ADVERTISEMENT

ಪುನಃ ಮಿಂಚಿದ ಪೂನಂ

ಮಹಿಳಾ ಟಿ20 ವಿಶ್ವಕಪ್: ಭಾರತಕ್ಕೆ ಮಣಿದ ಬಾಂಗ್ಲಾ

ಪಿಟಿಐ
Published 24 ಫೆಬ್ರುವರಿ 2020, 19:45 IST
Last Updated 24 ಫೆಬ್ರುವರಿ 2020, 19:45 IST
ವಿಕೆಟ್‌ ಪಡೆದ ಖುಷಿಯಲ್ಲಿ ಪೂನಂ ಯಾದವ್‌ (ಎಡ)
ವಿಕೆಟ್‌ ಪಡೆದ ಖುಷಿಯಲ್ಲಿ ಪೂನಂ ಯಾದವ್‌ (ಎಡ)   

ಪರ್ತ್: ಆಗ್ರಾದ ಹುಡುಗಿ ಪೂನಂ ಯಾದವ್ ಸೋಮವಾರ ಮತ್ತೆ ಮಿಂಚಿದರು. ಅವರ ಲೆಗ್‌ಸ್ಪಿನ್ ಮೋಡಿಯ ಮುಂದೆ ಬಾಂಗ್ಲಾದೇಶ ಮಹಿಳಾ ತಂಡವು ತತ್ತರಿಸಿತು.

ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನಲ್ಲಿ ಭಾರತ ತಂಡವು 18 ರನ್‌ಗಳಿಂದ ಬಾಂಗ್ಲಾ ವಿರುದ್ಧ ಜಯಿಸಿತು. ತಂಡಕ್ಕೆ ಇದು ಸತತ ಎರಡನೇ ಜಯವಾಗಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಎದುರು ನಾಲ್ಕು ವಿಕೆಟ್ ಕಬಳಿಸಿದ್ದ ಪೂನಂ, ಇಲ್ಲಿ ಮೂರು ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಇದರೊಂದಿಗೆ ಭಾರತ ತಂಡವು ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯ ಅಗ್ರಸ್ಥಾನಕ್ಕೇರಿತು.

ಭಾರತ ತಂಡವು 20 ಓವರ್‌ಗಳಲ್ಲಿ 6ಕ್ಕೆ142 ರನ್‌ ಗಳಿಸಿತು. ಬಿರುಸಿನ ಬ್ಯಾಟಿಂಗ್ ಮಾಡಿದ ಶೇಫಾಲಿ ವರ್ಮಾ (39; 17ಎಸೆತ, 2ಬೌಂಡರಿ, 4ಸಿಕ್ಸರ್) ಮತ್ತು ಜೆಮಿಮಾ ರಾಡ್ರಿಗಸ್ (34; 37ಎ, 2ಬೌಂ, 1ಸಿ) ಅವರು ತಂಡವು ಹೋರಾಟದ ಮೊತ್ತ ಗಳಿಸಲು ಕಾರಣರಾದರು.

ADVERTISEMENT

ಬಾಂಗ್ಲಾ ತಂಡವು ಈ ಗುರಿಯನ್ನು ಆತ್ಮವಿಶ್ವಾಸದಿಂದಲೇ ಬೆನ್ನಟ್ಟಿತು. ಕೊನೆಯ ಓವರ್‌ನವರೆಗೂ ಹೋರಾಟ ಮಾಡಿತು. ಆದರೆ ಬೌಲರ್‌ಗಳ ಶಿಸ್ತಿನ ದಾಳಿಯಿಂದಾಗಿ ಬಾಂಗ್ಲಾ ತಂಡವು 20 ಓವರ್‌ಗಳಲ್ಲಿ 8ಕ್ಕೆ124 ರನ್‌ ಗಳಿಸಲು ಮಾತ್ರ ಶಕ್ತವಾಯಿತು.

ಆದರೆ ಎರಡನೇ ಓವರ್‌ನಲ್ಲಿ ಶಮಿಮಾ ಸುಲ್ತಾನಾ ವಿಕೆಟ್ ಗಳಿಸಿದ ಶಿಖಾ ಪಾಂಡೆ ಆರಂಭಿಕ ಆಘಾತ ನೀಡಿದರು. ಪೂನಂ ಯಾದವ್ ಅವರು ಸಂಜೀದಾ ಇಸ್ಲಾಂ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ವುಮನ್ ಫಾಹಿಮಾ ಖಾತುನ್ (17) ಮತ್ತು 18ನೇ ಓವರ್‌ನಲ್ಲಿ ಜಹಾನಾರಾ ಆಲಂ ವಿಕೆಟ್ ಕಬಳಿಸಿ ತಂಡದ ಆತ್ಮಬಲ ಹೆಚ್ಚಿಸಿದರು.

35 ರನ್‌ ಗಳಿಸಿ ತಂಡವನ್ನು ಗೆಲುವಿ ನತ್ತ ಕೊಂಡೊಯ್ಯಲು ಪ್ರಯತ್ನಿಸಿದ ನಿಜರ್ ಸುಲ್ತಾನಾ ಅವರನ್ನು 17ನೇ ಓವರ್‌ನಲ್ಲಿ ರಾಜೇಶ್ವರಿ ಗಾಯಕವಾಡ್ ಔಟ್ ಮಾಡಿದ್ದರು. ಆದರೆ, 19ನೇ ಓವರ್ ಬೌಲಿಂಗ್ ಮಾಡಿದ್ದ ರಾಜೇಶ್ವರಿ 10 ರನ್‌ಗಳನ್ನು ಬಿಟ್ಟುಕೊಟ್ಟಾಗ ಆತಂಕ ಮೂಡಿತ್ತು. ಆದರೂ ಬಾಂಗ್ಲಾ ತಂಡಕ್ಕೆ ಗೆಲುವಿಗಾಗಿ ಕೊನೆಯ ಓವರ್‌ನಲ್ಲಿ 21 ರನ್‌ಗಳ ಅಗತ್ಯವಿತ್ತು. ಮಧ್ಯಮವೇಗಿ ಶಿಖಾ ಪಾಂಡೆ ಕೇವಲ ಮೂರು ರನ್ ಕೊಟ್ಟರು ಮತ್ತು ಒಂದು ವಿಕೆಟ್ ಕೂಡ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 6ಕ್ಕೆ142 (ಶೆಫಾಲಿ ವರ್ಮಾ 39, ಜೆಮಿಮಾ ರಾಡ್ರಿಗಸ್ 34, ವೇದಾ ಕೃಷ್ಣಮೂರ್ತಿ ಔಟಾಗದೆ 20, ಸಲ್ಮಾ ಖಾತೂನ್ 25ಕ್ಕೆ2, ಪನ್ನಾ ಘೋಷ್ 25ಕ್ಕೆ2) ಬಾಂಗ್ಲಾದೇಶ: 20 ಓವರ್‌ಗಳಲ್ಲಿ 8ಕ್ಕೆ124 (ಮುರ್ಷಿದಾ ಖಾತುನ್ 30, ನಿಜಾರ್ ಸುಲ್ತಾನಾ 35, ಶಿಖಾ ಪಾಂಡೆ 14ಕ್ಕೆ2, ಅರುಂಧತಿ ರೆಡ್ಡಿ 33ಕ್ಕೆ2, ಪೂನಂ ಯಾದವ್ 18ಕ್ಕೆ3) ಫಲಿತಾಂಶ: ಭಾರತ ತಂಡಕ್ಕೆ 18 ರನ್‌ಗಳ ಗೆಲುವು. ಮುಂದಿನ ಪಂದ್ಯ: ಭಾರತ–ನ್ಯೂಜಿಲೆಂಡ್ (ಫೆ. 27. ಸ್ಥಳ: ಮೆಲ್ಬರ್ನ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.