ADVERTISEMENT

T20 WC | ಅಭ್ಯಾಸ ಪಂದ್ಯ: ಸೋಲಿನಲ್ಲೂ ಮಿಂಚಿದ ಕನ್ನಡಿಗ ರಾಹುಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಅಕ್ಟೋಬರ್ 2022, 10:27 IST
Last Updated 13 ಅಕ್ಟೋಬರ್ 2022, 10:27 IST
ಕೆ.ಎಲ್. ರಾಹುಲ್ (ಚಿತ್ರಿ ಕೃಪೆ: ಬಿಸಿಸಿಐ, ಟ್ವಿಟರ್)
ಕೆ.ಎಲ್. ರಾಹುಲ್ (ಚಿತ್ರಿ ಕೃಪೆ: ಬಿಸಿಸಿಐ, ಟ್ವಿಟರ್)   

ಪರ್ತ್: ವೆಸ್ಟರ್ನ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧ ನಡೆದ ಎರಡನೇ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವು 36 ರನ್ ಅಂತರದ ಸೋಲಿಗೆ ಶರಣಾಗಿದೆ.

ಹಾಗಿದ್ದರೂ ಏಕಾಂಗಿ ಹೋರಾಟ ನಡೆಸಿದ ಕನ್ನಡಿಗ ಕೆ.ಎಲ್. ರಾಹುಲ್ ಆಕರ್ಷಕ ಅರ್ಧಶತಕ ಗಳಿಸಿ ಗಮನ ಸೆಳೆದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟರ್ನ್ ಆಸ್ಟ್ರೇಲಿಯಾ, ನಿಕ್ ಹಾಬ್ಸನ್ (64) ಹಾಗೂ ಡಾರ್ಸಿ ಶಾರ್ಟ್ (52) ಆಕರ್ಷಕ ಅರ್ಧಶತಕಗಳ ನೆರವಿನಿಂದ ಎಂಟು ವಿಕೆಟ್ ನಷ್ಟಕ್ಕೆ 168 ರನ್ ಪೇರಿಸಿತ್ತು.

ಭಾರತದ ಪರ ರವಿಚಂದ್ರನ್ ಅಶ್ವಿನ್ ಮೂರು ಮತ್ತು ಹರ್ಷಲ್ ಪಟೇಲ್ ಎರಡು ವಿಕೆಟ್ ಕಿತ್ತು ಮಿಂಚಿದರು.

ಬಳಿಕ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಎಂಟು ವಿಕೆಟ್ ನಷ್ಟಕ್ಕೆ 132 ರನ್ ಗಳಿಸಲಷ್ಟೇ ಸಾಧ್ಯವಾಯಿತು. ರಾಹುಲ್ ಹೊರತುಪಡಿಸಿ ಇತರೆಲ್ಲ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು.

55 ಎಸೆತಗಳನ್ನು ಎದುರಿಸಿದ ರಾಹುಲ್ ಒಂಬತ್ತು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 74 ರನ್ ಗಳಿಸಿದರು.

ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಿರಲಿಲ್ಲ. ಇನ್ನುಳಿದಂತೆ ರಿಷಭ್ ಪಂತ್ (9), ದೀಪಕ್ ಹೂಡಾ (6), ಹಾರ್ದಿಕ್ ಪಾಂಡ್ಯ (17), ದಿನೇಶ್ ಕಾರ್ತಿಕ್ (10), ಅಕ್ಷರ್ ಪಟೇಲ್ (2) ನಿರಾಸೆ ಮೂಡಿಸಿದರು.

ಆಸೀಸ್ ಪರ ಮ್ಯಾಥ್ಯೂ ಕೆಲ್ಲಿ, ಲಾನ್ಸ್ ಮೊರಿಸ್ ಹಾಗೂ ಹ್ಯಾಮಿಶ್ ಮೆಕೆಂಝಿ ತಲಾ ಎರಡು ವಿಕೆಟ್ ಕಬಳಿಸಿದರು.

ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ 13 ರನ್ ಅಂತರದ ಗೆಲುವು ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.