ADVERTISEMENT

ICC Women's WC | ಹೀದರ್‌ ಶತಕ, ಸೆಮಿಗೆ ಇಂಗ್ಲೆಂಡ್‌: ಭಾರತಕ್ಕೆ ಸೋಲು

ಪಿಟಿಐ
Published 19 ಅಕ್ಟೋಬರ್ 2025, 18:11 IST
Last Updated 19 ಅಕ್ಟೋಬರ್ 2025, 18:11 IST
   

ಇಂದೋರ್ : ಆರಂಭ ಆಟಗಾರ್ತಿ ಸ್ಮೃತಿ ಮಂದಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್‌ ಲಯಕ್ಕೆ ಮರಳಿ ಅರ್ಧ ಶತಕಗಳನ್ನು ಬಾರಿಸಿದರೂ ಭಾರತ ಗೆಲ್ಲಲಾಗಲಿಲ್ಲ. ಭಾನುವಾರ ಮಹಿಳಾ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಗೆಲುವಿನ ಹಾದಿಯಲ್ಲಿದ್ದ ಆತಿಥೇಯರು ಕೊನೆಗಳಿಗೆಯಲ್ಲಿ ಇಂಗ್ಲೆಂಡ್ ಬೌಲರ್‌ಗಳ ಒತ್ತಡಕ್ಕೆ ಸಿಲುಕಿ ನಾಲ್ಕು ರನ್‌ಗಳಿಂದ ಸೋತರು.

ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಮೂರನೇ ಕ್ರಮಾಂಕದ ಆಟಗಾರ್ತಿ ಹೀದರ್ ನೈಟ್‌ (109, 91ಎ, 4x15, 6x1) ಅವರ ಅಧಿಕಾರಯುತ ಶತಕದ ನೆರವಿನಿಂದ 8 ವಿಕೆಟ್‌ಗೆ 288 ರನ್ ಗಳಿಸಿತು. ಉತ್ತರವಾಗಿ ಭಾರತ ತಂಡ 6 ವಿಕೆಟ್‌ಗೆ 284 ರನ್ ಗಳಿಸಿ ಹೋರಾಟ ಮುಗಿಸಿತು.

ಒಂದು ಹಂತದಲ್ಲಿ ಉಪ ನಾಯಕಿ ಮಂದಾನ (88, 94ಎ) ಮತ್ತು ಹರ್ಮನ್‌ಪ್ರೀತ್ (70, 70ಎ) ಅವರ ಆಟದಿಂದ ಭಾರತ ಆರಂಭಿಕ ಕುಸಿತದಿಂದ ಚೇತರಿಸಿ ಉತ್ತಮ ಸ್ಥಿತಿಗೆ ತಲುಪಿತ್ತು. ಕೊನೆಯ ಐದು ಓವರುಗಳಿದ್ದಾಗ (4 ವಿಕೆಟ್‌ಗೆ 253 ರನ್‌) ಗೆಲುವಿಗೆ 36 ರನ್‌ಗಳಷ್ಟೇ ಬೇಕಿದ್ದವು. ಆದರೆ, ಈ ಹಂತದಲ್ಲಿ ಇಂಗ್ಲೆಂಡ್‌ ಚೇತರಿಸಿಕೊಂಡಿತು.

ADVERTISEMENT

ರಿಚಾ ಘೋಷ್‌ (8, 10ಎ) 46ನೇ ಓವರಿನಲ್ಲಿ ಮತ್ತು ದೀಪ್ತಿ ಶರ್ಮಾ (50, 57ಎ) 47ನೇ ಓವರಿನಲ್ಲಿ ನಿರ್ಗಮಿಸುವುದರೊಂದಿಗೆ ಆಂಗ್ಲರ ಬಳಗಕ್ಕೆ ಮೇಲುಗೈ ದೊರೆಯಿತು. ಈ ಮೊದಲು ಹರ್ಮನ್‌ಪ್ರೀತ್ ಅವರ ಮಹತ್ವದ ವಿಕೆಟ್‌ ಪಡೆದಿದ್ದ ಇಂಗ್ಲೆಂಡ್‌ ನಾಯಕಿ ನಾಟ್‌ ಶಿವರ್ ಬ್ರಂಟ್‌ (47ಕ್ಕೆ2), ರಿಚಾ ಘೋಷ್ ಅವರ ವಿಕೆಟ್‌ ಸಹ ಪಡೆದರು.

ಪ್ರತಿಕಾ ರಾವಲ್‌ ಅವರನ್ನು ಭಾರತ ಮೂರನೇ ಓವರ್‌ನಲ್ಲೇ ಕಳೆದುಕೊಂಡಿತು. ಐದು ಬೌಂಡರಿಗಳೊಡನೆ ಬಿರುಸಿನ ಆಟಕ್ಕೆ ಮುಂದಾಗಿದ್ದ ಹರ್ಲಿನ್‌ ಡಿಯೋಲ್‌ (24) ಅವರು ತಂಡದ ಮೊತ್ತ 42 ರನ್‌ ಆಗಿದ್ದಾಗ ನಿರ್ಗಮಿಸಿದರು. ಈ ವಿಶ್ವಕಪ್‌ನಲ್ಲಿ ತಲಾ ಒಂದು ಅರ್ಧಶತಕ ಬಾರಿಸಿದ್ದ ಮಂದಾನ ಮತ್ತು ಕೌರ್‌ ಈ ಹಂತದಲ್ಲಿ ಚೇತರಿಕೆ ನೀಡಿ, ಮೂರನೇ ವಿಕೆಟ್‌ಗೆ 125 ರನ್ ಸೇರಿಸಿದರು. ಆದರೆ, ಈ ಅಡಿಪಾಯದ ಮೇಲೆ ಗೆಲುವಿನ ಸೌಧ ಕಟ್ಟಲು ಉಳಿದ ಆಟಗಾರ್ತಿಯರಿಗೆ ಸಾಧ್ಯವಾಗಲಿಲ್ಲ. 

ಇದಕ್ಕೆ ಮೊದಲು, ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಇಂಗ್ಲೆಂಡ್ ತಂಡಕ್ಕೆ, 300ನೇ ಪಂದ್ಯ ಆಡಿದ ಹೀದರ್ ನೈಟ್‌ ಶತಕದ ಮೂಲಕ ಆಸರೆಯಾದರು. ಅರ್ಧ ಶತಕ ಬಾರಿಸಿದ ಆಮಿ ಜೋನ್ಸ್ (56, 68ಎ, 4X8) ಜೊತೆ ಎರಡನೇ ವಿಕೆಟ್‌ಗೆ 25 ರನ್ ಸೇರಿಸಿದ ನೈಟ್‌, ಮೂರನೇ ವಿಕೆಟ್‌ಗೆ ನಾಯಕಿ ಶಿವರ್ ಬ್ರಂಟ್‌ ಜೊತೆ ಲಗುಬಗನೇ 113 ರನ್ ಸೇರಿಸಿದರು. ಆಗ ಮೊತ್ತ 38.5 ಓವರುಗಳಲ್ಲಿ 211.‌ ಇದು ನೈಟ್‌ ಅವರಿಗೆ ಏಕದಿನ ಪಂದ್ಯಗಳಲ್ಲಿ ಮೂರನೇ ಶತಕ.

ಈ ಹಂತದಲ್ಲಿ ಇಂಗ್ಲೆಂಡ್  300 ರನ್‌ಗಳ ಗಡಿ ದಾಟುವಂತೆ ಕಂಡಿತ್ತು. ಆದರೆ ಆಫ್‌ ಸ್ಪಿನ್ನರ್ ದೀಪ್ತಿ ಶರ್ಮಾ (51ಕ್ಕೆ4) ನೇತೃತ್ವದಲ್ಲಿ ಭಾರತ ತಂಡದ ಬೌಲರ್‌ಗಳು ಅಂಗ್ಲರ ನಾಗಾಲೋಟಕ್ಕೆ ಕಡಿವಾಣ ಹಾಕಿದರು.

ಸಂಕ್ಷಿಪ್ತ ಸ್ಕೋರು:

ಇಂಗ್ಲೆಂಡ್‌: 50 ಓವರುಗಳಲ್ಲಿ 8 ವಿಕೆಟ್‌ಗೆ 288 (ಆಮಿ ಜೋನ್ಸ್ 56, ಹೀದರ್‌ ನೈಟ್‌ 109, ನಾಟ್‌ ಶಿವರ್ ಬ್ರಂಟ್‌ 38, ಚಾರ್ಲಿ ಡೀನ್ ಔಟಾಗದೇ 19; ಶ್ರೀಚರಣಿ 68ಕ್ಕೆ2, ದೀಪ್ತಿ ಶರ್ಮಾ 51ಕ್ಕೆ4); ಭಾರತ: 50 ಓವರುಗಳಲ್ಲಿ 6 ವಿಕೆಟ್‌ಗೆ 284 (ಸ್ಮೃತಿ ಮಂದಾನ 88, ಹರ್ಲೀನ್‌ ಡಿಯೋಲ್ 24, ಹರ್ಮನ್‌ಪ್ರೀತ್ ಕೌರ್‌ 70, ದೀಪ್ತಿ ಶರ್ಮಾ 50, ಅಮನ್ಜೋತ್ ಕೌರ್‌ ಔಟಾಗದೇ 18, ಸ್ನೇಹ ರಾಣಾ ಔಟಾಗದೇ 10; ನಾಟ್‌ ಶಿವರ್ ಬ್ರಂಟ್‌ 47ಕ್ಕೆ2). ಪಂದ್ಯದ ಆಟಗಾರ್ತಿ: ಹೀದರ್‌ ನೈಟ್‌

ನಾಲ್ಕನೇ ತಂಡಕ್ಕೆ ಪೈಪೋಟಿ

ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಬಳಿಕ ಇಂಗ್ಲೆಂಡ್‌ ಸೆಮಿಫೈನಲ್‌ಗೆ ಸ್ಥಾನ ಕಾದಿರಿಸಿದ ಮೂರನೇ ತಂಡವೆನಿಸಿತು. ನಾಲ್ಕನೇ ತಂಡಕ್ಕಾಗಿ ಭಾರತ ಮತ್ತು ನ್ಯೂಜಿಲೆಂಡ್‌ ನಡುವೆ ಪೈಪೋಟಿ ಏರ್ಪಟ್ಟಿದೆ. ಎರಡೂ ತಂಡಗಳಿಗೆ ತಲಾ ಎರಡು ಪಂದ್ಯಗಳು ಬಾಕಿ ಉಳಿದಿವೆ. ಇದೇ 23ರಂದು ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳು ನವಿಮುಂಬೈನಲ್ಲಿ ಮುಖಾಮುಖಿಯಾಗಲಿದ್ದು, ಈ ಪಂದ್ಯ ನಿರ್ಣಾಯಕವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.