ಸ್ಮೃತಿ ಮಂದಾನ
ದುಬೈ: ಇಂಗ್ಲೆಂಡ್ ಹಾಗೂ ವೇಲ್ಸ್ ಆತಿಥ್ಯದಲ್ಲಿ ನಡೆಯಲಿರುವ 2026ರ ಮಹಿಳಾ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇಂದು (ಬುಧವಾರ) ಬಿಡುಗಡೆಗೊಳಿಸಿದೆ.
ಜೂನ್ 12ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಶ್ರೀಲಂಕಾದ ಸವಾಲನ್ನು ಎದುರಿಸಲಿದೆ.
ಜೂನ್ 14ರಂದು ಎಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಆತಿಥ್ಯದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಲಿವೆ.
ಜೂನ್ 12ರಂದು ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿ 24 ದಿನಗಳ ಕಾಲ ನಡೆಯಲಿದೆ. ಜೂನ್ 30 ಹಾಗೂ ಜುಲೈ 2ರಂದು ಸೆಮಿಫೈನಲ್ ಪಂದ್ಯಗಳು ಮತ್ತು ಜುಲೈ 5ರಂದು ಫೈನಲ್ ಪಂದ್ಯ ನಿಗದಿಯಾಗಿದೆ.
ಏಳು ತಾಣಗಳಲ್ಲಿ ಒಟ್ಟು 33 ಪಂದ್ಯಗಳು ಆಯೋಜನೆಯಾಗಲಿವೆ. ಎಜ್‌ಬಾಸ್ಟನ್, ಹ್ಯಾಂಪ್‌ಶೈರ್ ಬೌಲ್, ಹೆಡಿಂಗ್ಲಿ, ಓಲ್ಡ್ ಟ್ರಾಫರ್ಡ್, ದಿ ಓವಲ್, ಬ್ರಿಸ್ಟಾಲ್ ಕೌಂಟಿ ಗ್ರೌಂಡ್ ಮತ್ತು ಲಾರ್ಡ್ಸ್‌ನಲ್ಲಿ ಪಂದ್ಯಗಳು ನಡೆಯಲಿವೆ.
12 ತಂಡಗಳನ್ನು ತಲಾ ಆರು ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಆರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ, ಕಳೆದ ಬಾರಿಯ ರನ್ನರ್-ಅಪ್ ದಕ್ಷಿಣ ಆಫ್ರಿಕಾ, ಭಾರತ, ಪಾಕಿಸ್ತಾನ ಮತ್ತು ಎರಡು ಕ್ವಾಲಿಫೈಯರ್ ತಂಡಗಳು ಮೊದಲ ಗುಂಪಿನಲ್ಲಿ ಸ್ಥಾನ ಪಡೆದಿವೆ.
ಎರಡನೇ ಗುಂಪಿನಲ್ಲಿ ಹಾಲಿ ಚಾಂಪಿಯನ್ ನ್ಯೂಜಿಲೆಂಡ್, ವೆಸ್ಟ್‌ಇಂಡೀಸ್, ಶ್ರೀಲಂಕಾ, ಆತಿಥೇಯ ಇಂಗ್ಲೆಂಡ್ ಮತ್ತು ಎರಡು ಕ್ವಾಲಿಫೈಯರ್ ತಂಡಗಳು ಸೇರಿವೆ.
ಎರಡೂ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ತೇರ್ಗಡೆ ಹೊಂದಲಿವೆ.
ಭಾರತದ ವೇಳಾಪಟ್ಟಿ ಇಂತಿದೆ:
ಜೂನ್ 14, 2026: ಭಾರತ vs ಪಾಕಿಸ್ತಾನ, ಎಜ್‌ಬಾಸ್ಟನ್
ಜೂನ್ 17, 2026: ಭಾರತ vs ಕ್ವಾಲಿಪೈಯರ್ ತಂಡ, ಹೆಡಿಂಗ್ಲಿ
ಜೂನ್ 21, 2026: ಭಾರತ vs ದಕ್ಷಿಣ ಆಫ್ರಿಕಾ, ಓಲ್ಡ್ ಟ್ರಾಫರ್ಡ್
ಜೂನ್ 25, 2026: ಭಾರತ vs 2ನೇ ಕ್ವಾಲಿಫೈಯರ್ ತಂಡ, ಓಲ್ಡ್ ಟ್ರಾಫರ್ಡ್
ಜೂನ್ 28, 2026: ಭಾರತ vs ಆಸ್ಟ್ರೇಲಿಯಾ, ಲಾರ್ಡ್ಸ್.
ಐಸಿಸಿ ಮಹಿಳಾ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಇದುವರೆಗೆ ಟ್ರೋಫಿ ಗೆದ್ದಿಲ್ಲ. ಅಲ್ಲದೆ ಚೊಚ್ಚಲ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ.
ಐಸಿಸಿ ಮಹಿಳಾ ಟ್ವೆಂಟಿ-20 ವಿಶ್ವಕಪ್ 2026 ವೇಳಾಪಟ್ಟಿ ಇಲ್ಲಿದೆ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.