ADVERTISEMENT

ಕರಾಚಿ ಕ್ರೀಡಾಂಗಣ ನವೀಕರಣ ಕಾರ್ಯ ವಿಳಂಬ: ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ಸ್ಥಳಾಂತರ

ಪಿಟಿಐ
Published 2 ಜನವರಿ 2025, 15:32 IST
Last Updated 2 ಜನವರಿ 2025, 15:32 IST
ಪಿಸಿಬಿ
ಪಿಸಿಬಿ   

ಕರಾಚಿ: ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ ಫೆ.19ರಂದು ಆರಂಭವಾಗಲಿದ್ದು, ಅದಕ್ಕೂ ಮುನ್ನ ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದ ನವೀಕರಣ ಕಾರ್ಯವನ್ನು ಪೂರ್ಣಗೊಳಿಸಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ  (ಪಿಸಿಬಿ) ಹರಸಾಹಸ ನಡೆಸುತ್ತಿದೆ.

ಇದೇ ಕ್ರೀಡಾಂಗಣದಲ್ಲಿ ಟೂರ್ನಿಯ ಉದ್ಘಾಟನಾ ಪಂದ್ಯ ನಿಗದಿಯಾಗಿವೆ. ಆತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಆ ವೇಳೆಗೆ ಕಾಮಗಾರಿ ‍ಪೂರ್ಣಗೊಳ್ಳುವುದು ಅನುಮಾನವಾಗಿದ್ದರಿಂದ ಇಲ್ಲಿ ನಿಗದಿಯಾಗಿದ್ದ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಪಿಸಿಬಿ ಮುಂದಾಗಿದೆ.

‘ಕ್ರೀಡಾಂಗಣದ ನವೀಕರಣ ಹಾಗೂ ನಿರ್ಮಾಣ ಕಾರ್ಯಗಳು ಪ್ರಗತಿಯಲ್ಲಿದೆ. ಕೆಲಸವು ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಆಟಗಾರರಿಗೆ ಆಚರಣೆಯಾಗಬಾರದು ಎಂಬ ಕಾರಣಕ್ಕೆ ಕರಾಚಿಯ ಕ್ರೀಡಾಂಗಣದಲ್ಲಿ (ಎನ್‌ಎಸ್‌ಕೆ) ಯಾವುದೇ ಪಂದ್ಯಗಳನ್ನು ನಡೆಸದಿರಲು ನಿರ್ಧರಿಸಲಾಗಿದೆ’ ಎಂದು ಪಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಪ್ರಥಮ ದರ್ಜೆ ಟೂರ್ನಿ ‘ಕ್ವೈಡ್–ಎ–ಅಜಂ ಟ್ರೋಫಿ’ ಫೈನಲ್‌ ಪಂದ್ಯವು ಇದೇ ಕ್ರೀಡಾಂಗಣದಲ್ಲಿ ನಿಗದಿಯಾಗಿತ್ತು. ಅದನ್ನು ಯುಬಿಎಲ್‌ ಕಾಂಪ್ಲೆಕ್ಸ್‌ ಆವರಣಕ್ಕೆ ಸ್ಥಳಾಂತರಿಸಲಾಗಿದೆ. ಆ ಟೂರ್ನಿಯು ಜ.2ರಿಂದ ಆರಂಭಗೊಂಡಿದೆ.

ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯ ಎರಡೂ ಪಂದ್ಯಗಳು ಮುಲ್ತಾನ್‌ನಲ್ಲಿ ನಡೆಯಲಿದೆ ಎಂದು ಪಿಸಿಬಿ ಪ್ರಕಟಿಸಿದೆ. ಜ.16ರಿಂದ ನಡೆಯುವ ಮೊದಲ ಪಂದ್ಯ ಕರಾಚಿಯಲ್ಲಿ ನಿಗದಿಯಾಗಿತ್ತು. ನವೀಕರಣ ಕಾರ್ಯ ವಿಳಂಬದ ಕಾರಣಕ್ಕೆ ಮುಲ್ತಾನ್‌ಗೆ ಸ್ಥಳಾಂತರಿಸಲಾಗಿದೆ. ಎರಡನೇ ಪಂದ್ಯ ಜ.24ರಂದು ಆರಂಭವಾಗಲಿದೆ.

ಕರಾಚಿಯಲ್ಲಿ ಪೂರ್ವನಿಗದಿಯಾಗದ್ದ ಕೆಲಸಗಳು ಡಿ.15ರ ಗಡುವಿನೊಳಗೆ ಮುಕ್ತಾಯವಾಗಿವೆ. ಪಿಸಿಬಿಯು ನಿರ್ಮಾಣ ಸಂಸ್ಥೆಗೆ ಹೊಸ ಕಾಮಗಾರಿಯ ಸೂಚನೆಗಳನ್ನು ನೀಡಿದ್ದರಿಂದ ವಿಳಂಬವಾಗಿದೆ ಎನ್ನಲಾಗಿದೆ.

ಲಾಹೋರ್‌, ರಾವಲ್ಪಿಂಡಿ ಸೇರಿದಂತೆ ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳು ನಡೆಯಲಿರುವ ಮೂರು ಕ್ರೀಡಾಂಗಣಗಳಲ್ಲಿ ₹1,200 ಕೋಟಿ ವೆಚ್ಚದ ನವೀಕರಣ ಮತ್ತು ನಿರ್ಮಾಣ ಕಾರ್ಯವನ್ನು ಪಿಸಿಬಿ ಕೈಗೆತ್ತಿಕೊಂಡಿದೆ.

ಕರಾಚಿಯಲ್ಲಿ ಮುಖ್ಯ ಕಟ್ಟಡ, ಡ್ರೆಸ್ಸಿಂಗ್‌ ಕೊಠಡಿಗಳು, ಮಾಧ್ಯಮ ಕೇಂದ್ರಗಳು, ಆತಿಥ್ಯ ಕೇಂದ್ರಗಳು ಹಾಗೂ ಮಂಡಳಿಗಳಿಗೆ ಪ್ರತ್ಯೇಕ ಕಚೇರಿಗಳ ನವೀಕರಣ ಮತ್ತು ನಿರ್ಮಾಣ ಕಾರ್ಯ ನಡೆಯುತ್ತಿದೆ. ಕ್ರೀಡಾಂಗಣದಲ್ಲಿ ಹೊಸ ಆಸನಗಳ ಜೊತೆಗೆ, ವಿದ್ಯುನ್ಮಾನ ಸ್ಕೋರ್‌ ಬೋರ್ಡ್‌ಗಳನ್ನು ಅಳವಡಿಸಲಾಗುತ್ತಿದೆ. ಕ್ರೀಡಾಂಗಣದ ಸುತ್ತಲಿನ ಬೇಲಿಯನ್ನೂ ಬದಲಿಸಲಾಗುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.