾನಿಸ್ತಾನಕ್ಕೆ ಮಾತ್ರವಲ್ಲ. ಇಡೀ ಕ್ರಿಕೆಟ್‌ಗೆ ಎದುರಾದ ದುರಂತವಾಗಿದೆ. ಅಫ್ಗಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಹಾಗೂ ಸಂತ್ರಸ್ತರೊಂದಿಗೆ ನಿಲ್ಲುತ್ತೇವೆ' ಎಂದು ಭರವಸೆ ನೀಡಿದ್ದಾರೆ.
ತ್ರಿಕೋನ ಸರಣಿಗೆ ಮತ್ತೊಂದು ತಂಡ
ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಎಸಿಬಿ, ಪಾಕಿಸ್ತಾನ ಆತಿಥ್ಯದಲ್ಲಿ ನಡೆಯಬೇಕಿದ್ದ ತ್ರಿಕೋನ ಟಿ20 ಸರಣಿಯನ್ನು ಬಹಿಷ್ಕರಿಸಿದೆ.
ರಾವಲ್ಪಿಂಡಿ ಹಾಗೂ ಲಾಹೋರ್‌ನಲ್ಲಿ ನವೆಂಬರ್ 17ರಿಂದ 29ರವರೆಗೆ ನಿಗದಿಯಾಗಿರುವ ಈ ಟೂರ್ನಿಯಲ್ಲಿ ಶ್ರೀಲಂಕಾ ತಂಡವೂ ಪಾಲ್ಗೊಳ್ಳಬೇಕಿದೆ. ಆದರೆ, ಅಫ್ಗಾನಿಸ್ತಾನ ತಂಡ ಈಗಾಗಲೇ ನಿರ್ಗಮಿಸಿರುವುದರಿಂದ ಸರಣಿ ನಡೆಯುವುದು ಅನುಮಾನವಾಗಿದೆ. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು, ಸರಣಿಯು ನಿಗದಿಯಂತೆ ನಡೆಯಲಿದೆ ಎಂದು ವಿಶ್ವಾಶ ವ್ಯಕ್ತಪಡಿಸಿದೆ. ಅಫ್ಗಾನಿಸ್ತಾನ ಬದಲು ಮತ್ತೊಂದು ತಂಡಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದೆ.
'ಸರಣಿಯು ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ. ಅಫ್ಗಾನಿಸ್ತಾನಕ್ಕೆ ಬದಲಿ ತಂಡವನ್ನು ಹುಡುಕುತ್ತಿದ್ದೇವೆ. ಶೀಘ್ರವೇ ಅಂತಿಮ ಘೋಷಣೆ ಮಾಡುತ್ತೇವೆ' ಎಂಬುದಾಗಿ ಪಿಸಿಬಿ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.