ADVERTISEMENT

ಮಹಿಳಾ ಕ್ರಿಕೆಟ್ ವಿಶ್ವಕಪ್: ಐಸಿಸಿ, ಯುನಿಸೆಫ್‌ನಿಂದ 'ಮಕ್ಕಳಿಗೆ ಭರವಸೆ' ಅಭಿಯಾನ

ಪಿಟಿಐ
Published 29 ಸೆಪ್ಟೆಂಬರ್ 2025, 11:04 IST
Last Updated 29 ಸೆಪ್ಟೆಂಬರ್ 2025, 11:04 IST
   

ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಯುನಿಸೆಫ್, ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2025ರ ಸಮಯದಲ್ಲಿ ‘ಪ್ರಾಮಿಸ್ ಟು ಚಿಲ್ಡ್ರನ್’ ಡಿಜಿಟಲ್ ಅಭಿಯಾನವನ್ನು ಆರಂಭಿಸುವುದಾಗಿ ಘೋಷಿಸಿದ್ದು, ಕ್ರಿಕೆಟ್ ಅಭಿಮಾನಿಗಳು, ಆಟಗಾರ್ತಿಯರು ಮತ್ತು ಪ್ರೇಕ್ಷಕರು ಎಲ್ಲ ಮಕ್ಕಳಿಗೆ, ವಿಶೇಷವಾಗಿ ಅತ್ಯಂತ ದುರ್ಬಲರಿಗೆ ಸಮಾನ ಅವಕಾಶಗಳಿಗೆ ಬದ್ಧರಾಗಬೇಕೆಂದು ಒತ್ತಾಯಿಸಿವೆ.

ಯುನಿಸೆಫ್ ರಾಷ್ಟ್ರೀಯ ರಾಯಭಾರಿ, ಬಾಲಿವುಡ್ ನಟ ಆಯುಷ್ಮಾನ್ ಖುರಾನಾ, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರ ಬೆಂಬಲದೊಂದಿಗೆ ಈ ಅಭಿಯಾನವು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಆರೋಗ್ಯ ರಕ್ಷಣೆ, ಪೋಷಣೆ, ಸುರಕ್ಷಿತ ಕುಡಿಯುವ ನೀರು, ನೈರ್ಮಲ್ಯ ಮತ್ತು ಹಿಂಸಾಚಾರದಿಂದ ರಕ್ಷಣೆ ಸೇರಿದಂತೆ ಮಕ್ಕಳ ಹಕ್ಕುಗಳನ್ನು ಸಾಧಿಸಲು ಕ್ರಿಕೆಟ್‌ನ ಏಕೀಕೃತ ಶಕ್ತಿಯನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಯುನಿಸೆಫ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಿಶ್ವದಾದ್ಯಂತ ಬಾಲಕರು ಮತ್ತು ಬಾಲಕಿಯರಿಗೆ ಸಮಾನ ಅವಕಾಶಗಳನ್ನು ಒದಗಿಸಲು ಐಸಿಸಿ ಬದ್ಧವಾಗಿದೆ ಎಂದು ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಜಯ್ ಶಾ ಹೇಳಿದ್ದಾರೆ.

ADVERTISEMENT

‘ಪ್ರಾಮಿಸ್ ಟು ಚಿಲ್ಡ್ರನ್’ ಅಭಿಯಾನದ ಮೂಲಕ, ಐಸಿಸಿ ಮತ್ತು ಯುನಿಸೆಫ್ ಮಕ್ಕಳ ಜೀವನವನ್ನು ಸುಧಾರಿಸಲು, ಅವರಿಗೆ ಆರೋಗ್ಯ, ಪೋಷಣೆ, ವಿದ್ಯಾಭ್ಯಾಸ ಮುಂತಾದ ಸೌಲಭ್ಯಗಳನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ತರಬೇತುದಾರರು ಮತ್ತು ಆಟಗಾರರಿಂದ ಅಭಿಮಾನಿಗಳವರೆಗೆ ಕ್ರಿಕೆಟ್ ಸಮುದಾಯವನ್ನು ತೊಡಗಿಸಿಕೊಳ್ಳುತ್ತವೆ’ಎಂದು ಅವರು ಹೇಳಿದ್ದಾರೆ.

ಕೋಟ್ಯಂತರ ಅಭಿಮಾನಿಗಳು ಆನಂದಿಸುವ ಕ್ರಿಕೆಟ್‌ನ ಶಕ್ತಿಗೆ ಯಾವುದೂ ಹೊಂದಿಕೆಯಾಗುವುದಿಲ್ಲ. ಯುನಿಸೆಫ್-ಐಸಿಸಿ ಪಾಲುದಾರಿಕೆಯು ಪ್ರತಿಯೊಬ್ಬ ಬಾಲಕ ಮತ್ತು ಬಾಲಕಿಗೆ ಸಮಾನ ಅವಕಾಶಗಳನ್ನು ಸೃಷ್ಟಿಸುವ ಜಂಟಿ ಬದ್ಧತೆಯ ಮೇಲೆ ನಿರ್ಮಿಸಲ್ಪಟ್ಟಿದೆ ಎಂದು ಯುನಿಸೆಫ್‌ನ ಭಾರತೀಯ ಪ್ರತಿನಿಧಿ ಸೈಂಥಿಯಾ ಮ್ಯಾಕ್‌ಕೆಫೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.