ADVERTISEMENT

ನಮ್ಮ ಆಟಗಾರರು ಯಾವುದನ್ನೂ ಮುಚ್ಚಿಡೊಲ್ಲ

ಭಾರತದ ಕ್ರಿಕೆಟಿಗರ ಪರ ‘ಬ್ಯಾಟ್‌’ ಮಾಡಿದ ಎಸಿಯು ಮುಖ್ಯಸ್ಥ ಅಜಿತ್‌ ಸಿಂಗ್‌

ಏಜೆನ್ಸೀಸ್
Published 19 ಏಪ್ರಿಲ್ 2020, 20:16 IST
Last Updated 19 ಏಪ್ರಿಲ್ 2020, 20:16 IST
ಅಜಿತ್ ಸಿಂಗ್
ಅಜಿತ್ ಸಿಂಗ್   

ನವದೆಹಲಿ: ‘ಒಂದೊಮ್ಮೆ ಬುಕ್ಕಿಗಳು ತಮ್ಮನ್ನು ಸಂಪರ್ಕಿಸಿದರೆ ಆ ವಿಷಯವನ್ನು ಆಟಗಾರರು ಕೂಡಲೇ ನಮ್ಮ ಗಮನಕ್ಕೆ ತರುತ್ತಾರೆ. ನಮ್ಮಿಂದ ಅವರು ಯಾವುದೇ ವಿಚಾರವನ್ನೂ ಮುಚ್ಚಿಡುವುದಿಲ್ಲ’ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಭ್ರಷ್ಟಾಚಾರ ತಡೆ ಘಟಕದ (ಎಸಿಯು) ಮುಖ್ಯಸ್ಥ ಅಜಿತ್‌ ಸಿಂಗ್‌ ಭಾನುವಾರ ಹೇಳಿದ್ದಾರೆ.

‘ಆನ್‌ಲೈನ್‌ ಫಿಕ್ಸಿಂಗ್‌ ಹಾಗೂ ಬುಕ್ಕಿಂಗ್‌ ಜಾಲದಬಗ್ಗೆ ನಮ್ಮ ಆಟಗಾರರಿಗೆ ಈಗಾಗಲೇ ಅರಿವು ಮೂಡಿಸಲಾಗಿದೆ.ಸಾಮಾಜಿಕ ಜಾಲತಾಣಗಳ ಮೂಲಕ ಬುಕ್ಕಿಗಳು, ಆಟಗಾರರನ್ನು ಹೇಗೆ ಸಂಪರ್ಕಿಸುತ್ತಾರೆ ಎಂಬುದರ ಕುರಿತೂ ಮಾಹಿತಿ ನೀಡಿದ್ದೇವೆ’ ಎಂದು ಅವರು ನುಡಿದಿದ್ದಾರೆ.

‘ಬುಕ್ಕಿಗಳು ಮೊದಲು ಅಭಿಮಾನಿಗಳ ಹಾಗೆ ವರ್ತಿಸುತ್ತಾರೆ.ಬಳಿಕ ಆಟಗಾರರಿಗೆ ಆಪ್ತನಾಗಿರುವ ವ್ಯಕ್ತಿಯ ಸ್ನೇಹ ಸಂಪಾದಿಸುತ್ತಾರೆ. ಆತನ ಸಹಾಯದಿಂದ ಆಟಗಾರರನ್ನು ಸಂಪರ್ಕಿಸುತ್ತಾರೆ. ಈ ಪ್ರಕ್ರಿಯೆಯ ಬಗ್ಗೆ ಎಲ್ಲರಿಗೂ ತಿಳಿಸಿದ್ದೇವೆ. ಬುಕ್ಕಿಗಳು ಸಂಪರ್ಕಿಸಿದ್ದರ ಕುರಿತು ಈಗಾಗಲೇ ಹಲವು ಕ್ರಿಕೆಟಿಗರು ನಮಗೆ ದೂರು ಕೊಟ್ಟಿದ್ದಾರೆ’ ಎಂದು ಅವರು ನುಡಿದಿದ್ದಾರೆ.

ADVERTISEMENT

‘ಲಾಕ್‌ಡೌನ್‌ ಸಮಯದಲ್ಲಿ ಹಲವು ಕ್ರಿಕೆಟಿಗರು ಟ್ವಿಟರ್‌, ಇನ್‌ಸ್ಟಾಗ್ರಾಮ್‌ ಹಾಗೂ ಫೇಸ್‌ಬುಕ್‌ ಲೈವ್‌ ಮೂಲಕ ಅಭಿಮಾನಿಗಳ ಜೊತೆಗಿನ ಬಾಂಧವ್ಯ ಗಟ್ಟಿಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಅವಕಾಶಕ್ಕಾಗಿಯೇ ಬುಕ್ಕಿಗಳು ಕಾದು ಕುಳಿತಿರುತ್ತಾರೆ. ನಕಲಿ ಖಾತೆಗಳ ಮೂಲಕ ಆಟಗಾರರ ಹೆಸರಿಗೆ ಮಸಿ ಬಳಿಯಲೂ ಯತ್ನಿಸುತ್ತಾರೆ. ಅಂತಹವರ ಮೇಲೆ ಹದ್ದಿನ ಕಣ್ಣಿಟ್ಟಿದ್ದೇವೆ. ಲಾಕ್‌ಡೌನ್‌ನಿಂದಾಗಿ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ಇಡಲು ಹಾಗೂ ವಿಚಾರಣೆ ನಡೆಸಲು ಕಷ್ಟವಾಗುತ್ತಿದೆ’ ಎಂದಿದ್ದಾರೆ.

‘ನಾವು ಕ್ರಿಕೆಟಿಗರ ವಿರೋಧಿಗಳಲ್ಲ.ಎಸಿಯು ಹಾಗೂ ಆಟಗಾರರ ನಡುವೆ ಉತ್ತಮ ಹೊಂದಾಣಿಕೆ ಇದೆ. ಫಿಕ್ಸಿಂಗ್‌ ಪಿಡುಗನ್ನು ತೊಡೆದುಹಾಕಲು ನಾವೆಲ್ಲಾ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ಸಭ್ಯರ ಆಟಕ್ಕೆ ಮಸಿ ಬಳಿಯಲು ಪ್ರಯತ್ನಿಸುವ ವ್ಯಕ್ತಿಗಳನ್ನು ಮಟ್ಟಹಾಕುವುದು ನಮ್ಮೆಲ್ಲರ ಗುರಿ’ ಎಂದು ಅವರು ತಿಳಿಸಿದ್ದಾರೆ.

‘ಅನುಮಾನಾಸ್ಪದ ವ್ಯಕ್ತಿಗಳು ತಮ್ಮನ್ನು ಸಂಪರ್ಕಿಸಿದ್ದರ ಕುರಿತು ಈಗಾಗಲೇ ಅನೇಕ ಹಿರಿಯ ಕ್ರಿಕೆಟಿಗರೂ ನಮಗೆ ದೂರು ಕೊಟ್ಟಿದ್ದಾರೆ. ಸುಳ್ಳೊ, ನಿಜವೊ, ಎಲ್ಲಾ ಮಾಹಿತಿಯನ್ನೂ ನಮ್ಮ ಗಮನಕ್ಕೆ ತಂದರೆ ತನಿಖೆ ನಡೆಸಲು ಅನುಕೂಲವಾಗುತ್ತದೆ’ ಎಂದಿದ್ದಾರೆ.

‘ಕೆಲ ವಲಯಗಳಲ್ಲಿ ಎಸಿಯು ಮುಖ್ಯಸ್ಥರಿಲ್ಲ. ಖಾಲಿ ಇರುವ ಈ ಹುದ್ದೆಗಳಿಗೆ ಶೀಘ್ರವೇ ಅರ್ಹರನ್ನು ನೇಮಿಸುತ್ತೇವೆ’ ಎಂದೂ ಅವರು ಹೇಳಿದ್ದಾರೆ.

ಅಲೆಕ್ಸ್‌ ಮಾರ್ಷಲ್‌

‘ಫಿಕ್ಸರ್‌ಗಳ ಬಗ್ಗೆ ಎಚ್ಚರದಿಂದಿರಿ’

ಲಂಡನ್‌: ‘ಪಂದ್ಯಗಳನ್ನು ಫಿಕ್ಸ್‌ ಮಾಡುವ ವ್ಯಕ್ತಿಗಳು ಲಾಕ್‌ಡೌನ್‌ ಸಮಯದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಕಾರ್ಯ ಪ್ರವೃತ್ತರಾಗಿರುತ್ತಾರೆ.ನಿಮ್ಮ ಜೊತೆ ಸಂಪರ್ಕ ಸಾಧಿಸಲು ನಿರಂತರವಾಗಿ ಪ್ರಯತ್ನಿಸುತ್ತಿರುತ್ತಾರೆ. ಅಂತಹವರ ಬಗ್ಗೆ ತುಂಬಾ ಎಚ್ಚರದಿಂದಿರಿ’ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ಭ್ರಷ್ಟಾಚಾರ ತಡೆ ಘಟಕದ ಮುಖ್ಯಸ್ಥ ಅಲೆಕ್ಸ್‌ ಮಾರ್ಷಲ್ ಅವರು ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.

‘ಕೊರೊನಾ ಬಿಕ್ಕಟ್ಟಿನಿಂದಾಗಿ ಕ್ರಿಕೆಟ್‌ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಇದರಿಂದ ಕಡಿಮೆ ವೇತನ ಪಡೆಯುವ ಕ್ರಿಕೆಟಿಗರ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಲಿದೆ.ಫಿಕ್ಸಿಂಗ್‌ ಮಾಡುವವರು ಇಂತಹವರನ್ನೇ ಗುರಿಯಾಗಿಸಿಕೊಂಡು ತಮ್ಮ ಕಾರ್ಯ ಸಾಧಿಸುವ ಸಾಧ್ಯತೆ ಇದೆ’ ಎಂದಿದ್ದಾರೆ.

‘ಆಟಗಾರರು ಹಾಗೂ ಇತರ ಎಲ್ಲರಿಗೂ ಈ ಕುರಿತು ಮಾಹಿತಿ ನೀಡಲಾಗಿದೆ. ಬುಕ್ಕಿಗಳು ಒಡ್ಡುವ ಆಮಿಷಗಳಿಗೆ ಬಲಿಯಾಗಬೇಡಿ ಎಂದು ಎಚ್ಚರಿಸಲಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.