ADVERTISEMENT

‘ವಿಶ್ವಕಪ್‌ಗೆ ಮುನ್ನ ತಂಡ ಬಲಿಷ್ಠವಾಗಬೇಕು’

ಒಂದು ವಿಭಾಗದ ಮೇಲೆ ಅವಲಂಬನೆ ಸರಿಯಲ್ಲ: ವಿರಾಟ್

​ಪ್ರಜಾವಾಣಿ ವಾರ್ತೆ
Published 18 ಜುಲೈ 2018, 19:26 IST
Last Updated 18 ಜುಲೈ 2018, 19:26 IST
ಇಂಗ್ಲೆಂಡ್ ವಿರುದ್ಧದ ಮೂರನೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಬ್ಯಾಟಿಂಗ್ ಮಾಡಿದ ಶೈಲಿ
ಇಂಗ್ಲೆಂಡ್ ವಿರುದ್ಧದ ಮೂರನೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಬ್ಯಾಟಿಂಗ್ ಮಾಡಿದ ಶೈಲಿ   

ಲೀಡ್ಸ್‌ (ಪಿಟಿಐ): ‘ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಗೂ ಮೊದಲು ನಮ್ಮ ತಂಡವನ್ನು ಬಲಿಷ್ಠಗೊಳಿಸಬೇಕಾಗಿದೆ’ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟರು.

ಇಂಗ್ಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ 1–2ರಿಂದ ಸೋತಿತ್ತು.

ಮಂಗಳವಾರ ನಡೆದ ಕೊನೆಯ ಪಂದ್ಯದ ನಂತರ ಮಾತನಾಡಿದ ಕೊಹ್ಲಿ ‘ಈಗ ತಂಡ ಆಡುವ ರೀತಿಯನ್ನು ಗಮನಿಸಿದರೆ, ಯಾವ ವಿಭಾಗದಲ್ಲಿ ಏನೇನು ಬದಲಾವಣೆ ಆಗಬೇಕು ಎಂಬುದನ್ನು ತಿಳಿಯಲು ಸಾಧ್ಯ. ಯಾರೋ ಒಬ್ಬರ ಮೇಲೆ ಅವಲಂಬಿತ ವಾಗಬಾರದು. ಒಂದು ವಿಭಾಗದಲ್ಲಿ ಮಾತ್ರ ಪಾರಮ್ಯ ಮೆರೆದರೂ ಸಾಲದು’ ಎಂದು ಅವರು ಹೇಳಿದರು.

ADVERTISEMENT

‘ನಮ್ಮ ಆಟಗಾರರು ನಿರೀಕ್ಷೆಗೆ ತಕ್ಕಂತೆ ಬ್ಯಾಟಿಂಗ್ ಮಾಡಲಿಲ್ಲ. ತಂಡ ಇನ್ನೂ 25ರಿಂದ 30 ರನ್ ಹೆಚ್ಚು ಗಳಿಸ ಬೇಕಾಗಿತ್ತು. ಇಂಗ್ಲೆಂಡ್‌ನಂಥ ತಂಡದ ವಿರುದ್ಧ ಸೆಣಸುವಾಗ ನಾವು ಪೂರ್ಣ ಸಾಮರ್ಥ್ಯವನ್ನು ಪಣಕ್ಕಿಟ್ಟು ಆಡಬೇಕು’ ಎಂದರು.

ಕೊಹ್ಲಿ ಗರಿಷ್ಠ ರ‍್ಯಾಂಕಿಂಗ್‌: ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ಏಕದಿನ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 911 ಪಾಯಿಂಟ್ ಗಳಿಸಿದ್ದಾರೆ. ಇದು ಅವರ ಜೀವನಶ್ರೇಷ್ಠ ಸಾಧನೆಯಾಗಿದೆ. ಇದು ಸಾರ್ವಕಾಲಿಕ ಎರಡನೇ ದಾಖಲೆಯಾಗಿದೆ. ಅತಿ ಹೆಚ್ಚು ಪಾಯಿಂಟ್ ಗಳಿಸಿದ ಶ್ರೇಯ ಆಸ್ಟ್ರೇ ಲಿಯಾದ ಡೀನ್ ಜಾನ್ಸ್ ಅವರದ್ದಾಗಿದೆ. ಅವರು 1991ರಲ್ಲಿ 918 ಪಾಯಿಂಟ್‌ ಗಳಿಸಿದ್ದರು. ಬೌಲರ್‌ಗಳ ಪಟ್ಟಿಯಲ್ಲಿ ಚೈನಾಮನ್ ಕುಲದೀಪ್ ಯಾದವ್‌ ಆರನೇ ಸ್ಥಾನ ಗಳಿಸಿದ್ದಾರೆ.

ಬ್ಯಾಟ್ಸ್‌ಮನ್‌ಗಳ ಪೈಕಿ ಇಂಗ್ಲೆಂಡ್‌ನ ಜೋ ರೂಟ್‌ ಎರಡನೇ ಸ್ಥಾನ ಗಳಿಸಿದ್ದಾರೆ. 34 ಪಾಯಿಂಟ್‌ಗಳ ಏರಿಕೆಯೊಂದಿಗೆ 819 ಪಾಯಿಂಟ್ ಗಳಿಸಿರುವ ಅವರು ಪಾಕಿಸ್ತಾನದ ಬಾಬರ್ ಅಜಮ್‌, ಭಾರತದ ರೋಹಿತ್ ಶರ್ಮಾ, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್‌ ಮತ್ತು ನ್ಯೂಜಿಲೆಂಡ್‌ನ ರಾಸ್ ಟೇಲರ್ ಅವರನ್ನು ಹಿಂದಿಕ್ಕಿದ್ದಾರೆ.

ಒತ್ತಡದಲ್ಲಿದ್ದೆ: ಶಾರ್ದೂಲ್ ಠಾಕೂರ್

‘ಇಂಗ್ಲೆಂಡ್‌ನಂಥ ತಂಡದ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಕಣಕ್ಕೆ ಇಳಿದಿದ್ದರಿಂದ ಗಾಬರಿಗೊಂಡಿದ್ದೆ’ ಎಂದು ವೇಗದ ಬೌಲರ್ ಶಾರ್ದೂಲ್ ಠಾಕೂರ್‌ ತಿಳಿಸಿದರು.

‘ಒತ್ತಡವಿದ್ದಾಗ ಅದನ್ನು ಮೆಟ್ಟಿನಿಲ್ಲುವ ಜವಾಬ್ದಾರಿ ಆಟಗಾರನ ಮೇಲೆ ಇರುತ್ತದೆ. ಕೆಲವೊಮ್ಮೆ ಅದು ಫಲ ನೀಡುತ್ತದೆ. ಕೆಲವೊಮ್ಮೆ ಪೂರಕ ಫಲಿತಾಂಶ ಸಿಗುವುದಿಲ್ಲ. ಇಂಗ್ಲೆಂಡ್‌ ವಿರುದ್ಧದ ಸರಣಿಯ ಏಕೈಕ ಪಂದ್ಯದಲ್ಲಿ ನನಗೆ ಅವಕಾಶ ಲಭಿಸಿತ್ತು. ಹೀಗಾಗಿ ತಂಡವನ್ನು ಗೆಲ್ಲಿಸಲೇಬೇಕು ಎಂಬ ನಿರ್ಧಾರ ಮಾಡಿ ಕಣಕ್ಕೆ ಇಳಿದಿದ್ದೆ. ಆದರೆ ದುರದೃಷ್ಟದಿಂದ ಅದು ಸಾಧ್ಯವಾಗಲಿಲ್ಲ’ ಎಂದು ಅವರು ಹೇಳಿದರು.

ಬದಲಾವಣೆಗೆ ಗಂಗೂಲಿ ಅಸಮಾಧಾನ

ನವದೆಹಲಿ (ಪಿಟಿಐ): ಕೆ.ಎಲ್‌.ರಾಹುಲ್ ಮತ್ತು ಅಜಿಂಕ್ಯ ರಹಾನೆ ಅವರನ್ನು ಕಡೆಗಣಿಸಿ ಭಾರತ ತಂಡದ ಆಡಳಿತವು ಪ್ರಯೋಗಗಳನ್ನು ಮಾಡಿದ್ದು ಸರಿಯಲ್ಲ ಎಂದು ಹಿರಿಯ ಕ್ರಿಕೆಟಿಗ ಸೌರವ್ ಗಂಗೂಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ತಂಡವು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಶಿಖರ್‌ ಧವನ್‌, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೇಲೆ ಅವಲಂಬಿತವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ನಿರಂತರ ಬದಲಾವಣೆಗಳನ್ನು ಮಾಡುತ್ತಿರುವುದರಿಂದ ಅಗ್ರ ಕ್ರಮಾಂಕದ ಮೇಲೆ ಒತ್ತಡ ಬೀಳುತ್ತಿದೆ. ಈ ಸಮಸ್ಯೆಯನ್ನು ಮೆಟ್ಟಿ ನಿಲ್ಲಬೇಕಾದರೆ ಇಂಗ್ಲೆಂಡ್‌ನಂಥ ತಂಡವನ್ನು ಕಟ್ಟಬೇಕು’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.