ADVERTISEMENT

ಹಾರ್ದಿಕ್ ಒಂದು ಅಥವಾ ಎರಡು ಓವರ್ ಬೌಲಿಂಗ್ ಮಾಡಲು ಫಿಟ್ ಆಗಿರಬೇಕು: ಕೊಹ್ಲಿ

ಪಿಟಿಐ
Published 30 ಅಕ್ಟೋಬರ್ 2021, 17:30 IST
Last Updated 30 ಅಕ್ಟೋಬರ್ 2021, 17:30 IST
ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ
ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ   

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಕೊನೆಗೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಆರನೇ ಬೌಲಿಂಗ್ ಆಯ್ಕೆಯ ಪ್ರಾಮುಖ್ಯತೆಯನ್ನು ಮನಗಂಡಿದ್ದಾರೆ.

ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಬಗ್ಗೆ ಕೇಳಿದಾಗ, 'ಒಂದು ಅಥವಾ ಎರಡು ಓವರ್ ಬೌಲಿಂಗ್ ಮಾಡಲು ಸಾಧ್ಯವಾಗುವಂತೆ ಫಿಟ್ ಆಗಿರಬೇಕು' ಎಂದು ಉತ್ತರಿಸಿದ್ದಾರೆ.

ಪಾಕಿಸ್ತಾನ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತ ಹೀನಾಯ ಸೋಲಿಗೆ ಶರಣಾಗಿತ್ತು. ತಂಡವು ಆರನೇ ಬೌಲರ್‌ನ ಕೊರತೆಯನ್ನು ಎದುರಿಸಿತ್ತು. ಈ ನಡುವೆ ಹಾರ್ದಿಕ್ ಪಾಂಡ್ಯ ಬೌಲಿಂಗ್ ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ. ಆದರೂ ನ್ಯೂಜಿಲೆಂಡ್ ವಿರುದ್ಧ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಪಾಂಡ್ಯ ಬೌಲಿಂಗ್ ಮಾಡಲಿದ್ದಾರೆಯೇ ಎಂಬುದನ್ನು ಕೊಹ್ಲಿ ಖಚಿತಪಡಿಸಿಲ್ಲ.

'ಆರನೇ ಬೌಲಿಂಗ್ ಆಯ್ಕೆಯನ್ನು ಹೊಂದುವುದು ಬಹಳ ಮುಖ್ಯವೆನಿಸುತ್ತದೆ. ನನ್ನ ಅಥವಾ ಪಾಂಡ್ಯ ಮೂಲಕ ನಾವು ಒಂದು ಅಥವಾ ಎರಡು ಓವರ್ ಬೌಲಿಂಗ್ ಮಾಡಲು ಫಿಟ್ ಆಗಿರಬೇಕು' ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

'ಆದರೂ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಹೆಚ್ಚುವರಿ ಬೌಲರ್‌ನ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸುತ್ತೇವೆ' ಎಂದು ಹೇಳಿದ್ದಾರೆ. 'ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿದ್ದರೆ ನಾನು ಕೂಡ ಒಂದೆರಡು ಓವರ್ ಬೌಲಿಂಗ್ ಮಾಡಬಹುದಿತ್ತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ನಮಗೆ ವಿಕೆಟ್‌ಗಳು ಅಗತ್ಯವಿದ್ದಾಗ, ಪ್ರಮುಖ ಬೌಲರ್‌ಗಳು ಬೌಲಿಂಗ್ ಮಾಡಬೇಕಿತ್ತು. ಹಾಗಾಗಿ ಆರು ಬೌಲರ್ ಹೊಂದಿದ ಮಾತ್ರಕ್ಕೆ ಸೋಲುವುದಿಲ್ಲ ಎಂಬುದಲ್ಲ' ಎಂದು ಹೇಳಿದ್ದಾರೆ.

'ಹಾರ್ದಿಕ್ ಪಾಂಡ್ಯ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಖಂಡಿತವಾಗಿಯೂ ಶಾರ್ದೂಲ್ ಠಾಕೂರ್ ಕೂಡ ನಮ್ಮ ಯೋಜನೆಯಲ್ಲಿದ್ದಾರೆ. ಅವರು ತಂಡಕ್ಕೆ ಮೌಲ್ಯವನ್ನು ತರಬಲ್ಲರು. ಆದರೆ ಯಾವ ಪಾತ್ರ ನಿರ್ವಹಿಸಲಿದ್ದಾರೆ ಅಥವಾ ಹೇಗೆ ಹೊಂದಿಕೊಳ್ಳಲಿದ್ದಾರೆ ಎಂಬುದನ್ನು ಈಗ ಚರ್ಚಿಸಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.