ADVERTISEMENT

ICC Womens T20 WC: ಭಾರತ ತಂಡಕ್ಕೆ ಚೊಚ್ಚಲ ಪ್ರಶಸ್ತಿ ನಿರೀಕ್ಷೆ

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಇಂದಿನಿಂದ: ಆಸ್ಟ್ರೇಲಿಯಾ ‘ಫೇವರಿಟ್’

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 5:50 IST
Last Updated 10 ಫೆಬ್ರುವರಿ 2023, 5:50 IST
ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ವಿವಿಧ ತಂಡಗಳ ನಾಯಕಿಯರು ಟ್ರೋಫಿಯೊಂದಿಗೆ ಕಾಣಿಸಿಕೊಂಡರು –ಐಸಿಸಿ ಟ್ವಿಟರ್‌ ಚಿತ್ರ
ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ವಿವಿಧ ತಂಡಗಳ ನಾಯಕಿಯರು ಟ್ರೋಫಿಯೊಂದಿಗೆ ಕಾಣಿಸಿಕೊಂಡರು –ಐಸಿಸಿ ಟ್ವಿಟರ್‌ ಚಿತ್ರ   

ಕೇಪ್‌ಟೌನ್‌: ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಗೆ ಶುಕ್ರವಾರ ಇಲ್ಲಿ ಚಾಲನೆ ಲಭಿಸಲಿದ್ದು, ಐದು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯಾ ತಂಡ ಪ್ರಶಸ್ತಿ ಗೆಲ್ಲುವ ‘ಫೇವರಿಟ್‌’ ಎನಿಸಿಕೊಂಡಿದೆ. ಭಾರತ ತಂಡ ಚೊಚ್ಚಲ ಟ್ರೋಫಿಯ ಕನಸಿನಲ್ಲಿದೆ.

ಶುಕ್ರವಾರ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ, ಶ್ರೀಲಂಕಾ ವಿರುದ್ಧ ಪೈಪೋಟಿ ನಡೆಸಲಿದೆ.

ಇದುವರೆಗೆ ನಡೆದ ಏಳು ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ತಂಡ ಪ್ರಾಬಲ್ಯ ಸಾಧಿಸಿದೆ. 2009ರಲ್ಲಿ ನಡೆದಿದ್ದ ಚೊಚ್ಚಲ ಟೂರ್ನಿ ಹೊರತುಪಡಿಸಿ, ಇತರ ಎಲ್ಲ ಆವೃತ್ತಿಗಳಲ್ಲೂ ಫೈನಲ್ ಪ್ರವೇಶಿಸಿದೆ.

ADVERTISEMENT

ಮೆಗ್‌ ಲ್ಯಾನಿಂಗ್‌ ನಾಯಕತ್ವದ ತಂಡ ದಾಖಲೆಯ ಆರನೇ ಪ್ರಶಸ್ತಿ ಮೇಲೆ ಕಣ್ಣಿಟ್ಟು ಅಭಿಯಾನ ಆರಂಭಿಸಲಿದೆ. ಅಲೈಸ್‌ ಹೀಲಿ, ಎಲೈಸ್‌ ಪೆರಿ, ಮೇಗನ್‌ ಶುಟ್‌ ಮತ್ತು ತಹ್ಲಿಯಾ ಮೆಕ್‌ಗ್ರಾಥ್‌ ಅವರು ಆಸ್ಟ್ರೇಲಿಯಾದ ಭರವಸೆ ಎನಿಸಿದ್ದಾರೆ.

ಕಳೆದ 22 ತಿಂಗಳಲ್ಲಿ ಆಸ್ಟ್ರೇಲಿಯಾ, ಚುಟುಕು ಕ್ರಿಕೆಟ್‌ನಲ್ಲಿ ಒಂದು ಪಂದ್ಯವನ್ನು ಮಾತ್ರ ಸೋತಿದೆ. ಆ ಸೋಲು ಭಾರತದ ವಿರುದ್ಧ ಸೂಪರ್‌ ಓವರ್‌ನಲ್ಲಿ ಎದುರಾಗಿತ್ತು.

ಕಳೆದ ಬಾರಿ ರನ್ನರ್ಸ್‌ ಅಪ್‌ ಆಗಿದ್ದ ಭಾರತ ತಂಡ, ಈ ಬಾರಿ ಒಂದು ಹೆಜ್ಜೆ ಮುಂದಿಟ್ಟು ಕಿರೀಟ ಮುಡಿಗೇರಿಸಿಕೊಳ್ಳಲು ಪ್ರಯತ್ನಿಸಲಿದೆ. ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ತಂಡ ತನ್ನ ಮೊದಲ ಪಂದ್ಯದಲ್ಲಿ ಫೆ.12 ರಂದು ಪಾಕಿಸ್ತಾನದ ಸವಾಲು ಎದುರಿಸಲಿದೆ.

ತಂಡವು ಬ್ಯಾಟಿಂಗ್‌ನಲ್ಲಿ ಹರ್ಮನ್‌ ಅಲ್ಲದೆ ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ಅವರನ್ನು ಅವಲಂಬಿಸಿದೆ. 2020ರ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಭಾರತ, ಫೈನಲ್‌ನಲ್ಲಿ ನಿರಾಸೆ ಅನುಭವಿಸಿತ್ತು. ಆಸ್ಟ್ರೇಲಿಯಾ ವಿರುದ್ಧ 85 ರನ್‌ಗಳಿಂದ ಮಣಿದಿತ್ತು.

ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ತಂಡಗಳೂ ಆಸ್ಟ್ರೇಲಿಯಾಕ್ಕೆ ಪ್ರಬಲ ಪೈಪೋಟಿ ಒಡ್ಡಲು ಸಜ್ಜಾಗಿವೆ. 2009 ರಲ್ಲಿ ಕಿರೀಟ ಮುಡಿಗೇರಿಸಿದ್ದ ಇಂಗ್ಲೆಂಡ್‌ಗೆ ಆ ಬಳಿಕ ಪ್ರಶಸ್ತಿ ಗೆಲ್ಲಲು ಆಗಿಲ್ಲ. ಮೂರು ಸಲ ಫೈನಲ್ ಪ್ರವೇಶಿಸಿದ್ದರೂ, ನಿರಾಸೆ ಉಂಟಾಗಿತ್ತು.

ಹೆದರ್‌ ನೈಟ್‌ ನಾಯಕತ್ವದ ತಂಡವು ಅಲೈಸ್‌ ಕ್ಯಾಪ್ಸಿ, ಸೋಫಿ ಡಂಕ್ಲಿ, ಲಾರೆನ್‌ ಬೆಲ್‌, ಸೋಫಿ ಎಕ್ಲೆಸ್ಟೋನ್‌ ಅವರಂತಹ ಪ್ರಮುಖ ಆಟಗಾರ್ತಿಯರನ್ನು ಒಳಗೊಂಡಿದೆ. ಸೋಫಿ ಡಿವೈನ್‌ ನೇತೃತ್ವದ ನ್ಯೂಜಿಲೆಂಡ್‌ ಕೂಡಾ ಸೆಮಿಫೈನಲ್‌ ಪ್ರವೇಶಿಸುವ ನಿರೀಕ್ಷೆ ಇಟ್ಟುಕೊಂಡಿದೆ. ನ್ಯೂಜಿಲೆಂಡ್‌ ತಂಡ ಎರಡು ಸಲ ರನ್ನರ್ಸ್‌ ಅಪ್‌ ಆಗಿದೆ.

10 ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಎಲ್ಲ ತಂಡಗಳು ರೌಂಡ್‌ ರಾಬಿನ್ ಲೀಗ್‌ನಲ್ಲಿ ಆಡಲಿದ್ದು, ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಫೈನಲ್‌ ಪಂದ್ಯ ಫೆ.26 ರಂದು ನಡೆಯಲಿದೆ.

ಪಾಲ್ಗೊಳ್ಳುವ ತಂಡಗಳು: ‘ಎ’ ಗುಂಪು: ಆಸ್ಟ್ರೇಲಿಯಾ, ಬಾಂಗ್ಲಾದೇಶ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ‘ಬಿ’ ಗುಂಪು: ಭಾರತ, ಇಂಗ್ಲೆಂಡ್‌, ಐರ್ಲೆಂಡ್‌, ಪಾಕಿಸ್ತಾನ, ವೆಸ್ಟ್‌ ಇಂಡೀಸ್‌

ಇಂದಿನ ಪಂದ್ಯ: ದಕ್ಷಿಣ ಆಫ್ರಿಕಾ– ಶ್ರೀಲಂಕಾ (ಆರಂಭ: ರಾತ್ರಿ 10.30)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.