ADVERTISEMENT

19 ವರ್ಷದೊಳಗಿನವರ ವಿಶ್ವಕಪ್‌: ಶುಭಾರಂಭದ ನಿರೀಕ್ಷೆಯಲ್ಲಿ ಪ್ರಿಯಂ ಪಡೆ

ಇಂದು ಶ್ರೀಲಂಕಾ ಎದುರು ಪೈಪೋಟಿ

ಪಿಟಿಐ
Published 18 ಜನವರಿ 2020, 19:45 IST
Last Updated 18 ಜನವರಿ 2020, 19:45 IST
ಭಾರತ ತಂಡದವರು ಶ್ರೀಲಂಕಾ ಎದುರು ಗೆಲ್ಲುವ ವಿಶ್ವಾಸದಲ್ಲಿದ್ದಾರೆ
ಭಾರತ ತಂಡದವರು ಶ್ರೀಲಂಕಾ ಎದುರು ಗೆಲ್ಲುವ ವಿಶ್ವಾಸದಲ್ಲಿದ್ದಾರೆ   

ಬ್ಲೂಮ್‌ಫೊಂಟೇನ್‌: ಹಾಲಿ ಚಾಂಪಿಯನ್‌ ಭಾರತ ತಂಡ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ 13ನೇ ಆವೃತ್ತಿಯಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ.

ಭಾನುವಾರ ನಡೆಯುವ ‘ಎ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಪ್ರಿಯಂ ಗರ್ಗ್‌ ಬಳಗ ಶ್ರೀಲಂಕಾ ಸವಾಲು ಎದುರಿಸಲಿದೆ.

ವಿಶ್ವಕಪ್‌ನಲ್ಲಿ ಅತಿ ಹೆಚ್ಚು (4) ಪ್ರಶಸ್ತಿ ಗೆದ್ದ ಹಿರಿಮೆ ಹೊಂದಿರುವ ಭಾರತ ಈ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವೆನಿಸಿದೆ.

ADVERTISEMENT

ನಾಯಕ ಪ್ರಿಯಂ, ಆರಂಭ ಆಟಗಾರ ಯಶಸ್ವಿ ಜೈಸ್ವಾಲ್‌, ವೇಗದ ಬೌಲರ್‌ ಕಾರ್ತಿಕ್‌ ತ್ಯಾಗಿ ಮತ್ತು ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯಿ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಬಾರಿಯ ಐಪಿಎಲ್‌ ಹರಾಜಿನಲ್ಲಿ ಇವರನ್ನು ಕೊಂಡುಕೊಳ್ಳಲು ಫ್ರಾಂಚೈಸ್‌ಗಳು ಪೈಪೋಟಿ ನಡೆಸಿದ್ದವು.

ಲೀಸ್ಟ್‌ ‘ಎ’ ಕ್ರಿಕೆಟ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿರುವ ಎಡಗೈ ಬ್ಯಾಟ್ಸ್‌ಮನ್‌ ಯಶಸ್ವಿ, ಲಂಕಾ ಬೌಲರ್‌ಗಳ ಮೇಲೆ ಸವಾರಿ ನಡೆಸುವ ಸಾಧ್ಯತೆ ಇದೆ. ಯಶಸ್ವಿ ಜೊತೆ ಇನಿಂಗ್ಸ್‌ ಆರಂಭಿಸಲಿರುವ ದಿವ್ಯಾಂಶ್‌ ಸಕ್ಸೇನಾ ಕೂಡ ಮಿಂಚುವ ವಿಶ್ವಾಸದಲ್ಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ತಿಲಕ್‌ ವರ್ಮಾ ಕೂಡ ಬ್ಯಾಟಿಂಗ್‌ನಲ್ಲಿ ಭಾರತದ ಬೆನ್ನೆಲುಬಾಗಿದ್ದಾರೆ.

ವಿಕೆಟ್‌ ಕೀಪರ್‌ ಧ್ರುವ ಜುರೆಲ್‌, ಸಿದ್ದೇಶ್‌ ವೀರ್‌, ಅಥರ್ವ ಅಂಕೋಲೆಕರ್‌ ಮತ್ತು ಕನ್ನಡಿಗರಾದ ಶುಭಾಂಗ್‌ ಹೆಗ್ಡೆ ಹಾಗೂ ವಿದ್ಯಾಧರ ಪಾಟೀಲ ಅವರ ಮೇಲೂ ಭರವಸೆ ಇಡಬಹುದಾಗಿದೆ.

ಶ್ರೀಲಂಕಾ ತಂಡದಲ್ಲೂ ಪ್ರತಿಭಾನ್ವಿತ ಆಟಗಾರರಿದ್ದಾರೆ. ನಾಯಕ ನಿಪುನ್‌ ಧನಂಜಯ, ಸೋನಲ್‌ ದಿನುಶಾ ಮತ್ತು ವೇಗದ ಬೌಲರ್‌ ಅಂಶಿ ಡಿ ಸಿಲ್ವ ಅವರು ದೇಶಿ ಟೂರ್ನಿಗಳಲ್ಲಿ ಮಿಂಚಿದ್ದಾರೆ.

ಪಂದ್ಯದ ಆರಂಭ: ಮಧ್ಯಾಹ್ನ 1.30.

ಯುಎಇಗೆ ಗೆಲುವು: ಬ್ಲೂಮ್‌ಫೊಂಟೇನ್‌ನಲ್ಲಿ ಶನಿವಾರ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ಯುಎಇ 8 ವಿಕೆಟ್‌ಗಳಿಂದ ಕೆನಡಾ ತಂಡವನ್ನು ಸೋಲಿಸಿದೆ.

ಮೊದಲು ಬ್ಯಾಟ್‌ ಮಾಡಿದ್ದ ಕೆನಡಾ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 231ರನ್‌ ಗಳಿಸಿತ್ತು. ಯುಎಇ 38.4 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.

ಕಿಂಬರ್ಲಿಯಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ 3 ವಿಕೆಟ್‌ಗಳಿಂದ ಆಸ್ಟ್ರೇಲಿಯಾಕ್ಕೆ ಆಘಾತ ನೀಡಿತು. ಆಸ್ಟ್ರೇಲಿಯಾ ತಂಡ ನೀಡಿದ್ದ 180ರನ್‌ಗಳ ಸುಲಭ ಗುರಿಯನ್ನು ವಿಂಡೀಸ್‌ 46 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.