ADVERTISEMENT

ಮಹಿಳೆಯರ ವಿಶ್ವಕಪ್ | ದಕ್ಷಿಣ ಆಫ್ರಿಕಾ ಹ್ಯಾಟ್ರಿಕ್’; ಇಂಗ್ಲೆಂಡ್‌ಗೆ ಮೂರನೇ ಆಘಾತ

ಮರಿಜಾನ್ ಕಾಪ್‌ಗೆ 5 ವಿಕೆಟ್‌; ಲಾರಾ ಅರ್ಧಶತಕ

ಏಜೆನ್ಸೀಸ್
Published 14 ಮಾರ್ಚ್ 2022, 21:34 IST
Last Updated 14 ಮಾರ್ಚ್ 2022, 21:34 IST
ದಕ್ಷಿಣ ಆಫ್ರಿಕಾದ ಮರಿಜಾನ್ ಕಾಪ್ –ಎಎಫ್‌ಪಿ ಚಿತ್ರ
ದಕ್ಷಿಣ ಆಫ್ರಿಕಾದ ಮರಿಜಾನ್ ಕಾಪ್ –ಎಎಫ್‌ಪಿ ಚಿತ್ರ   

ಮೌಂಟ್ ಮಾಂಗನೂಯಿ, ನ್ಯೂಜಿಲೆಂಡ್: ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸತತ ಮೂರನೇ ಸೋಲನುಭವಿಸಿದ್ದು ಟೂರ್ನಿಯಿಂದ ಹೊರಬೀಳುವ ಆತಂಕಕ್ಕೆ ಸಿಲುಕಿದೆ.

ಸೋಮವಾರ ನಡೆದ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಹೀದರ್ ನೈಟ್ ಬಳಗ ಮೂರು ವಿಕೆಟ್‌ಗಳಿಂದ ಸೋತಿತು. ದಕ್ಷಿಣ ಆಫ್ರಿಕಾ ಗೆಲುವಿನ ‘ಹ್ಯಾಟ್ರಿಕ್’ ಬಾರಿಸಿತು. ಆಡಿದ ನಾಲ್ಕೂ ಪಂದ್ಯಗಳಲ್ಲಿ ನಿರಾಸೆ ಕಂಡ ಪಾಕಿಸ್ತಾನ ಕೂಡ ಟೂರ್ನಿಯಿಂದ ಹೊರಬೀಳುವುದು ಬಹುತೇಕ ಖಚಿತವಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಆರಂಭಿಕ ಬ್ಯಾಟರ್ ಟಾಮಿ ಬ್ಲೂಮೌಂಟ್ (62; 97 ಎಸೆತ, 6 ಬೌಂಡರಿ) ಮತ್ತು ವಿಕೆಟ್ ಕೀಪರ್ ಆ್ಯಮಿ ಜೋನ್ಸ್ (53; 74 ಎ, 5 ಬೌಂಡರಿ) ಅವರ ಅರ್ಧಶತಕಗಳ ಬಲದಿಂದ 9ಕ್ಕೆ 235 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಪರ ಲಾರಾ ವೊಲ್ವಾರ್ಟ್ (77; 101 ಎ, 8 ಬೌಂಡರಿ) ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ADVERTISEMENT

ಲಾರಾ ಜೊತೆ ಇನಿಂಗ್ಸ್ ಆರಂಭಿಸಿದ ಲಿಜೆಲಿ ಲೀ ತಂಡದ ಮೊತ್ತ 18 ರನ್‌ಗಳಾಗಿದ್ದಾಗ ಮರಳಿದರು. ಆದರೆ ಲಾರಾ ಮತ್ತು ತಜ್ಮಿನ್ ಅವರಿಂದ ಉತ್ತಮ ಜೊತೆಯಾಟ ಮೂಡಿಬಂತು. ಎರಡನೇ ವಿಕೆಟ್‌ಗೆ ಇವರಿಬ್ಬರು 56 ರನ್‌ಗಳನ್ನು ಸೇರಿಸಿದರು.

ತಜ್ಮಿನ್ ಔಟಾದ ನಂತರ ನಾಯಕಿ ಸೂನ್ ಲೂಜ್ ಮಿಂಚಿದರು. ಲಾರಾ ಜೊತೆ ಅವರು 73 ರನ್‌ಗಳನ್ನು ಕಲೆ ಹಾಕಿದರು. 11 ರನ್‌ಗಳ ಅಂತರದಲ್ಲಿ ಇವರಿಬ್ಬರ ವಿಕೆಟ್ ಉರುಳಿದಾಗ ತಂಡದಲ್ಲಿ ಅತಂಕ ಮೂಡಿತು. ಮಿಗ್ನನ್ ಡು ಪ್ರೀಜ್ ಕೂಡ ಬೇಗನೇ ಮರಳಿದಾಗ ಇಂಗ್ಲೆಂಡ್ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತು. ಈ ಸಂದರ್ಭದಲ್ಲಿ ಮರಿಜಾನ್ ಕಾಪ್ ಅವರು ತಂಡಕ್ಕೆ ಆಸರೆಯಾದರು.

ಐದು ವಿಕೆಟ್ ಗಳಿಸಿದ ಮರಿಜಾನ್
ಮಧ್ಯಮ ವೇಗದ ಬೌಲರ್ ಮರಿಜಾನ್ ಕಾಪ್ ಬೌಲಿಂಗ್‌ನಲ್ಲೂ ಮಿಂಚಿದ್ದರು. ಅವರ ಪರಿಣಾಮಕಾರಿ ದಾಳಿಯ ನೆರವಿನಿಂದ ಇಂಗ್ಲೆಂಡ್ ತಂಡವನ್ನು ದಕ್ಷಿಣ ಆಫ್ರಿಕಾ ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿತು. ಟಾಮಿ–ಆ್ಯಮಿ ಅವರನ್ನು ಹೊರತುಪಡಿಸಿದರೆ ಉಳಿದ ಯಾರಿಗೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಅಗ್ರ ಕ್ರಮಾಂಕದ ಇಬ್ಬರು ಸೇರಿದಂತೆ ಒಟ್ಟು ಐದು ಬ್ಯಾಟರ್‌ಗಳು ಕಾಪ್‌ಗೆ ವಿಕೆಟ್ ಒಪ್ಪಿಸಿದರು.

ಬಾಂಗ್ಲಾದೇಶಕ್ಕೆ ಐತಿಹಾಸಿಕ ಜಯ
ಸಿದ್ರಾ ಅಮೀನ್ (104; 140 ಎಸೆತ, 8 ಬೌಂಡರಿ) ಅವರ ಚೊಚ್ಚಲ ಶತಕದ ಬಲದಿಂದ ಪಾಕಿಸ್ತಾನ ಗೆಲುವಿನತ್ತ ಹೆಜ್ಜೆ ಇರಿಸಿತ್ತು. ಆದರೆ ದಿಢೀರ್ ಪತನ ಕಂಡ ತಂಡ ಬಾಂಗ್ಲಾದೇಶಕ್ಕೆ 9 ರನ್‌ಗಳಿಂದ ಮಣಿಯಿತು. ಈ ಬಾರಿ ಟೂರ್ನಿಗೆ ಪದಾರ್ಪಣೆ ಮಾಡಿರುವ ಬಾಂಗ್ಲಾದೇಶ ಚೊಚ್ಚಲ ಜಯದ ಸಂಭ್ರಮದಲ್ಲಿ ಮಿಂದಿತು.

235 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನದ ಪರವಾಗಿ ಮೊದಲ ವಿಕೆಟ್‌ಗೆ ನಹಿದಾ ಖಾನ್ ಮತ್ತು ಸಿದ್ರಾ ಅಮೀನ್ 91 ರನ್‌ಗಳ ಜೊತೆಯಾಟ ಅಡಿದ್ದರು. ನಹಿದಾ ಔಟಾದ ನಂತರ ಬಿಸ್ಮಾ ಮರೂಫ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 155 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ನಂತರ ಸೋಲಿನತ್ತ ಸಾಗಿತು.

ಕೊನೆಯ ಆರು ಬ್ಯಾಟರ್‌ಗಳಿಗೆ ಎರಡಂಕಿ ಮೊತ್ತ ಗಳಿಸಲು ಆಗಲಿಲ್ಲ. ಈ ಪೈಕಿ ಮೂವರು ಶೂನ್ಯಕ್ಕೆ ಔಟಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.